

ಬೆಂಗಳೂರು: ಕಳ್ಳತನ ಮಾಡಲೆಂದು ಬಂದ ಯುವಕನೊಬ್ಬ ಚಾಕು ಹಿಡಿದು ಬೆದರಿಸಲು ಹೋಗಿ ತಾನೇ ಕೊಲೆಯಾಗಿರುವ ಘಟನೆ ಚಂದ್ರಾಲೇಔಟ್‌ನ ಬಾಪೂಜಿ ಲೇಔಟ್‌ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಾಪೂಜಿ ಲೇಔಟ್ ನಿವಾಸಿ ಖಾದೀರ್ ಅಹಮ್ಮದ್(೨೯) ಕೊಲೆಯಾದ ಯುವಕ. ಕೃತ್ಯ ಎಸಗಿದ ರಾಜೇಂದ್ರ ಪ್ರಸಾದ್ ಎಂಬಾತನನ್ನು ಬಂಧಿಸಲಾಗಿದೆ.
ಬಾಪೂಜಿ ಲೇಔಟ್‌ನ ೯ನೇ ಕ್ರಾಸ್‌ನಲ್ಲಿ ಆರೋಪಿ ರಾಜೇಂದ್ರ ಪ್ರಸಾದ್ ಹೊಸದಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ.
ಸೆ.೨೫ ರಂದು ಖಾದೀರ್ ಅಹಮ್ಮದ್ ಮತ್ತು ಆತನ ಸ್ನೇಹಿತ ನಿರ್ಮಾಣ ಹಂತದ ಮನೆ ಬಳಿ ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಆಗ ಸ್ಥಳಕ್ಕೆ ಬಂದ ರಾಜೇಂದ್ರ ಪ್ರಸಾದ್, ಆರೋಪಿಗಳನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಮನೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕನೊಬ್ಬ ಖಾದೀರ್ ಮತ್ತು ಆತನ ಸ್ನೇಹಿತನನ್ನು ಕಂಡು ಈ ಹಿಂದೆಯೂ ಇವರು ಕಳ್ಳತನ ಮಾಡಿದ್ದರು ಎಂದು ಹೇಳಿದ್ದ. ಆಗ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಖಾದೀರ್ ಅಹಮ್ಮದ್ ತನ್ನ ಬಳಿಯಿದ್ದ ಚಾಕುವಿನಿಂದ ರಾಜೇಂದ್ರ ಪ್ರಸಾದ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಆರೋಪಿಯು ಖಾದೀರ್‌ನಿಂದ ಚಾಕು ಕಸಿದುಕೊಂಡಿದ್ದಾನೆ. ಅದರಿಂದ ಆಕ್ರೋಶಗೊಂಡ ಖಾದೀರ್ ಮತ್ತು ಆತನ ಸ್ನೇಹಿತ ಸ್ಥಳದಲ್ಲಿದ್ದ ಸಲಾಕೆಯಿಂದ ರಾಜೇಂದ್ರ ಪ್ರಸಾದ್‌ಗೆ ಹೊಡೆಯಲು ಮುಂದಾಗಿದ್ದಾರೆ. ಆಗ ಆರೋಪಿ ರಾಜೇಂದ್ರ, ಖಾದೀರ್‌ನ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದ ಖಾದೀರ್ ಕಂಡ ಆತನ ಸ್ನೇಹಿತ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ರಾಜೇಂದ್ರ ಪ್ರಸಾದ್ ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.