ಸಕ್ಕರೆ ಕಾರ್ಖಾನೆ ಜಾಗ ಸರ್ವೆಗೆ ಬಂದ ಅಧಿಕಾರಿಗಳಿಗೆ ಮುತ್ತಿಗೆ

Sugar Factory Area
ಮಲವಗೊಪ್ಪ ಗ್ರಾಮದಲ್ಲಿ ಸರ್ವೆಗೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರನ್ನು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಅವರು ಮನವೊಲಿಸುವ ಪ್ರಯತ್ನ ಮಾಡಿದರು. ಎಸಿ ಸತ್ಯನಾರಾಯಣ ಜತೆಗಿದ್ದರು.
Published on

ಶಿವಮೊಗ್ಗ: ಸಕ್ಕರೆ ಕಾರ್ಖಾನೆ ಜಾಗದಿಂದ ಒಕ್ಕಲೆಬ್ಬಿಸುವುದನ್ನು ತಡೆಯುವಂತೆ ಒತ್ತಾಯಿಸಿ ಶಿವಮೊಗ್ಗ ತಾಲೂಕು ಸಕ್ಕರೆ ಕಾರ್ಖಾನೆ ಕಾರ್ಮಿಕರು ಮತ್ತು ರೈತರ ಭೂ ಹಕ್ಕು ಹೋರಾಟ ಸಮಿತಿ ಪದಾಧಿಕಾರಿಗಳ ಹೋರಾಟದ ನಡುವೆಯೂ ಕಂದಾಯ ಅಧಿಕಾರಿಗಳು ಶುಕ್ರವಾರ ಸರ್ವೆಗೆ ತೆರಳಿದ್ದು ಮಲವಗೊಪ್ಪ ಗ್ರಾಮದಲ್ಲಿ ಗೊಂದಲ ಸೃಷ್ಟಿಸಿತ್ತು. ಗ್ರಾಮಸ್ಥರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ವೆ ಕಾರ್ಯ ರದ್ದುಗೊಳಿಸಿದ ಅಧಿಕಾರಿಗಳು ಬರಿಗೈಯಲ್ಲೇ ಮರಳಿದ್ದು ಗ್ರಾಮಸ್ಥರಿಗೆ ತಾತ್ಕಲಿಕ ರಿಲೀಫ್ ಸಿಕ್ಕಂತಾಯಿತು.

ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರ ಭದ್ರತೆಯಲ್ಲಿ ಶುಗರ್ ಫ್ಯಾಕ್ಟರಿ ಜಾಗ ಸರ್ವೆ ಮಾಡಲು ಬಂದಿದ್ದ ಕಂದಾಯ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು, ನೋಟೀಸ್ ನೀಡಿ ಸರ್ವೆ ಮಾಡಬೇಕೆಂದು ಪಟ್ಟುಹಿಡಿದರು. ಸರ್ವೆ ವಿಷಯ ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಒಟ್ಟಿಗೆ ಸೇರಿ ಸರ್ವೆ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಮಲವಗೊಪ್ಪದ ಶುಗರ್ ಫ್ಯಾಕ್ಟರ್ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಮತ್ತು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ ವಿರೋಧ ಹೆಚ್ಚಾಗುತ್ತಿದ್ದಂತೆ ಸರ್ವೆಯನ್ನು ನಿಲ್ಲಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರಿಂದ ಪ್ರತಿಭಟನೆಯಿಂದ ಗ್ರಾಮಸ್ಥರು ಹಿಂದೆ ಸರಿದರು.
ಸಕ್ಕರೆ ಕಾರ್ಖಾನೆ ಜಾಗದಿಂದ ರೈತರನ್ನು ಒಕ್ಕಲೆಬ್ಬಿಸದಂತೆ ಹಾಗೂ ಮದ್ರಾಸ್ ಹೈಕೋರ್ಟ್ ನಿರ್ಧಾರವನ್ನು ಮರು ಪರಿಶೀಲಿಸಲು ಮೇಲ್ಮನವಿ ಸಲ್ಲಿಸುವಂತೆ ಶಿವಮೊಗ್ಗ ತಾಲೂಕಿನ ಯರಗನಾಳು, ಸದಾಶಿವಪುರ ಮತ್ತು ಮಲವಗೊಪ್ಪ ಸುತ್ತಮುತ್ತ ಗ್ರಾಮಗಳ ನಿವಾಸಿಗಳು ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಹಲವು ದಿನ ಹೋರಾಟ ಮಾಡಿದ್ದರು. ಇದೀಗ ಸರ್ವೆ ಕಾರ್ಯಕ್ಕೆ ಮುಂದಾಗಿದ್ದರಿಂದ ಆತಂಕಗೊಂಡ ಗ್ರಾಮಸ್ಥರು ಅಧಿಕಾರಗಳ ವಿರುದ್ಧವೇ ಮುಗಿಬಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net