

ಸಾಗರ: ದುಷ್ಟರಿಗೆ ಶಿಕ್ಷೆ, ಶಿಷ್ಟರ ರಕ್ಷಣೆ ದಸರಾ ಹಬ್ಬದ ಪ್ರಮುಖ ಸಂದೇಶ. ನವದುರ್ಗೆಯರು ನಾಡನ್ನು ರಕ್ಷಣೆ ಮಾಡುವ ಸಲುವಾಗಿ ಮಹಿಷಾಸುರನನ್ನು ಮರ್ದನ ಮಾಡುವ ವಿಶೇಷ ಸಂದರ್ಭ ಇದು ಎಂದು ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಹೇಳಿದರು.
ಸಾಗರದ ಪ್ರವಾಸಿ ಮಂದಿರದ ಬಳಿ ಇರುವ ಬನ್ನಿಕಟ್ಟೆಯಲ್ಲಿ ಶನಿವಾರ ತಾಲೂಕು ಆಡಳಿತದಿಂದ ಸೀಮೋಲ್ಲಂಘನಾ ಶಾಸ್ತ್ರ ನೆರವೇರಿಸಿ ಮಾತನಾಡಿದರು.
ಮೈಸೂರು ದಸರಾ ದೇಶಕ್ಕೇ ಮಾದರಿ. ನಾಡಿನಾದ್ಯಂತ ಅತ್ಯಂತ ಅದ್ದೂರಿಯಾಗಿ ನಾಡಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಾಗೆಯೇ ಸಾಗರದಲ್ಲಿ ಬಹಳ ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗಿದೆ ಎಂದರು.
ವಿಜಯದಶಮಿ ದಿನ ವಿವಿಧ ದೇವಸ್ಥಾನದ ಪಲ್ಲಕ್ಕಿಗಳು ಒಂದೆ ಕಡೆ ಸಮಾಗಮಗೊಂಡು ಮೆರವಣಿಗೆ ಮೂಲಕ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವುದು ಅವಿಸ್ಮರಣೀಯ ಕ್ಷಣ. ಅಕ್ಕಪಕ್ಕದ ಊರುಗಳ ಜನರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಾಂಸ್ಕೃತಿಕ, ಸಾಹಿತ್ಯಿಕ ಜತೆಗೆ ಧಾರ್ಮಿಕವಾಗಿಯೂ ತನ್ನದೇ ಮಹತ್ವದ ಹೊಂದಿದೆ ಎಂದು ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಮಹಾಗಣಪತಿ ದೇವಾಲಯದ ಪ್ರಧಾನ ಅರ್ಚಕ ಪಿ.ಎಲ್.ಗಜಾನನ ಭಟ್, ಸುಧೀಂದ್ರ ಜೋಯಿಸ್, ಹರ್ಷವರ್ಧನ್ ಭಟ್, ಗಣಪತಿ ಮಂಡಗಳಲೆ, ಅರವಿಂದರಾಯ್ಕರ್, ವಿವಿಧ ದೇವಸ್ಥಾನದ ಪ್ರಮುಖರು ಹಾಜರಿದ್ದರು.