

ಶಿವಮೊಗ್ಗ: ಮನುಷ್ಯ ಆರ್ಥಿಕ ಬಲಾಢ್ಯನಾಗಿ, ವಿದ್ಯಾವಂತನಾಗಿದ್ದರೂ ಸಹ ಆತನ ಮನಸ್ಸು ವಿಕಾಸಗೊಳ್ಳದೆ ವಿಕೃತವಾಗುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ರಾಮಪ್ಪಗೌಡ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ಬಡಾವಣೆ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಸಾಹಿತ್ಯ ಹುಣ್ಣಿಮೆಯ 234ನೇ ತಿಂಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಜ್ಜನರು, ಸತ್ಪ್ರಜೆಗಳನ್ನು ರೂಪಿಸುವ ಮನಸ್ಸು ಕಟ್ಟುವ ಕೆಲಸ ಆಗಬೇಕು ಎಂದರು.
ಆಶಯ ಮಾತುಗಳನ್ನಾಡಿದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ಸಾಹಿತ್ಯ ಹುಣ್ಣಿಮೆ ಜನರ ಬಳಿಹೋಗಿ ಸಾಹಿತ್ಯ, ಸಂಗೀತದ ಮೂಲಕ ಮನಸ್ಸು ಕಟ್ಟುವ ಉದ್ದೇಶ ಹೊಂದಿದೆ. 20 ವರ್ಷಗಳ ಹಿಂದೆ ಆರಂಭಿಸಿದ ಈ ಕಾರ್ಯಕ್ರಮ ಸಾವಿರಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ. ನಮ್ಮ ಜಿಲ್ಲೆಯ ಸಾಕ್ಷಿ ಪ್ರಜ್ಞೆಯಾಗಿದೆ. ಅದು ಈ ನೆಲದ ಸಂಸ್ಕೃತಿಯ ಪ್ರತೀಕ ಎಂದು ಹೇಳಿದರು.
ಪೊಲೀಸ್ ನಿವಾಸಿಗಳ ಸಂಘದ ಅಧ್ಯಕ್ಷ ಟಿ.ಕುಪ್ಪಯ್ಯ ಮಾತನಾಡಿ, ಹೊಸ ತಲೆಮಾರಿನ ಇಂಗ್ಲಿಷ್ ವ್ಯಾಮೋಹದಿಂದ ನಮ್ಮ ಸಂಸ್ಕೃತಿಯನ್ನು ನಾವೆ ಕಡೆಗಣಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಅಧ್ಯಕ್ಷೆ ಶಾಂತಾಶೆಟ್ಟಿ ಮಾತನಾಡಿ, ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಹಿರಿಯರಾದ ನಾವೇ ಜವಾಬ್ದಾರಿ ಹೊರಬೇಕು ಎಂದರು.
ತುರುವನೂರು ಮಲ್ಲಿಕಾರ್ಜುನ ಅವರು ಸೋರುತಿಹುದು ಮನೆಯ ಮಾಳಿಗೆ ಕಥೆ ಹೇಳಿದರು. ಹವ್ಯಾಸಿ ಗಾಯಕರ ಬಳಗದ ಕೆ.ಪಿ.ಬಸವರಾಜ್ ತಂಡದ ಆರ್ಮಿ ಬಸವರಾಜ್ ನಾಯ್ಕ, ಭಾಗ್ಯ ನಂಜಪ್ಪ, ಪ್ರತಿಮಾಗೌಡ, ಸುರೇಶ್ ಶೇಟ್ ಅವರಿಂದ ಗಾಯನ ನಡೆಯಿತು. ಶಾರದಾ ಶಂಕರ ಭಜನಾ ಮಂಡಳಿ ಸದಸ್ಯರು ಭಜನೆ ಹಾಡಿದರು. ಯುವ ಮುಖಂಡ ಜಿ.ಡಿ.ಮಂಜುನಾಥ, ಕವಿಗಳಾದ ಪ್ರೊ. ಸತ್ಯನಾರಾಯಣ, ಎಂ.ನವೀನಕುಮಾರ್, ಅನಿತಾ ಸೂರ್ಯ, ಭಾರತಿ ಬಾಯಿ, ಎಂ.ಬಾಲರಾಜ್, ವಾಗೀಶ್ ಆರಾಧ್ಯ ಕವನ ವಾಚಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.