

ಪವಿತ್ರಾ ಕುಂದಾಪುರ ಬೆಂಗಳೂರು
ಕರುನಾಡಲ್ಲಿ ‘ಹುಲಿ ಉಗುರು’ ಆರ್ಭಟದ ಬಳಿಕ ವನ್ಯಜೀವಿಗಳ ಅಂಗಾಂಗ ಸಂಗ್ರಹ ವಿಚಾರದಲ್ಲಿ ಭಯಭೀತರಾಗಿದ್ದವರಿಗೆ ಹೈಕೋರ್ಟ್ ಕೊಂಚ ನಿರಾಳತೆ ನೀಡಿದೆ. 2003ಕ್ಕಿಂತ ಮುಂಚೆ ಆನುವಂಶಿಕವಾಗಿ ವನ್ಯಜೀವಿ ಅಂಗಾಂಗಗಳನ್ನು ಪಡೆದಿದ್ದರೆ ಅದಕ್ಕೆ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಮಹತ್ವದ ಆದೇಶ ಹೊರಡಿಸಿದೆ. ಇದರಿಂದ ಆನುವಂಶಿಕವಾಗಿ ವನ್ಯಮೃಗಗಳ ಅಂಗಾಂಗಳನ್ನು ಹೊಂದಿರುವವರು ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೆ, ಕಾಡುಪ್ರಾಣಿಗಳನ್ನು ಬೇಟೆಯಾಡಿ, ಅದರಿಂದ ವಸ್ತುಗಳ ತಯಾರಿಸಿ ಇಟ್ಟುಕೊಂಡಿದ್ದರಷ್ಟೇ ಅಪರಾಧವಾಗುತ್ತದೆ ಎಂದೂ ಸ್ಪಷ್ಟಪಡಿಸಿದೆ.
ಚಿತ್ರಮಂದಿರದಲ್ಲಿ ಪೂರ್ವಾನುಮತಿ ಪಡೆಯದೇ ಆನೆ ತಲೆ ಮತ್ತು ಕಾಡೆಮ್ಮೆ ತಲೆಯ ಟ್ರೋಫಿಯನ್ನು ಅನುಮತಿ ಪಡೆಯದೆ ಇಟ್ಟುಕೊಂಡಿರುವ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮೈಸೂರಿನ ಸರಸ್ವತಿಪುರ ನಿವಾಸಿ ತೀರ್ಥಪ್ರಸಾದ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್‌ಗೌಡ ಅವರ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 39ರ ಪ್ರಕಾರ, ಕಾಡುಪ್ರಾಣಿಗಳನ್ನು ಬೇಟೆಯಾಡುವುದು, ಸೆರೆಯಲ್ಲಿರಿಸಿ ಬೆಳೆಸುವುದು, ಸತ್ತು ಬಿದ್ದಿರುವುದು ಹಾಗೂ ಆಕಸ್ಮಿಕವಾಗಿ ಹತ್ಯೆಗೀಡಾದ ಪ್ರಾಣಿಗಳಿಂದ ತಯಾರಿಸಿದ ಅಂಗಾಂಗಳನ್ನು ಸಂಗ್ರಹಿಸಿಡುವುದು ಅಪರಾಧ. ಅದು ಸರ್ಕಾರದ ಸ್ವತ್ತಾಗುತ್ತದೆ. ಅಲ್ಲದೆ, ಸೆಕ್ಷನ್ 39 (1) (ಎ) ಮತ್ತು (ಬಿ) ಅನ್ವಯ ಕಾಡುಪ್ರಾಣಿಯನ್ನು ಬೇಟೆಯಾಡಿ, ಅದರಿಂದ ವಸ್ತುಗಳನ್ನು ತಯಾರಿಸಿಟ್ಟುಕೊಂಡಾಗ ಮಾತ್ರ ಕಾನೂನು ಉಲ್ಲಂಘನೆಯಾಗಿ ಅಪರಾಧವಾಗುತ್ತದೆ. ಈ ಪ್ರಕರಣದಲ್ಲಿ ಅರ್ಜಿದಾರನಾಗಲಿ ಅಥವಾ ಆತನ ತಂದೆಯಾಗಲಿ ಪ್ರಾಣಿಗಳನ್ನು ಬೇಟೆಯಾಡಿ ಅದರಿಂದ ವನ್ಯಜೀವಿ ಟ್ರೋಫಿಯನ್ನು ತಯಾರಿಸಿಲ್ಲ ಎಂಬುದು ತಿಳಿಯುತ್ತದೆ ಹೈಕೋರ್ಟ್ ಹೇಳಿದೆ.
ಆದೇಶದಲ್ಲೇನಿದೆ?
