

ಆ ರಾಜರುಗಳು ಪ್ರಯತ್ನಿಸಿ ವಿಫಲರಾಗಿದ್ದರು. ಸೀತೆಯನ್ನು ಅಂತಹವರಿಗೆ ಮದುವೆ ಮಾಡಿಕೊಡುವುದಿಲ್ಲವೆಂದು ಜನಕ ಮಹಾರಾಜನು ಹೇಳಿದಾಗ, ಅವರಿಗೆಲ್ಲ ಇದೊಂದು ಅವಮಾನವಾಗಿ ಕಂಡಿತು. ಸಾಧಾರಣರು ಅಸಾಧಾರಣವಾದ ಸವಾಲನ್ನೆ ದುರಿಸಿ ವಿಫಲರಾದರೆ ತಮ್ಮಲ್ಲಿ ಆ ಅರ್ಹತೆಯಿಲ್ಲವೆಂದು ಒಪ್ಪುವ ಬದಲು ಸವಾಲೇ ಸರಿಯಲ್ಲವೆಂದು ವಾದಿಸುವುದುಂಟು. ಅದು ಅವರ ಅಸಾಮರ್ಥ್ಯದ ಸೂಚಕ. ಅವರು ಹಾಕಿದ ಮುತ್ತಿಗೆಯನ್ನೆದುರಿಸಿದ ಜನಕರಾಜನು ಕೊನೆಗೆ ದೇವತೆಗಳ ಸಹಾಯದಿಂದ ಅವರೆಲ್ಲರನ್ನೂ ಸದೆಬಡಿಯುವಂತಾಯಿತು. ಈಗ ರಾಮನಿಗೆ ಆ ಮಹಾಧನುಸ್ಸನ್ನು ಜನಕನು ತೋರಿಸಲೊಪ್ಪಿದನು.
ಆ ಧನುಸ್ಸನ್ನಿಟ್ಟಿದ್ದ ಎಂಟು ಚಕ್ರಗಳುಳ್ಳ ಪೆಟ್ಟಿಗೆಯನ್ನು ಕಷ್ಟದಿಂದ ಎಳೆದು ತರಲು 5000 ಮಂದಿ ಕಟ್ಟಾಳುಗಳು ಬೇಕಾದರೆಂದು ವಾಲ್ಮೀಕಿಗಳು ವರ್ಣಿಸುತ್ತಾರೆ. ಜನಕಮಹಾರಾಜನಿಗೆ ಈ ರಾಜ ಕುಮಾರರಿಂದ ಅದನ್ನು ಅಲ್ಲಾಡಿಸುವುದೂ ಸಾಧ್ಯವಾಗದೆಂದೇ ಮನಸ್ಸಿನಲ್ಲಿದ್ದುದು. ರಾಮನು ವಿಶ್ವಾಮಿತ್ರರ ಅನುಜ್ಞೆ ಪಡೆದು, ಆ ಮಹಾಧನುಸ್ಸನ್ನು ಹತ್ತಿರದಿಂದ ನೋಡಿ, ತಾನು ಅದನ್ನು ಎತ್ತಲು ಪ್ರಯತ್ನಿಸುತ್ತೇನೆಂದನು. ಎಲ್ಲರೂ ನೋಡನೋಡುತ್ತಲೇ ಅದರ ಮಧ್ಯವನ್ನು ಹಿಡಿದು ಅನಾಯಾಸವಾಗಿ ಎತ್ತಿದ್ದಲ್ಲದೆ ಅದರ ಹೆದೆಯೇರಿಸಿದನು. ತನ್ನ ಕಿವಿಯವರೆಗೆ ಹೆದೆಯನ್ನು ಎಳೆದಾಗ ಆ ಮಹಾಧನುಸ್ಸು ಸಿಡಿಲಿನಂತಹ ಆರ್ಭಟ ಮಾಡಿ ಮುರಿದುಬಿದ್ದಿತು. ಇಲ್ಲಿಗೆ ಸೀತೆಯನ್ನು ವರಿಸಲು ಬೇಕಾದ ವೀರ್ಯಶುಲ್ಕವನ್ನು ಶ್ರೀರಾಮನು ಪೂರೈಸಿದಂತಾಯಿತು. ಜನಕಮಹಾರಾಜನ ಹರ್ಷಕ್ಕೆ ಪಾರವೇ ಇರಲಿಲ್ಲ!
