ಸಮಾಜದಲ್ಲಿ ಜಾತಿ ವ್ಯವಸ್ಥೆಯ ತಾಂಡವ

27 mlv 4
Published on

ಮಳವಳ್ಳಿ: ಹನ್ನೆರಡನೇ ಶತಮಾನದ ದಾರ್ಶನಿಕ ಬಸವಣ್ಣ ಜನರ ನಡುವಿನ ಸಮಾನತೆಗಾಗಿ ಕ್ರಾಂತಿ ನಡೆಸಿದರಾದರೂ ಪ್ರಸ್ತುತ ಜಾತೀಯತೆ ಹೋಗಲಾಡದಿರುವುದಕ್ಕೆ ನೋವು ಕಾಡುತ್ತಿದೆ ಎಂದು ಬೆಂಗಳೂರಿನ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಮಠಾಧ್ಯಕ್ಷ ಶ್ರೀ ನಿಶ್ಚಲಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ವಿಶ್ವಗುರು ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶತಮಾನಗಳ ಹಿಂದೆಯೇ ಮನುಕುಲದ ಸಮಾನತೆಗಾಗಿ ಬಸವೇಶ್ವರರು ಜಾತಿ ತಾರತಮ್ಯ ವಿರೋಧಿಸಿ ಎಲ್ಲ ವರ್ಗದವರಿಗೂ ಲಿಂಗ ದೀಕ್ಷೆ ನೀಡುವ ಮೂಲಕ ಹೋರಾಟದ ಕಿಚ್ಚು ಹಚ್ಚಿದ್ದರು. ಆದರೆ ಅಂದಿನ ದಾರ್ಶನಿಕರನ್ನು ಈ ಒಂದೊಂದು ಜಾತಿಗೆ ಸೀಮಿತಗೊಳಿಸಿ ಜನಮನವನ್ನು ಕಲುಶಿತಗೊಳಿಸಲಾಗುತ್ತಿದೆ. ಇಂದಿನ ಈ ವ್ಯವಸ್ಥೆ ಬಗ್ಗೆ ನನಗೆ ಆಕ್ರೋಶವಿದೆ ಎಂದರು.

ಬುದ್ಧ, ಬಸವ, ಗಾಂಧಿ ಆದರ್ಶಗಳನ್ನು ಮನುಕುಲ ಪಾಲಿಸಿದ್ದರೆ ದಾರ್ಶನಿಕರ ಜಯಂತಿ ಅಗತ್ಯವಿರುತ್ತಿರಲಿಲ್ಲ. ಜಾತಿ ಎಂಬ ದುಷ್ಟ ಪದ್ಧತಿ ಮನುಷ್ಯರ ನಡುವಿನ ಘರ್ಷಣೆಗೆ ಕಾರಣವಾಗುತ್ತಿರುವಾಗ ದೇಶ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲು ಹೇಗೆ ಸಾಧ್ಯ ಎಂದ ಅವರು, ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದುಕೊಂಡು ಪ್ರಯೋಗಾತ್ಮಕ ಕಾರ್ಯ ಮಾಡಿದ್ದರು. ಆದರೆ ಅಂದಿನ ಕಿಡಿಗೇಡಿಗಳ ಹುನ್ನಾರದಿಂದ ಬಸವಣ್ಣನವರ ಹೋರಾಟಕ್ಕೆ ಹಿನ್ನಡೆಯಾಯಿತು ಎಂದು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ನಿಷ್ಠೆಯಿಂದ ದುಡಿಯುವ ವರ್ಗ ಕಡಿಮೆಯಾಗುತ್ತಿದೆ. ಇಂದಿನ ಯುವ ಪೀಳಿಗೆ ಶೋಕಿಗೆ ಮಾರು ಹೋಗುವುದರ ಜತೆಗೆ ಸಿನಿಮಾ ನಟರನ್ನು ಆದರ್ಶರನ್ನಾಗಿಸಿಕೊಳ್ಳುತ್ತಿರುವುದು ವಿಪರ್ಯಾಸ. ಆ ಮೂಲಕ ಶೇ.60 ರಷ್ಟು ದುಡಿಯುವ ವರ್ಗ ಕಡಿಮೆಯಾಗುತ್ತಿರುವುದು ಆತಂಕ ಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಡಾ.ಆರ್.ಶಿವಕುಮಾರ ದಂಡಿನ್, ವಚನ ಸಾಹಿತ್ಯದ ಮೂಲಕ ವಿಶ್ವದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದವರು ಬಸವಣ್ಣ. ಭಾರತದ ಮಣ್ಣಿನಲ್ಲಿ ಜನಿಸಿದ ಬುದ್ಧ, ಅಂಬೇಡ್ಕರ್ ಸೇರಿದಂತೆ ಹಲವಾರು ದಾರ್ಶನಿಕರು ವಿಶ್ವ ಇರುವವರೆಗೂ ಸ್ಮರಣೀಯರಾಗಿರುತ್ತಾರೆ ಎಂದರು.

ಮಂಡ್ಯ ಜಿಲ್ಲೆ ಸಾಂಸ್ಕೃತಿಕ ನೆಲೆಗಟ್ಟನ್ನು ಕಂಡಿರುವ ನಾಡು. ಈ ಜಾಗದಲ್ಲಿ ನನಗೆ ಸೇವೆ ಸಲ್ಲಿಸಲು ಅವಕಾಶ ದೊರೆತಿದ್ದು ನನ್ನ ಪುಣ್ಯ. ಬಸವ ಜಯಂತಿಯನ್ನು ಆಚರಿಸದರೆ ಸಾಲದು. ಬದಲಾಗಿ ಅವರ ತತ್ವ ಆದರ್ಶಗಳನ್ನು ಪಾಲಿಸಿದಾಗ ಬದುಕಿಗೊಂದು ಅರ್ಥ ಸಿಗಲಿದೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾದ ಕೆ.ಎಸ್.ಪ್ರಕಾಶ್, ಕೃಷ್ಣೇಗೌಡ, ಡಾ.ವೀರಭದ್ರಪ್ಪ, ಡಾ.ಬಿ.ಎಂ. ಮಾಲಾ ಅವರನ್ನು ಅಭಿನಂದಿಸಲಾಯಿತು. ಮೈಸೂರಿನ ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹಾಗೂ ರೂಪಾ ಕುಮಾರಸ್ವಾಮಿ ಉಪನ್ಯಾಸ ನೀಡಿದರು. ಸೊಸೈಟಿ ಅಧ್ಯಕ್ಷ ಎಂ.ಜಿ.ರಂಗಸ್ವಾಮಿ, ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ಸಂಸ್ಥಾಪಕ ನಿರ್ದೇಶಕ ಕೆ.ಎಸ್.ಗುರುಪ್ರಸಾದ್, ಬಿಇಒ ಉಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net