

ಶಿವಮೊಗ್ಗ: ವಚನಕಾರರಾಗಿದ್ದ ಸರ್ವಜ್ಞ ಮಹಾಜ್ಞಾನಿಯೂ ಆಗಿದ್ದರು. ತ್ರಿಪದಿ ವಚನಗಳ ಮೂಲಕ ಸಮಾಜದ ಅಂಕು-ಡೊಂಕು ತಿದ್ದುತ್ತಾ ಸಮಾನತೆ ಪ್ರತಿಪಾದಿಸಿದ್ದರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಕುಂಬಾರರ ಸಂಘದಿಂದ ಗುರುವಾರ ಏರ್ಪಡಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಡಿಕೆ ಮಾಡುವುದು ಶ್ರೇಷ್ಠವಾದ ಕಲೆ. ಗಣೇಶ ಮೂರ್ತಿ ರೂಪಿಸುವ ಈ ಸಮುದಾಯದಲ್ಲಿ ಜನಿಸಿದ್ದ ಸರ್ವಜ್ಞರ ತ್ರಿಪದಿ ನಿತ್ಯದ ಬದುಕಿಗೆ ಬಹುಪಯೋಗಿಯಾಗಿದೆ ಎಂದರು.
ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆ ಸಲ್ಲದು ಎಂಬುದನ್ನು ಪ್ರತಿಪಾದಿಸಿದವರು ಸರ್ವಜ್ಞ. ಬಸವಣ್ಣನವರ ಪ್ರತಿಪಾದಕರಾಗಿದ್ದರು. ಅವರ ವಚನಗಳಿಂದಲೂ ಸರ್ವಜ್ಞ ಪ್ರಭಾವಿತಗೊಂಡಿದ್ದರು. ಆದರೆ 12ನೇ ಶತಮಾನದ ವಚನಕಾರರಿಗೆ ಸಿಕ್ಕಷ್ಟು ಪ್ರೋತ್ಸಾಹ ಸರ್ವಜ್ಞ ಅವರಿಗೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಂಬಾರ ಸಮಾಜ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದಿದೆ. ಈ ಜನಾಂಗದ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಹಿಂದುಳಿದ ವರ್ಗಗಳು ಜಾಗೃತಗೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಾಗರ ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಎಸ್.ಎನ್.ಪಾಲಾಕ್ಷಪ್ಪ ಮಾತನಾಡಿ, ಸಮಾಜದಲ್ಲಿ ಜಾಗೃತಿ ಮೂಡಿಸಿದ ಮಹಾಜ್ಞಾನಿ ಸರ್ವಜ್ಞ. ತ್ರಿಪದಿ ಬ್ರಹ್ಮ ಎಂದು ಕರೆಯಿಸಿಕೊಳ್ಳುವ ಇವರು ಸಮಾಜದ ಅಂಕು ಡೊಂಕು ತಿದ್ದಿದ ದಾರ್ಶನಿಕ. ಉತ್ತಂಗಿ ಚನ್ನ್ನಪ್ಪನವರು ಸರ್ವಜ್ಞನ ಎರಡು ಸಾವಿರಕ್ಕೂ ಅಧಿಕ ತ್ರಿಪದಿಗಳನ್ನು ಸಂಗ್ರಹಿಸುವ ಮೂಲಕ ಮಹತ್ಕಾರ್ಯ ಮಾಡಿದ್ದಾರೆ ಎಂದು ಹೇಳಿದರು. ಸರ್ವಜ್ಞ 16ನೇ ಶತಮಾನದಲ್ಲಿ ತ್ರಿಪದಿ ಶೈಲಿಯಲ್ಲಿ ವಚನವನ್ನು ಪರಿಣಾಮಕಾರಿಯಾಗಿ ರಚಿಸಿದ್ದಾರೆ. ಕನಕದಾಸ, ಪುರಂದರದಾಸರ ಪ್ರಭಾವಕ್ಕೆ ಒಳಗಾದ ಇವರ ವಚನಗಳು ವಚನ-ದಾಸ-ಜಾನಪದ ಸಾಹಿತ್ಯದ ಎರಕ ಹೊಯ್ದಂತಿವೆ. ಸಮಾಜವನ್ನು ಎಚ್ಚರಿಸುವ ಕೆಲಸವನ್ನು ತ್ರಿಪದಿಗಳಿಂದ ಮಾಡಿದ್ದಾರೆ ಎಂದರು.
ಆಹಾರ, ಆರೋಗ್ಯ, ಹೆಣ್ಣು, ಗುರು-ಶಿಷ್ಯರ ಬಾಂಧವ್ಯ, ಭಕ್ತಿ, ವಿಜ್ಞಾನ ಹೀಗೆ ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಅವರು ಹೇಳದ ವಿಷಯಗಳಿಲ್ಲ. ಸರ್ವಜ್ಞನ ಜ್ಞಾನವನ್ನು ಆಸ್ವಾದಿಸಬೇಕು ಎಂದು ಬೇಂದ್ರೆ ಬಣ್ಣಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸರ್ವಜ್ಞ ಅವರ ತ್ರಿಪದಿಗಳ ವಾಚನ, ಕಂಠಪಾಠ ಸ್ಪರ್ಧೆಗಳನ್ನು ಏರ್ಪಡಿಸಬೇಕು ಎಂದು ಹೇಳಿದರು.
ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಮಾತನಾಡಿ, ಭಾರತದಾದ್ಯಂತ ಪಾದಯಾತ್ರೆಯ ಮೂಲಕ ತಿರುಗಾಡಿ ಸಮಾಜದಲ್ಲಿನ ದೋಷಗಳನ್ನು ತಿದ್ದುವ ಕೆಲಸವನ್ನು ಸರ್ವಜ್ಞ ಮಾಡಿದ್ದಾರೆ. ಕುಂಬಾರ ಅಭಿವೃದ್ಧಿ ನಿಗಮದಲ್ಲಿ ಸಮಾಜದ ವ್ಯಕ್ತಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು. ಸಮುದಾಯ ಭವನ ನಿರ್ಮಾಣ, ಸರ್ವಜ್ಞನ ಕಂಚಿನ ಪ್ರತಿಮೆ ಸ್ಥಾಪಿಸುವಂತೆ ಮನವಿ ಮಾಡಿದರು.
ಶಿವಮೊಗ್ಗ ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಎಸ್.ಮಣಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಕುಂಬಾರ ಸಮಾಜದ ಪ್ರಮುಖರಾದ ಭಾಗ್ಯಲಕ್ಷ್ಮೀ, ಗಣೇಶಪ್ಪ ಮುಂತಾದವರಿದ್ದರು.