ಅಮಾಯಕ ಹೆಣ್ಣುಮಗಳ ದುರದೃಷ್ಟ

Untitled design (19)
Published on
ಡಾ. ಡಿ.ವಿ. ಗುರುಪ್ರಸಾದ್ (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ಜಿಲ್ಲಾ ಕೇಂದ್ರಕ್ಕೆ 12 ಕಿ.ಮೀ. ದೂರದ ಗ್ರಾಮವೊಂದರ ರೈತ ರಾಮಪ್ಪನಿಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದರು. ಮೊದಲನೆಯ ಮಗಳಿಗೆ ಲಗ್ನವಾಗಿದ್ದು, ಎರಡನೆಯ ಮಗಳು ಕುಸುಮಾ ಪಿ.ಯು.ಸಿ.ವರೆಗೆ ಓದಿ ಜಿಲ್ಲಾ ಕೇಂದ್ರದಲ್ಲಿದ್ದ ಅಂಗಡಿಯೊಂದರಲ್ಲಿ ಸೇಲ್ಸ್​ಗರ್ಲ್ ಆಗಿದ್ದಳು. ಇತರರು ಶಾಲೆ ಕಲಿಯುತ್ತಿದ್ದರು. 23 ವರ್ಷದ ಕುಸುಮಾ ಪ್ರತಿದಿನ ಬೆಳಗ್ಗೆ ಮನೆಯಿಂದ ಬಸ್ಸಿನಲ್ಲಿ ಹೋಗಿ ರಾತ್ರಿ 8ರವರೆಗೆ ಅಂಗಡಿಯಲ್ಲಿ ಕೆಲಸ ಮಾಡಿ ರಾತ್ರಿಯ ಬಸ್ಸಿನಲ್ಲಿ ಮನೆಗೆ ವಾಪಸ್ಸು ಬರುತ್ತಿದ್ದಳು. ಸ್ಪುರದ್ರೂಪಿಯಾಗಿದ್ದ ಆಕೆಗೆ ಸೂಕ್ತ ವರನಿಗಾಗಿ ರಾಮಪ್ಪ ಹುಡುಕುತ್ತಿದ್ದ.

ಒಂದು ದಿನ ಬೆಳಗ್ಗೆ ಕೆಲಸಕ್ಕೆ ಹೋದ ಕುಸುಮಾ ರಾತ್ರಿ ಗ್ರಾಮಕ್ಕೆ ಬರುವ ಕಡೆಯ ಬಸ್ಸಿನಲ್ಲಿಯೂ ಮನೆಗೆ ಬರಲಿಲ್ಲ. ಕರೆ ಮಾಡಿದರೆ ಮಗಳ ಫೋನ್ ಸ್ವಿಚ್ ಆಫ್ ಆಗಿತ್ತು. ಮಗನೊಂದಿಗೆ ಬೈಕಿನಲ್ಲಿ ಮಗಳು ಕೆಲಸ ಮಾಡುತ್ತಿದ್ದ ಅಂಗಡಿಗೆ ಹೋದ. ಬೀಗ ಹಾಕಿತ್ತು. ಸುತ್ತಮುತ್ತಲಿನ ಜನರೊಂದಿಗೆ ಕುಸುಮಾಳ ಬಗ್ಗೆ ವಿಚಾರಿಸಿದ. ಯಾರೂ ಸೂಕ್ತ ಉತ್ತರ ಕೊಡಲಿಲ್ಲ. ರಾತ್ರಿ 2 ಗಂಟೆಯವರೆಗೆ ಹಲವಾರು ಜಾಗಗಳಲ್ಲಿ ಹುಡುಕಿ ಆಕೆ ಸಿಗದಿದ್ದಾಗ ಚಿಂತಾಕ್ರಾಂತನಾಗಿ ಮನೆಗೆ ಮರಳಿದ.

