ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಳ

cm 24 mar 20
Published on

ಬೆಂಗಳೂರು: ಇಡೀ ಜಗತ್ತಿಗೆ ಮಾರಕವಾಗಿ ಕಾಡುತ್ತಿರುವ ಕರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ. ಸೋಮವಾರ-ಮಂಗಳವಾರ ಎರಡೇ ದಿನದಲ್ಲಿ ಕರ್ನಾಟಕದಲ್ಲಿ 16 ಜನರಲ್ಲಿ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.

ಮತ್ತೊಂದೆಡೆ ಕರೊನಾ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರಿನ ಮೂವರು ಸಂಪೂರ್ಣ ಗುಣಮುಖರಾಗಿದ್ದು, ಮಂಗಳವಾರ ಅವರನ್ನು ಡಿಸ್ಚಾರ್ಜ್ ಮಾಡಿರುವುದು ಕೊಂಚ ನಿರಾಳತೆ ಮೂಡಿಸಿದೆ. ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 42ಕ್ಕೆ ಏರಿದೆ. ಈವರೆಗೆ ರಾಜ್ಯದಲ್ಲಿ 1,27,41 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. 198 ಜನರಲ್ಲಿ ಸೋಂಕಿರುವ ಲಕ್ಷಣಗಳಿದ್ದು, ಐಸೋಲೇಷನ್ ವಾರ್ಡ್​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿತರ 42 ಪ್ರಕರಣಗಳ ಪೈಕಿ 6 ಪ್ರಕರಣಗಳು ಕೇರಳಕ್ಕೆ ಹೋಗಬೇಕಿದ್ದ ಪ್ರಯಾಣಿಕರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹಿನ್ನೆಲೆಯಲ್ಲಿ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸೋಂಕಿತರ ಜತೆಗೆ ನೇರ ಸಂಪರ್ಕ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿರುವವರನ್ನು ಗುರುತಿಸಿ ಅವರ ಎಡಗೈಗೆ ಮುದ್ರೆ ಹಾಕಲಾಗುತ್ತಿದೆ.

ಸೋಂಕಿತ-34: ಕೇರಳ ಕಾಸರಗೋಡು ಮೂಲದ 32 ವರ್ಷದ ವ್ಯಕ್ತಿಗೆ ಕರೊನಾ ಸೋಂಕಿರುವುದು ದೃಢಪಟ್ಟಿದೆ. ಈತ ದುಬೈನಿಂದ ಮಾರ್ಚ್ 20ಕ್ಕೆ ಮಂಗಳೂರಿಗೆ ಬಂದಿದ್ದ. ಕರೊನಾ ಲಕ್ಷಣಗಳು ಕಂಡು ಬಂದಿದ್ದರಿಂದ ಮಂಗಳೂರು ವಿಮಾನ ನಿಲ್ದಾಣದಿಂದಲೇ ಆತನನ್ನು ನಿಯೋಜಿತ ಆಸ್ಪತ್ರೆಗೆ ಕಳುಹಿಸಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಂಕಿತ-35: ಉತ್ತರಕನ್ನಡ ಜಿಲ್ಲೆಯ 40 ವರ್ಷದ ವ್ಯಕ್ತಿಗೆ ಕರೊನಾ ಸೋಂಕು ತಗುಲಿದೆ. ಇವರು ಮಾ.21ಕ್ಕೆ ದುಬೈನಿಂದ ಭಾರತಕ್ಕೆ ಬಂದಿದ್ದರು. ತಪಾಸಣೆಯಲ್ಲಿ ಸೋಂಕಿನ ಲಕ್ಷಣಗಳಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಂಕಿತ-36: ಉತ್ತರಕನ್ನಡ ಜಿಲ್ಲೆಯ 65 ವರ್ಷದ ವ್ಯಕ್ತಿ ಕರೊನಾ ಪೀಡಿತರಾಗಿದ್ದಾರೆ. ಮಾ.18ರಂದು ದುಬೈನಿಂದ ಮುಂಬೈಗೆ ಬಂದು ರೈಲಿನಲ್ಲಿ ಉತ್ತರಕನ್ನಡಕ್ಕೆ ಪ್ರಯಾಣ ಮಾಡಿದ್ದರು. ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು.