ಪ್ರಕರಣದಲ್ಲಿ ಅರ್ಜಿದಾರರು ಪೂರ್ವಾನುಮತಿ ಪಡೆಯದೇ ಆನೆ, ಕಾಡೆಮ್ಮೆಗಳ ಅಂಗಾಂಗಳನ್ನು ಪ್ರದರ್ಶನ ಮಾಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿದೆ. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯು 1972ರಲ್ಲಿ ಜಾರಿಗೆ ಬಂದಿದೆ. ಆರೋಪಿಯೂ 1968ರಲ್ಲಿ ಅವರ ತಂದೆ ನಿಧನದ ಬಳಿಕ ‘ವನ್ಯಜೀವಿ ಟ್ರೋಫಿ’ ಪಡೆದುಕೊಂಡಿದ್ದಾರೆ. ಅಲ್ಲದೆ, ಸಾಕ್ಷಾೃಧಾರಗಳ ಅನುಸಾರ ಟ್ರೋಫಿಯೂ ಬಹಳ ವರ್ಷ ಹಳೆಯದು ಎನ್ನುವುದು ತಿಳಿದುಬರುತ್ತದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ಸೆಕ್ಷನ್ 40 ( 2ಬಿ)ಅನ್ನು 2003ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. ಇದರ ಪ್ರಕಾರ 2003 ಏ.1ರ ನಂತರ ಯಾವುದೇ ‘ವನ್ಯ ಜೀವಿ ಟ್ರೋಫಿ’ಯನ್ನು ಆನುವಂಶಿಕವಾಗಿ ಪಡೆಯುವ ಪ್ರತಿಯೊಬ್ಬ ವ್ಯಕ್ತಿಯು 90 ದಿನಗೊಳಗೆ ಈ ಬಗ್ಗೆ ಅಧಿಕೃತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎಂಬ ನಿಯಮವಿದೆ.
ಆದರೆ, 2003ಕ್ಕಿಂತ ಮೊದಲು ಈ ನಿಯಮ ಅನ್ವಯವಾಗುವುದಿಲ್ಲ. ಪ್ರಸ್ತುತ ಪ್ರಕರಣದಲ್ಲಿ ಆರೋಪಿಯೂ 2003ಕ್ಕಿಂತ ಮೊದಲು ಟ್ರೋಫಿ ಪಡೆದಿದ್ದಾನೆ. ಹಾಗಾಗಿ ಅವರು ಪೂರ್ವಾನುಮತಿ ಖಡ್ಡಾಯವಾಗಿ ಪಡೆದಿರಬೇಕು ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟು, ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.
ಅರ್ಜಿದಾರರ ವಾದವೇನು?
ವನ್ಯಜೀವಿಯ ತಲೆಯ ಭಾಗದಿಂದ ರಚಿತವಾದ ಟ್ರೋಫಿಯನ್ನು ಚಿತ್ರಮಂದಿರದಲ್ಲಿ ಇರಿಸಲಾಗಿದೆ ಎನ್ನುವುದು ಸತ್ಯ. ಆದರೆ, ಇದು ಬಹಳ ಪುರಾತನ ಕಾಲದ್ದಾಗಿದೆ. ಅವರು ಅಕ್ರಮವಾಗಿ ಎಲ್ಲಿಂದಲೋ ಖರೀದಿ ಮಾಡಿರುವುದಲ್ಲ. 1968ರಲ್ಲಿ ಅರ್ಜಿದಾರರ ತಂದೆಯ ನಿಧನದ ಬಳಿಕ ಅವರು ಬಳುವಳಿಯಾಗಿ ಸಿಕ್ಕಿದೆ. ಈ ಬಗ್ಗೆ ತನಿಖಾಧಿಕಾರಿಗಳ ಬಳಿಯೂ ಸತ್ಯಾಂಶವನ್ನು ಮುಕ್ತವಾಗಿ ಒಪ್ಪಿಕೊಳ್ಳಲಾಗಿದೆ. ಹಾಗಾಗಿ ಪ್ರಕರಣವನ್ನು ರದ್ದುಗೊಳಿಸಬೇಕು.
ಸರ್ಕಾರದ ವಾದವೇನು?
ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ವನ್ಯಜೀವಿ ಟ್ರೋಫಿ ಪ್ರದರ್ಶನಕ್ಕಿಟ್ಟಿದ್ದಾರೆ. ಈ ಮೂಲಕ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧ ಎಸಗಿದ್ದು, ಶಿಕ್ಷೆಗೆ ಅರ್ಹರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಬೇಕು.
ಪ್ರಕರಣವೇನು?
2009ರ ಡಿ.3ರಂದು ಮೈಸೂರಿನ ‘ಶ್ರೀ ಚಾಮುಂಡೇಶ್ವರಿ ಚಲನಚಿತ್ರ ಮಂದಿರ’ದಲ್ಲಿ 8 ಲಕ್ಷ ರೂ. ಬೆಲೆ ಬಾಳುವ ಆನೆ ತಲೆ ಹಾಗೂ 2 ಲಕ್ಷ ಮೌಲ್ಯದ ಕಾಡೆಮ್ಮೆ ತಲೆಯಿಂದ ರಚಿಸಲಾದ ಟ್ರೋಫಿಗಳನ್ನು ಪ್ರದರ್ಶನಕ್ಕಿಟ್ಟಿರುವ ಮಾಹಿತಿ ಮೇರೆಗೆ ಪೊಲೀಸರು ಜಪ್ತಿ ಮಾಡಿ, ದೂರು ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.