ಮಾರನೆಯ ದಿನ ರಾಮಪ್ಪ ಪೊಲೀಸರಿಗೆ ದೂರು ನೀಡಲು ಸ್ನೇಹಿತನ ಜತೆಗೆ ಜಿಲ್ಲಾ ಕೇಂದ್ರಕ್ಕೆ ಬಸ್ಸಿನಲ್ಲಿ ಹೊರಟ. ಅದೇ ಬಸ್ಸನ್ನೇರಿದ ಒಬ್ಬ ವ್ಯಕ್ತಿ ತಮ್ಮ ಗ್ರಾಮದ ಗೌಡರ ಹೊಲದಲ್ಲಿ ಹೆಣ್ಣುಮಗಳ ಶವ ಬಿದ್ದಿದೆ ಎಂದು ಹೇಳುತ್ತಿದ್ದುದನ್ನು ಕೇಳಿದ ರಾಮಪ್ಪ ಕೂಡಲೇ ಬಸ್ಸಿನಿಂದಿಳಿದು ಆ ಗ್ರಾಮಕ್ಕೆ ಹೋದ. ಊರ ಗೌಡರ ಜೋಳದ ಹೊಲದಲ್ಲಿ ಬಿದ್ದಿದ್ದ ಕುಸುಮಾಳ ಶವ ನೋಡಿ ದುಃಖ ತಡೆಯದಾದ. ಆಕೆಯ ಕುತ್ತಿಗೆಗೆ ಅವಳದೇ ದುಪಟ್ಟಾವನ್ನು ಬಿಗಿಯಲಾಗಿತ್ತು. ಅವಳ ಮೇಲೆ ಅತ್ಯಾಚಾರ ಮಾಡಿರುವುದು ಮೇಲ್ನೋಟಕ್ಕೇ ತಿಳಿಯುತ್ತಿತ್ತು.

ಅಷ್ಟರಲ್ಲಾಗಲೇ ಗೌಡರು ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಅವರೂ ಸ್ಥಳಕ್ಕೆ ಬಂದರು. ಮೃತಳು ತನ್ನ ಮಗಳೆಂದು ರಾಮಪ್ಪ ಅವರಿಗೆ ತಿಳಿಸಿದಾಗ ಅವರು ಅವನ ದೂರು ದಾಖಲಿಸಿ ಶವದ ಪಂಚನಾಮೆ ಮಾಡಿ ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಕಳಿಸಿದರು. ಕುಸುಮಾಳ ಮೇಲೆ ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಅವಳ ಕೊಲೆ ಮಾಡಲಾಗಿದೆ ಎಂದು ವೈದ್ಯರು ದೃಢೀಕರಿಸಿದರು.

ಈ ಘೊರ ಅಪರಾಧ ಮಾಡಿದವರಾರು ಎಂದು ತಿಳಿಯಬೇಕಾದರೆ ಘಟನೆ ನಡೆದ ಸ್ಥಳಕ್ಕೆ ಆಕೆ ಏಕೆ ಹೋದಳು ಎಂದು ತಿಳಿಯಬೇಕಾಗಿತ್ತು. ತನಿಖಾಧಿಕಾರಿ ಆಕೆ ಕೆಲಸ ಮಾಡುತ್ತಿದ್ದ ಅಂಗಡಿಗೆ ಹೋಗಿ ವಿಚಾರಿಸಿದರು. ರಾತ್ರಿ ಅಂಗಡಿಯನ್ನು ಮುಚ್ಚಿದ ನಂತರ ಎಂದಿನಂತೆ ಕುಸುಮಾ ಗ್ರಾಮಕ್ಕೆ ಬಸ್ ಹಿಡಿಯಲು ಹತ್ತಿರದಲ್ಲಿದ್ದ ಬಸ್ ನಿಲ್ದಾಣಕ್ಕೆ ಹೋದಳು ಎಂದು ಅವಳ ಸಹೋದ್ಯೋಗಿಗಳು ತಿಳಿಸಿದರು. ಕುಸುಮಾಳನ್ನು ನೋಡಲು ಅಥವಾ ಅವಳೊಡನೆ ಮಾತನಾಡಲು ಯಾರಾದರೂ ಅಂಗಡಿಗೆ ಬರುತ್ತಿದ್ದರೇ ಎಂದು ಕೇಳಿದಾಗ, ಆಕೆ ಯಾರೊಡನೆಯೂ ಸಲುಗೆಯಿಂದ ಇರುತ್ತಿರಲಿಲ್ಲ ಎಂಬ ಉತ್ತರ ಬಂದಿತು.

