

ನವದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ ಇತ್ತೀಚೆಗಷ್ಟೇ ಜಪಾನ್ ಹಿಂದಿಕ್ಕಿ ನಾಲ್ಕನೇ ಸ್ಥಾನ ಅಲಂಕರಿಸಿದ ಭಾರತವೀಗ ಮತ್ತೊಂದು ಸಾಧನೆ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಕಳೆದ 11 ವರ್ಷದಲ್ಲಿ ಭಾರತದಲ್ಲಿನ ಕಡುಬಡವರ ಸಂಖ್ಯೆ ಶೇ.27.1ರಿಂದ ಶೇ.5.3ಕ್ಕೆ ಇಳಿದಿರುವುದನ್ನು ವಿಶ್ವಬ್ಯಾಂಕ್ ವರದಿ ಬಹಿರಂಗಪಡಿಸಿದೆ.
2011-12 ರಲ್ಲಿ ಭಾರತದಲ್ಲಿನ ಕಡು ಬಡವರ ಸಂಖ್ಯೆ ಶೇ.27.1 ರಷ್ಟಿತ್ತು. 2022-23ರ ಹೊತ್ತಿಗೆ ಈ ಪ್ರಮಾಣ ಶೇ. 5.3 ಕ್ಕೆ ಇಳಿಕೆಯಾಗಿದೆ. 2011-12ರಲ್ಲಿ ದೇಶದಲ್ಲಿ ಒಟ್ಟು 34.44 ಕೋಟಿ ಜನರು ಕಡು ಬಡವರಾಗಿದ್ದರು. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಕಡು ಬಡವರ ಪ್ರಮಾಣ ಹೆಚ್ಚಿತ್ತು. ದೇಶದ ಒಟ್ಟು ಕಡುಬಡವರಲ್ಲಿ ಶೇ.65 ರಷ್ಟು ಬಡವರು ಈ ರಾಜ್ಯಗಳಲ್ಲಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ 11 ವರ್ಷದಲ್ಲಿ 26.9 ಕೋಟಿ ಜನರು ಕಡುಬಡತನದಿಂದ ಹೊರಬಂದಿದ್ದು, 2022-23 ರಲ್ಲಿ 7.52 ಕೋಟಿ ಜನರು ಮಾತ್ರ ಕಡು ಬಡವರಾಗಿದ್ದರು ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.
ಅಗತ್ಯ ಸೇವೆ ಬಳಕೆ ಹೆಚ್ಚಳ: ವಿಶ್ವ ಬ್ಯಾಂಕ್ ಕೆಳ ಮಧ್ಯಮ ಆದಾಯದ ದೇಶಗಳಲ್ಲಿ (ಎಲ್ಎಂಐಸಿ) ಬಡತನದ ರೇಖೆಯನ್ನು 3.65 ಡಾಲರ್ನಿಂದ 4.2 ಡಾಲರ್ಗೆ ಏರಿಸಿದೆ. ಈ ಮಾನದಂಡದ ಅಡಿಯಲ್ಲೂ ಭಾರತದಲ್ಲಿ ಗಮನಾರ್ಹ ಪ್ರಗತಿ ಕಂಡು ಬಂದಿದ್ದು, ಈ ರೇಖೆಯಡಿ ಬಡವರ ಪ್ರಮಾಣ 2011-12 ರಲ್ಲಿ ಶೇ. 57.7 ರಷ್ಟು ಇದ್ದದ್ದು 2022-23ರಲ್ಲಿ ಶೇ. 23.9ಕ್ಕೆ ಇಳಿಕೆಯಾಗಿದೆ.
