ಮೇಯರ್ ಬಂಗಲೆ ಮಣ್ಣುಪಾಲು!

ಮೇಯರ್ ಬಂಗಲೆ ಸುತ್ತ ಕಾಡು ತುಂಬಿಕೊಂಡು ಪಾಳು ಬಿದ್ದಿರುವುವುದು.
ಮೇಯರ್ ಬಂಗಲೆ ಸುತ್ತ ಕಾಡು ತುಂಬಿಕೊಂಡು ಪಾಳು ಬಿದ್ದಿರುವುವುದು.
Published on

ಪ್ರಮುಖ ಮುಖ್ಯಾಂಶಗಳು

  • ಜವಾಬ್ದಾರಿ ಮರೆತ ಜನಪ್ರತಿನಿಧಿಗಳು, ಅಧಿಕಾರಿಗಳು
  • ಸಾರ್ವಜನಿಕರ ಹಣ ಪೋಲು
ಹರೀಶ್ ಮೋಟುಕಾನ ಮಂಗಳೂರು
ಆಳೆತ್ತರಕ್ಕೆ ಬೆಳೆದು ನಿಂತ ಕಾಡು, ಬಣ್ಣ ಮಾಸಿದ ಗೋಡೆಗಳು, ತುಕ್ಕು ಹಿಡಿಯುತ್ತಿರುವ ಕಬ್ಬಿಣದ ಗೇಟ್, ಗೆದ್ದಲು ಹಿಡಿದು ಮಣ್ಣಾಗುತ್ತಿರುವ ಪೀಠೋಪಕರಣ, ಮುರಿದು ಬೀಳಲು ಅಣಿಯಾಗಿರುವ ಮಾಡು, ಯದ್ವಾತದ್ವಾ ಬಿದ್ದುಕೊಂಡಿರುವ ತೆಂಗಿನ ಒಣಗಿದ ಗರಿಗಳು.
ಇದು ಮಣ್ಣಗುಡ್ಡೆಯಲ್ಲಿರುವ ಮೇಯರ್ ಬಂಗಲೆಯ ವಾಸ್ತವ ಚಿತ್ರಣ. ಸಾರ್ವಜನಿಕರ ತೆರಿಗೆ ಹಣವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಜವಾಬ್ದಾರಿ ಮರೆತು ಯಾವ ರೀತಿಯಲ್ಲಿ ಪೋಲು ಮಾಡಿದ್ದಾರೆ ಎನ್ನುವುದಕ್ಕೆ ಈ ಬಂಗಲೆ ಪ್ರತ್ಯಕ್ಷ ನಿದರ್ಶನ.
2015ರಲ್ಲಿ ಮಹಾಬಲ ಮಾರ್ಲ ಮೇಯರ್ ಆಗಿದ್ದಾಗ ಮೇಯರ್ ಬಂಗಲೆಯನ್ನು 4.5 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿತ್ತು. ಆದರೆ ಇದುವರೆಗೆ ಅದರಲ್ಲಿ ಯಾವ ಮೇಯರ್ ಕೂಡ ವಾಸ ಮಾಡಲಿಲ್ಲ. ಪರಿಣಾಮ ಎರಡೇ ವರ್ಷದಲ್ಲಿ ನಿರ್ವಹಣೆ ಇಲ್ಲದೆ ಪಾಳುಬೀಳಲಾರಂಭಿಸಿತು. ಇನ್ನೆರಡು ಮಳೆಗಾಲ ಕಳೆದರೆ ಸಂಪೂರ್ಣ ನೆಲಸಮವಾಗಿ ಹೋಗುವ ಸ್ಥಿತಿಯಲ್ಲಿದೆ.
ಲಕ್ಷಾಂತರ ರೂ. ಮೌಲ್ಯದ ಸೊತ್ತು ನಾಪತ್ತೆ: ಬಂಗಲೆಯನ್ನು ನವೀಕರಣ ಮಾಡುವಾಗ ಲಕ್ಷಾಂತರ ರೂಪಾಯಿ ಮೌಲ್ಯದ ಸೋಫಾಗಳು, ಡೈನಿಂಗ್ ಟೇಬಲ್, ಎಸಿ, 25ಕ್ಕಿಂತಲೂ ಅಧಿಕ ಪೈಬರ್ ಚೇರ್‌ಗಳು, ವಾಟರ್ ಪ್ಯೂರಿಫಯರ್, ಫ್ಯಾನ್‌ಗಳು, ಕಪಾಟು, ಕನ್ನಡಿ, ಬೇಸಿನ್, ಬೆಡ್, ಟ್ಯೂಬ್‌ಲೈಟ್, ಬಲ್ಬ್‌ಗಳು... ಸೇರಿದಂತೆ ಸುಮಾರು 5 ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ಮೌಲ್ಯದ ಸೊತ್ತುಗಳು ಈ ಬಂಗ್ಲೆಯೊಳಗಡೆ ಇದ್ದವು. ಆಗ ಗೇಟ್‌ಗೆ ಬೀಗ ಕೂಡ ಹಾಕದೆ ಇದ್ದುದರಿಂದ ಒಳಗಡೆ ಇದ್ದ ಸೊತ್ತುಗಳೆಲ್ಲವೂ ಕಳ್ಳತನವಾಗಿವೆ. ಆಗ ಆಡಳಿತದಲ್ಲಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗಿತ್ತು.