ಕುಸುಮಾ ಹೋಗುತ್ತಿದ್ದ ರೂಟಿನ ಬಸ್ಸುಗಳ ಚಾಲಕರು ಮತ್ತು ನಿರ್ವಾಹಕರನ್ನು ತನಿಖಾಧಿಕಾರಿ ಪ್ರಶ್ನಿಸಿದರು. ಆಕೆ ಪ್ರತಿ ರಾತ್ರಿ ರಸ್ತೆ ಬದಿಯ ನಿಲ್ದಾಣದಿಂದ ರಾತ್ರಿ 8.15ಕ್ಕೆ ಹೋಗುವ ಬಸ್ ಹತ್ತುತ್ತಿದ್ದಳು ಎಂದು ಹೇಳಿದ ಅವರು, ಆ ರಾತ್ರಿ ನಮ್ಮ ಬಸ್ 15 ನಿಮಿಷ ತಡವಾಗಿ ಹೊರಟಿತು. ನಾವು ಆಕೆ ಬಸ್ ಹತ್ತುತ್ತಿದ್ದ ನಿಲ್ದಾಣಕ್ಕೆ ಬಂದಾಗ ಆಕೆ ಅಲ್ಲಿರಲಿಲ್ಲ. ಅವಳು ರಜೆಯಲ್ಲಿರಬಹುದು ಎಂದು ನಾವು ಭಾವಿಸಿದೆವು. ಬಸ್ಸಿನಲ್ಲಿಯೂ ಆಕೆ ಯಾರೊಡನೆಯೂ ಮಾತನಾಡುತ್ತಿ್ತಲಿಲ್ಲ ಎಂದರು.

ತನಿಖಾಧಿಕಾರಿ ಕುಸುಮಾಳ ಅಂಗಡಿಯಿಂದ ಬಸ್​ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿದ್ದ ಎಲ್ಲ ಸಿಸಿಟಿವಿ ಕ್ಯಾಮೆರಾಗಳ ಫುಟೇಜ್ ತರಿಸಿ ಪರಿಶೀಲಿಸಿದರು. ಆ ರಾತ್ರಿ ಕುಸುಮಾ 8.20ಕ್ಕೆ ಬಸ್​ಸ್ಟಾ್ಯಂಡಿನಿಂದ ಬೈಕೊಂದರಲ್ಲಿ ಕುಳಿತು ಹೋದ ದೃಶ್ಯ ಸಿಸಿಟಿವಿ ಫುಟೇಜ್​ನಲ್ಲಿ ಸಿಕ್ಕಿತು. ಆದರೆ ಬೈಕಿನ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಅದು ಹೋಂಡಾ ಬೈಕೆಂದಷ್ಟೇ ತಿಳಿಯಿತು.

ಸಿಸಿಟಿವಿ ದೃಶ್ಯವನ್ನು ಮೃತಳ ಮನೆಯವರಿಗೆ ಮತ್ತು ಅವಳ ಸಹೋದ್ಯೋಗಿಗಳಿಗೆ ತೋರಿಸಿ ಬೈಕ್​ನಲ್ಲಿದ್ದವನು ಯಾರೆಂದು ಗುರುತಿಸಲು ಪೊಲೀಸರು ಕೇಳಿದಾಗ ಯಾರೂ ಆ ವ್ಯಕ್ತಿಯನ್ನು ಗುರುತಿಸಲಿಲ್ಲ. ಕುಸುಮಾಗೆ ಯಾರಾದರೂ ಬಾಯ್ಫ್ರೆಂಡ್ ಇದ್ದನೇ ಎಂದು ವಿಚಾರಿಸಿದಾಗ ಆಕೆ ಪಿ.ಯು.ಸಿ. ಓದುತ್ತಿರುವಾಗ ರಮೇಶ್ ಎನ್ನುವವನು ಅವಳನ್ನು ಪ್ರೇಮಿಸುತ್ತಿದ್ದ ಹಾಗೂ ಅವರಿಬ್ಬರೂ ಕೆಲ ದಿನ ಜತೆಗೆ ಓಡಾಡುತ್ತಿದ್ದರು ಎಂದು ತಿಳಿಯಿತು.