ವಿಶ್ವಬ್ಯಾಂಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿನದ ಆದಾಯ 3 ಡಾಲರ್ಗಿಂತ (2021ರ ಬೆಲೆ ಆಧರಿಸಿ) ಕಡಿಮೆ ಇರುವವರನ್ನು ಕಡು ಬಡವರು ಎಂದು ಗುರುತಿಸಿದೆ. ಇನ್ನು ಈ ಹಿಂದೆ 2017ರಲ್ಲಿ ಗುರುತಿಸಿದ್ದಂತೆ ದಿನದ ಆದಾಯ 2.15 ಡಾಲರ್ ಗಿಂತ ಕಡಿಮೆ ಆದಾಯ ಹೊಂದಿರುವವರ ಪ್ರಮಾಣ ದೇಶದಲ್ಲಿ ಶೇ. 16.2ರಿಂದ ಶೇ. 2.3ಕ್ಕೆ ಇಳಿಕೆ ಕಂಡಿದೆ. 11 ವರ್ಷದ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಕಡು ಬಡವರ ಪ್ರಮಾಣ ಶೇ. 18.4ರಿಂದ ಶೇ. 2.8ಕ್ಕೆ ತಗ್ಗಿದ್ದರೆ, ನಗರ ಪ್ರದೇಶದಲ್ಲಿ ಕಡು ಬಡವರ ಸಂಖ್ಯೆ ಶೇ. 10.7 ರಿಂದ ಶೇ. 1.1 ಕ್ಕೆ ಇಳಿದಿದೆ.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಬಡತನ ನಿಮೂಲನೆಗಾಗಿ ಹಲವು ಕ್ರಮ ತೆಗೆದುಕೊಂಡಿದ್ದು, ಹತ್ತಾರು ಯೋಜನೆಗಳನ್ನು ಘೋಷಿಸಿದ್ದರು. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನಾ, ಪ್ರಧಾನ ಮಂತ್ರಿ ಉಜ್ವಲ ಯೋಜನಾ, ಜನ ಧನ್ ಯೋಜನಾ ಮತ್ತು ಆಯುಷ್ಮಾನ್ ಭಾರತ್ನಂತಹ ಯೋಜನೆಗಳು ಜನರಿಗೆ ಮನೆ, ಇಂಧನ, ಬ್ಯಾಂಕಿಂಗ್ ಸೌಲಭ್ಯ ಮತ್ತು ಆರೋಗ್ಯ ಸೌಲಭ್ಯವನ್ನು ಒದಗಿಸಿದೆ. ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ನೇರವಾಗಿ ನೆರವು ತಲುಪಿಸುವ ಕಾರ್ಯಕ್ರಮದಿಂದಾಗಿ ಪಾರದರ್ಶಕತೆ ಹೆಚ್ಚಿದ್ದು, ವೇಗವಾಗಿ ಸರ್ಕಾರದ ನೆರವು ಜನರನ್ನು ತಲುಪುತ್ತಿದೆ. ಕಡುಬಡತನ ಕಡಿಮೆಯಾಗುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಎಲ್ಎಂಐಸಿ ಬಡತನ ರೇಖೆಗಿಂತ ಕೆಳಗಿರುವವರ ಭಾರತೀಯರ ಸಂಖ್ಯೆ 73.24 ಕೋಟಿಯಿಂದ 34.23 ಕೋಟಿಗೆ ಇಳಿಕೆಯಾಗಿದೆ. ಇದು ದೇಶದಲ್ಲಿ ಗೃಹ ಬಳಕೆ ಉತ್ಪನ್ನಗಳ ಬಳಕೆ ಮತ್ತು ಅಗತ್ಯ ಸೇವೆಗಳ ಬಳಕೆಯಲ್ಲಿ ಹೆಚ್ಚಳ ಕಂಡು ಬಂದಿರುವುದನ್ನು ತೋರುತ್ತಿದೆ.
ಎಂಪಿಎ ಕುಸಿತ: ಕೇಂದ್ರ ಸರ್ಕಾರದ ಕ್ರಮಗಳಿಂದಾಗಿ ದೇಶದಲ್ಲಿ ಬಹು ಆಯಾಮದ ಬಡತನ ಸೂಚ್ಯಂಕ (ಎಂಪಿಐ) 2005-06 ರಲ್ಲಿ ಶೇ. 53.8 ಇದ್ದದ್ದು, 2019-21 ರಲ್ಲಿ ಶೇ. 16.4 ಕ್ಕೆ ಹಾಗೂ 2022-23 ರಲ್ಲಿ ಶೇ. 15.5 ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.