ಇಲ್ಲಿ ನಮಗೆ ಬರುವ ಒಂದು ಪ್ರಶ್ನೆ ಇದು. ಶಿವನೇ ಪ್ರಯೋಗಿಸಿದ್ದ ಈ ಮಹಾಧನುಸ್ಸನ್ನು ಅತ್ತ ದೇವತೆಗಳೂ ಯಕ್ಷರೂ ಅಸುರರೂ ಯಾರಿಗೂ ಅಲ್ಲಾಡಿಸಲೇ ಆಗದಾಗಿತ್ತು. ಅದಿರುವ ಪೆಟ್ಟಿಗೆಯನ್ನು ಕೇವಲ ಎಳೆದುಕೊಂಡು ಬರಲು 5000 ದಷ್ಟಪುಷ್ಟರಾದವರು ಕಷ್ಟಪಡಬೇಕಿತ್ತು. ಇತ್ತ ಇನ್ನೂ ಎಳೆಯ ವಯಸ್ಸಿನ ಮಾನವ ರಾಜ ಕುಮಾರನಾಗಿದ್ದ ಶ್ರೀರಾಮನು ಅಪ್ರಯತ್ನದಿಂದಲೋ ಎಂಬಂತೆ (ಎಂದರೆ ಬಹಳ ಪ್ರಯತ್ನವೇ ಪಡದೆ) ಎತ್ತಿದ್ದಲ್ಲದೆ ಮುರಿದೂ ಬಿಟ್ಟ. ಇದು ಹೇಗೆ ಸಾಧ್ಯ? ಅದು ಭಾರವಿದ್ದರೆ, ‘ಆತ್ಮಾನಂ ಮಾನುಷಂ ಮನ್ಯೇ’ ಎಂದು ಮುಂದೆಯೂ ಹೇಳಿಕೊಳ್ಳುವ ರಾಮನಿಗೇನು ಅಷ್ಟು ಅತಿಮಾನುಷವಾದ ದೈಹಿಕ ಶಕ್ತಿಯಿತ್ತೆಂದೇ?
ಇದನ್ನು ಹೀಗೆ ನೋಡಬಹುದೆನ್ನಿಸುತ್ತದೆ. ಆ ಧನುಸ್ಸಿನ ಭಾರ ಭೌತಿಕವಾದದ್ದಲ್ಲ. ಅದಕ್ಕಿದ್ದುದು ತಪೋಭಾರ. ಮಹಾದೇವನು ದಕ್ಷಯಜ್ಞವನ್ನು ಧ್ವಂಸ ಮಾಡುವಾಗ ಹಿಡಿದಿದ್ದ ಧನುಸ್ಸಿನ ಬಲವೇನು ಸಾಮಾನ್ಯವೇ? ಶಿವನ ತಪೋಬಲದ ಪ್ರತೀಕವೂ ಆಗಿದ್ದದ್ದು ಅದು. ಬೇರೆ ಯಾರಿಗೇ ಆಗಲಿ ಅದಕ್ಕೆ ಸಮನಾದ ಶಕ್ತಿ ಇರುತ್ತದೆಂದೆಣಿಸುವುದು ಅಸಾಧ್ಯ. ಇತ್ತ ರಾಮನಾದರೋ ಸಾಕ್ಷಾದ್ ವಿಷ್ಣುವೇ. ಮಹಾದೇವನ ತಪಸ್ಸಿನ ತೂಕಕ್ಕೆ ಪಡಿತೂಕವಾಗಲು ಸಾಧ್ಯವಿದ್ದದ್ದು ವಿಷ್ಣುವಿನ ಅವತಾರಕ್ಕೆ ಮಾತ್ರವೇ. ಶಿವನೂ ವಿಷ್ಣುವೂ ಒಂದೇ ತತ್ತ್ವದ ಎರಡು ರೂಪ ಗಳಾಗಿದ್ದರಿಂದ ರಾಮನಿಗೆ ಮಾತ್ರ ಇದು ಸಾಧ್ಯವಾದದ್ದರಲ್ಲಿ ಆಶ್ಚರ್ಯವಿಲ್ಲ. ನಮ್ಮಲ್ಲಿ ಹಲವು ವಿಷ್ಣುಭಕ್ತರು ಶಿವನನ್ನು ಕೀಳಾಗಿ ಕಾಣುವುದೋ, ಶಿವಭಕ್ತರು ವಿಷ್ಣುವನ್ನು ಕೆಳದರ್ಜೆಯೆಂದೆಣಿ ಸುವುದೋ ಸರಿಯೇ ಅಲ್ಲ. ಶಿವ-ವಿಷ್ಣುಗಳು ಒಂದೇ ತತ್ತ್ವವೆಂದು ಒತ್ತಿ ಹೇಳಲು ಶ್ರೀರಂಗಮಹಾಗುರುಗಳು ಈ ಉದಾಹರಣೆ ಕೊಡುತ್ತಿದ್ದರು: ಯಜಮಾನನು ವೇಷಾಂತರದಲ್ಲಿ ಬಂದರೂ ನಾಯಿಯು ಅವನ ಗುರುತುಹಿಡಿದುಬಿಡುತ್ತದೆ. ಹಾಗೆಯೇ ಪರತತ್ತ್ವವು ಯಾವ ರೂಪದಲ್ಲಿ ಬಂದರೂ ಭಕ್ತನಾದವನು ಅದನ್ನು ಗುರುತಿಸಬೇಕು. ಈ ಮಾತುಗಳಿಂದ ಈ ಸಂನಿವೇಶದ ಹಿಂದಿನ ತತ್ತ್ವವನ್ನು ನಾವು ಅರ್ಥ ಮಾಡಿಕೊಳ್ಳಬಹುದಲ್ಲವೆ?