ಗತ ವೈಭವ ಪಡೆದಿತ್ತು

ಮೇಯರ್ ಬಂಗಲೆ 2015ರಲ್ಲಿ 4.5 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡು ಗತ ವೈಭವ ಪಡೆದಿತ್ತು. ಆಗಿನ ಮೇಯರ್ ಮಹಾಬಲ ಮಾರ್ಲ ಈ ಬಂಗ್ಲೆ ಪ್ರವೇಶಿಸಿದ್ದರು. ಬಳಿಕ ಯಾರೂ ಅದರ ಒಳಗಡೆ ಪ್ರವೇಶಿದಂತೆ ಕಾಣುತ್ತಿಲ್ಲ. ಕಟ್ಟಡ ಹಳೆಯದಾಗಿದ್ದರೂ ಸಂಪೂರ್ಣ ದುರಸ್ತಿಗೊಳಿಸಿ ಸುಣ್ಣ, ಬಣ್ಣ ಹಚ್ಚಿ ಸುಂದರಗೊಳಿಸಿದ್ದರು. ಅಂಗಳಕ್ಕೆ ಇಂಟರ್‌ಲಾಕ್ ಅಳವಡಿಸಿದ್ದರು. ಹೊರಗಡೆ ಪುಟ್ಟ ಹೂದೋಟ ನಿರ್ಮಿಸಲಾಗಿತ್ತು. ಇದೀಗ ಅವುಗಳ ಪಳೆಯುಳಿಕೆಯಷ್ಟೇ ಉಳಿದಿದೆ.

ಇತಿಹಾಸ

ಮಂಗಳೂರು ಮುನ್ಸಿಪಾಲಿಟಿ ಅಸ್ತಿತ್ವದಲ್ಲಿ ಇದ್ದಾಗ ಅದರ ಅಧ್ಯಕ್ಷರಿಗೆ ಪಾಂಡೇಶ್ವರದಲ್ಲಿ ಪ್ರತ್ಯೇಕ ಬಂಗಲೆ ಇತ್ತು. ಬಳಿಕ ಅದು ಲೋಕೋಪಯೋಗಿ ಇಲಾಖೆಯ ವಸತಿಗೃಹವಾಯಿತು. ನಗರಪಾಲಿಕೆ ರೂಪುಗೊಂಡ ಬಳಿಕ ಮಣ್ಣಗುಡ್ಡೆಯ ಈ ಕಟ್ಟಡ ಮೇಯರ್ ಬಂಗಲೆಯಾಗಿತ್ತು. ಆದರೆ ನಗರದ ನಿವಾಸಿಗಳೇ ಮೇಯರ್ ಆಗುವ ಕಾರಣ ಯಾರು ಕೂಡ ಬಂಗಲೆ ಬಳಸುವ ಗೋಜಿಗೆ ಹೋಗಲಿಲ್ಲ. ಕ್ರಮೇಣ ಈ ಕಟ್ಟಡ ಅಧಿಕಾರಿಗಳ ನಿವಾಸವಾಗಿ ಪರಿವರ್ತನೆಯಾಯಿತು. ಮೇಯರ್ ಬಂಗಲೆ ಗೌರವದ ಸಂಕೇತ ಹಾಗೂ ತುರ್ತು ಸಂದರ್ಭ ಸಭೆ ನಡೆಸಲು, ವಾಸ್ತವ್ಯ ಹೂಡಲು ಅಗತ್ಯ ಎನ್ನುವುದನ್ನು ಮನಗಂಡು ಮನಪಾ ಆಡಳಿತ ಇದನ್ನು ದುರಸ್ತಿಗೊಳಿಸಿ ಮೇಯರ್ ಬಳಕೆಗೆ ಸೀಮಿತವಾಗಿಸಲು ನಿರ್ಧರಿಸಿತು. ಮನಪಾ ಸಾಮಾನ್ಯ ಸಭೆಯಲ್ಲಿ ಮೇಯರ್ ಬಂಗಲೆ ನವೀಕರಣದ ನಿರ್ಣಯ ಅಂಗೀಕಾರಗೊಂಡಿತ್ತು. ಕೆಲವೇ ಸಮಯದಲ್ಲಿ ಮೇಯರ್ ಬಂಗಲೆ ದುರಸ್ತಿಗೊಂಡಿತ್ತು. ಇದೀಗ ಪಾಳುಬಿದ್ದಿದೆ.

ಲಾಭ ಗಳಿಸುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿಕೊಂಡು ಮೇಯರ್ ಬಂಗಲೆ ನವೀಕರಣ ಮಾಡಿದ್ದಾರೆ. ಬಳಿಕ ಅದನ್ನು ಉಪಯೋಗಿಸದೆ ಬಿಟ್ಟ ಕಾರಣ ಈಗ ಪಾಳುಬಿದ್ದು, ಮಣ್ಣಾಗಿ ಹೋಗುತ್ತಿದೆ. ಇನ್ನೊಮ್ಮೆ ನವೀಕರಣಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದರಲ್ಲಿ ಕಮಿಷನ್ ಪಡೆಯುತ್ತಾರೆ. ಎಷ್ಟರ ತನಕ ಮಂಗಳೂರಿನ ತೆರಿಗೆದಾರರು ಮಾತನಾಡುವುದಿಲ್ಲವೋ ಅಲ್ಲಿಯ ತನಕ ಇಂತಹ ದಂಧೆಗಳು ನಡೆಯುತ್ತಲೇ ಇರುತ್ತವೆ.

ಹನುಮಂತ ಕಾಮತ್, ಸಾಮಾಜಿಕ ಕಾರ್ಯಕರ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net