ರಮೇಶ್​ನನ್ನು ಠಾಣೆಗೆ ಕರೆಸಿ ವಿಚಾರಿಸಲಾಯಿತು. ಆತ ತನಗೇನೂ ಗೊತ್ತಿಲ್ಲವೆಂದ. ಅವನ ಬಳಿ ಒಂದು ಹೋಂಡಾ ಮೋಟರ್ ಸೈಕಲ್ ಇದ್ದ ಕಾರಣ ಅವನ ಮೇಲೆಯೇ ಹೆಚ್ಚಿನ ಸಂಶಯ ಮೂಡಿ ಅವನನ್ನು ಹಲವಾರು ದಿನಗಳ ಕಾಲ ವಿಚಾರಣೆ ಮಾಡಲಾಯಿತು. ಆದರೆ ಅವನ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಸಿಗಲಿಲ್ಲ. ಒಂದು ತಿಂಗಳಾದರೂ ಆರೋಪಿ ಪತ್ತೆಯಾಗದ ಕಾರಣ ಮಹಿಳಾ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡಲಾರಂಭಿಸಿದರು. ಪೊಲೀಸರ ಮೇಲೆ ತೀವ್ರ ಒತ್ತಡ ಉಂಟಾಯಿತು.

ಆಗ ಜಿಲ್ಲಾ ಎಸ್.ಪಿ. ತಾವೇ ಈ ಪ್ರಕರಣದ ತನಿಖೆಗಿಳಿದರು. ಮೃತಳ ದೇಹ ಸಿಕ್ಕ ಹೊಲದ ವ್ಯಾಪ್ತಿಯ ಸೆಲ್​ಫೋನ್ ಟವರ್​ನಲ್ಲಿ ಘಟನೆ ನಡೆದ ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿಯವರೆಗೆ ಯಾವಯಾವ ಮೊಬೈಲ್ ಫೋನ್​ಗಳು ಚಾಲ್ತಿಯಲ್ಲಿದ್ದವು ಎನ್ನುವ ವಿವರಗಳನ್ನು ತರಿಸಿದರು. ಸುಮಾರು 500 ನಂಬರ್​ಗಳು ಸಿಕ್ಕವು. ಅವುಗಳಲ್ಲಿ ಮೃತಳ ಮೊಬೈಲ್ ಸಹ ಇತ್ತು. ಅದು ಆ ಟವರಿನ ವ್ಯಾಪ್ತಿಗೆ ರಾತ್ರಿ 8.40ಕ್ಕೆ ಬಂದಿದ್ದು 9.50ಕ್ಕೆ ಸ್ವಿಚ್​ಆಫ್ ಆಗಿತ್ತು. ಅದೇ ಅವಧಿಯಲ್ಲಿ ಅಪರಾಧವಾಗಿರಬಹುದೆಂದು ಊಹಿಸಿದ ಎಸ್.ಪಿ., ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಮೊಬೈಲ್ ಸಂಖ್ಯೆಗಳನ್ನು ವಿಂಗಡಿಸಿದಾಗ 46 ನಂಬರ್​ಗಳು ಸಿಕ್ಕವು. ಅವುಗಳ ಮಾಲೀಕರ ವಿಳಾಸಗಳನ್ನು ಗಮನಿಸಿ ಅವರಲ್ಲಿ ಯಾರು ಹೋಂಡಾ ಬೈಕ್ ಹೊಂದಿದ್ದಾರೆ ಎನ್ನುವುದನ್ನು ಪರಿಶೀಲಿಸಿದಾಗ ನಾಲ್ಕು ಜನರ ಹೆಸರುಗಳು ಸಿಕ್ಕವು. ಅವರೆಲ್ಲರನ್ನೂ ಠಾಣೆಗೆ ಕರೆಸಿ ವಿಚಾರಿಸಿದಾಗ ಮೃತಳ ನೆರೆಯ ಗ್ರಾಮದ ನಿವಾಸಿಯಾಗಿದ್ದ ಕುಮಾರ್ ಎನ್ನುವವನ ಮೇಲೆ ಸಂಶಯ ಬಲವಾಯಿತು.