ಸೋಂಕಿತ-37: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತೊಂದು ಕರೊನಾ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಸೋಂಕಿತರಾಗಿರುವ ಕುಟುಂಬ ಸದಸ್ಯರಾದ ರೋಗಿ-19 ಮತ್ತು ರೋಗಿ-22 ಅವರ ಜತೆ ಮೆಕ್ಕಾ ಪ್ರವಾಸಕ್ಕೆ ಹೋಗಿ ಬಂದಿದ್ದ 56 ವಯಸ್ಸಿನ ಮಹಿಳೆಯಲ್ಲಿ ಈಗ ಸೋಂಕು ಕಂಡುಬಂದಿದೆ. ಮಾ.14ರಂದು ಹೈದರಾಬಾದ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಇಡೀ ಕುಟುಂಬವನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ಕೊಡಲಾಗುತ್ತಿತ್ತು. ಈಗ ಮೂವರಲ್ಲಿ ಸೋಂಕು ದೃಢಪಟ್ಟಿದೆ.

ಸೋಂಕಿತ-38: ಬೆಂಗಳೂರಿನ 56 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಈಕೆ ಈಗಾಗಲೆ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವ 13ನೇ ರೋಗಿಯ ಸಂಪರ್ಕದಲ್ಲಿದ್ದ ಕಾರಣಕ್ಕೆ ಸೋಂಕು ತಟ್ಟಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತ-39: ಕೇರಳ ಕಾಸರಗೋಡಿನ 47 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಈತ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ. ರೋಗ ಲಕ್ಷಣಗಳು ಕಂಡುಬಂದಿದ್ದರಿಂದ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಸೋಂಕಿತ-40: ಕೇರಳ ಕಾಸರಗೋಡಿನ 70 ವರ್ಷದ ವೃದ್ಧೆಯಲ್ಲಿ ಕರೊನಾ ಸೋಂಕಿರುವುದು ದೃಢಪಟ್ಟಿದೆ. ಈಕೆ ಸೌದಿ ಅರೇಬಿಯಾಗೆ ಭೇಟಿ ಕೊಟ್ಟು ವಾಪಸ್ ಮಂಗಳೂರಿಗೆ ಬಂದಿದ್ದರು. ಮಂಗಳೂರು ವಿಮಾನ ನಿಲ್ದಾಣದ ತಪಾಸಣೆ ವೇಳೆ ರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ನಿಯೋಜಿತ ಆಸ್ಪತ್ರೆಗೆ ಸ್ಥಳಾಂತರಿಸಿ ನಿಗಾ ವಹಿಸಲಾಗಿತ್ತು.

ಸೋಂಕಿತ-41: ಕಾಸರಗೋಡಿನ 23 ವರ್ಷದ ಯುವಕನಿಗೂ ಕರೊನಾ ಸೋಂಕಿರುವುದು ದೃಢಪಟ್ಟಿದೆ. ಈತ ಮಾ.20ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಸೋಂಕಿತ 42: ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದಕ್ಕೆ ವಿದೇಶದಿಂದ ಬಂದಿರುವ 37 ವರ್ಷದ ಮಹಿಳೆಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ಮಹಿಳೆ ಗಯಾನದಿಂದ ಹೊಸದಿಲ್ಲಿಗೆ ತನ್ನಿಬ್ಬರು ಪುತ್ರರ ಜತೆ ಬಂದು ಅಲ್ಲಿಂದ ತಂದೆ ಜತೆಗೆ ಗ್ರಾಮಕ್ಕೆ ಆಗಮಿಸಿದ್ದರು. ಮಹಿಳೆ, ಮಹಿಳೆಯ ತಂದೆ, ಇಬ್ಬರು ಸಂಬಂಧಿಕರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಮೂವರ ಸ್ಯಾಂಪಲ್ ನೆಗೆಟಿವ್ ಇದ್ದು, ಮಹಿಳೆಯಲ್ಲಿ ಮಾತ್ರ ಸೋಂಕು ಕಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net