36 ವರ್ಷದ ಕುಮಾರ್ ಜಿಲ್ಲಾ ಕೇಂದ್ರದಲ್ಲಿದ್ದ ಟ್ರ್ಯಾಕ್ಟರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಮೃತಳ ದೂರದ ಸಂಬಂಧಿಕನೂ ಆಗಿದ್ದ. ‘ಕುಸುಮಾಳ ಕೊಲೆ ಬಗ್ಗೆ ಅರಿತು ನಾನು ತೀರಾ ಮನ ನೊಂದೆ. ಅಪರಾಧ ನಡೆದ ರಾತ್ರಿ ನಾನು ನನ್ನ ಪತ್ನಿಯ ತವರೂರಿನಲ್ಲಿದ್ದೆ. ಕೊಲೆಯ ಮಾಹಿತಿ ಬಂದ ಕೂಡಲೇ ಅವಳ ಮನೆಗೆ ಹೋಗಿ ಅವಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡೆ’ ಎಂದ.

‘ಹಾಗಾದರೆ ಅಪರಾಧ ನಡೆದ ರಾತ್ರಿ ನಿನ್ನ ಫೋನ್ ಅಪರಾಧ ನಡೆದ ಸ್ಥಳದಲ್ಲಿ ಹೇಗೆ ಚಾಲೂ ಇತ್ತು?’ ಎಂದು ಪೊಲೀಸರು ಕೇಳಿದಾಗ ಆತ ಬೆವರತೊಡಗಿದ. ಪೊಲೀಸರ ಮುಂದುವರಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಾನೇ ಕುಸುಮಾಳ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಹೀಗೆಂದ: ‘ನನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಮೂರನೆಯ ಮಗುವಿನ ಹೆರಿಗೆಗಾಗಿ ಪತ್ನಿ ತವರಿಗೆ ಹೋಗಿದ್ದಾಳೆ. ಅಂದು ರಾತ್ರಿ ಮನೆಗೆ ಹೊರಟಿದ್ದಾಗ ಕುಸುಮಾ ಬಸ್ ನಿಲ್ದಾಣದಲ್ಲಿ ನಿಂತಿದ್ದನ್ನು ಕಂಡು ನಿನ್ನನ್ನು ಊರಿಗೆ ಬಿಡುತ್ತೇನೆ ಬಾ ಎಂದೆ. ಅವಳು ಒಪ್ಪಿ ನನ್ನ ಹಿಂದೆ ಕುಳಿತಳು. ಆಕೆಯ ದೇಹ ನನ್ನ ದೇಹಕ್ಕೆ ತಾಕಿದ ಕೂಡಲೇ ಹಲವಾರು ತಿಂಗಳಿಂದ ಸೆಕ್ಸ್​ನಿಂದ ವಂಚಿತನಾಗಿದ್ದ ನನಗೆ ಕಾಮ ಉಕ್ಕೇರಿತು. ಅವಳನ್ನು ಅನುಭವಿಸಬೇಕೆಂದು ನಮ್ಮ ಗ್ರಾಮಕ್ಕೆ ಹೋಗುವ ನೇರರಸ್ತೆಯನ್ನು ಬಿಟ್ಟು ಬೇರೆ ರಸ್ತೆಯಲ್ಲಿ ಹೊರಟೆ. ಏಕೆಂದು ಕುಸುಮಾ ಕೇಳಿದಾಗ ಅದೇ ಅವಳ ಮನೆಗೆ ಹತ್ತಿರದ ರಸ್ತೆ ಎಂದೆ. ಮಾರ್ಗಮಧ್ಯದ ನಿರ್ಜನ ಪ್ರದೇಶದಲ್ಲಿ ಬೈಕ್ ಆಫ್ ಮಾಡಿದೆ. ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎನ್ನುತ್ತ ಗಾಡಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದೆ. ಅವಳನ್ನಿಳಿಸಿ ಬೈಕ್ ಚೆಕ್ ಮಾಡುವಂತೆ ನಟಿಸಿ ಸ್ಪಾರ್ಕ್​ಪ್ಲಗ್ ತೆಗೆದೆ. ಗಾಡಿ ಕೆಟ್ಟಿದೆಯೆಂದು ಅವಳಿಗೆ ಹೇಳಿ ಸಹಾಯಕ್ಕಾಗಿ ಯಾರಿಗಾದರೂ ಕರೆ ಮಾಡುವೆನೆಂದು ಹೇಳಿದೆ. ಸಹಾಯ ಬರುವವರೆಗೆ ಪಕ್ಕದಲ್ಲಿದ್ದ ಹೊಲದಲ್ಲಿ ಕುಳಿತುಕೊಳ್ಳೋಣವೆಂದು ಹೇಳಿ ಅಲ್ಲಿಗೆ ಅವಳನ್ನು ಕರೆದೊಯ್ದು ಅವಳ ಮೇಲೆ ಅತ್ಯಾಚಾರ ಮಾಡಿದೆ. ಆಕೆ ಚೀರಾಡದಂತೆ ಅವಳ ದುಪಟ್ಟಾವನ್ನೇ ಬಾಯಿಗೆ ಕಟ್ಟಿದೆ. ನನ್ನ ಟವಲ್​ನಿಂದ ಅವಳ ಕೈಗಳನ್ನು ಕಟ್ಟಿದೆ. ಅತ್ಯಾಚಾರದ ನಂತರ ಅವಳನ್ನು ಬದುಕಲು ಬಿಟ್ಟರೆ ನನ್ನ ಕೃತ್ಯ ಬಯಲಾಗುತ್ತದೆಂದು ಹೆದರಿದ ನಾನು ಅವಳ ಬಾಯಿಗೆ ಕಟ್ಟಿದ್ದ ದುಪಟ್ಟಾವನ್ನೇ ಅವಳ ಕುತ್ತಿಗೆಗೆ ಬಿಗಿದು ಕೊಂದೆ. ಬಳಿಕ ನನ್ನ ಬೈಕ್​ಗೆ ಸ್ಪಾರ್ಕ್ ಪ್ಲಗ್ ಜೋಡಿಸಿ ಗಾಡಿ ಸ್ಟಾರ್ಟ್ ಮಾಡಿ ಮನೆಗೆ ಮರಳಿದೆ...’

ಮುಂದಿನ ತನಿಖೆಯಲ್ಲಿ ಎಲ್ಲ ಪೂರಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಕುಮಾರ್​ನ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಸಾಂರ್ದಭಿಕ ಸಾಕ್ಷ್ಯದ ಮೇಲೆ ಅವಲಂಬಿತವಾದ ಈ ಪ್ರಕರಣ ಇನ್ನೂ ವಿಚಾರಣೆಯಲ್ಲಿ ಇದ್ದು ಆರೋಪ ಸಾಬೀತಾದರೆ ಕುಮಾರ್​ಗೆ ಗಲ್ಲು ಶಿಕ್ಷೆಯಾಗಬಹುದು.

‘ಭಾವದಾವೇಶದಿಂ ಮನದಶ್ವ, ಧೀ ವಿವೇಚನೆಯದಕೆ ದಕ್ಷ ರಾಹುತನು, ತೀವಿದೊಲವಿನ ದಂಪತಿಗಳಾಗೆ ಮನಬುದ್ಧಿ, ಜೀವಿತವು ಜೈತ್ರಕಥೆ ಮಂಕುತಿಮ್ಮ’ ಎನ್ನುತ್ತಾರೆ ಡಿ.ವಿ.ಜಿ.; ತನ್ನ ಕಾಮದಾಸೆಯ ಕುದುರೆಗೆ ವಿವೇಚನೆಯ ಕಡಿವಾಣ ಹಾಕದ ಕುಮಾರ್, ಅಮಾಯಕಳೊಬ್ಬಳನ್ನು ಕೊಂದದ್ದಲ್ಲದೆ ತಾನೂ ಹಾಳಾದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net