ಹೀಗುಂಟು ಯುಪಿಐ ಗಣಿತ!: ಹೊಸ ಶುಲ್ಕದಿಂದ ಯಾರಿಗೆ ಲಾಭ, ನಷ್ಟ..?

ಹೊಸ ಶುಲ್ಕದಿಂದ ಯಾರಿಗೆ ಲಾಭ, ನಷ್ಟ..?
ಹೊಸ ಶುಲ್ಕದಿಂದ ಯಾರಿಗೆ ಲಾಭ, ನಷ್ಟ..?
Published on
ಯುಪಿಐ ವ್ಯಾಪಾರಿ ಪಾವತಿಗಳ ಮೇಲೆ 2020ರ ಜನವರಿಗಿಂತ ಮೊದಲು, ಶೇಕಡ 0.30ರವರೆಗೆ ಮರ್ಚೆಂಟ್​ ಡಿಸ್ಕೌಂಟ್​ ರೇಟ್​ (ಎಂಡಿಆರ್​) ಶುಲ್ಕವಿತ್ತು. ಯುಪಿಐ ಪಾವತಿಗಳನ್ನು ಉತ್ತೇಜಿಸಲು ಸರ್ಕಾರ ಈ ಶುಲ್ಕವನ್ನು ರದ್ದುಗೊಳಿಸಿತ್ತು. ನಂತರದ ದಿನಗಳಲ್ಲಿ ಯುಪಿಐ ಪಾವತಿಗಳು ಗಣನೀಯವಾಗಿ ಹೆಚ್ಚಾಗುತ್ತ ಹೋದವು. ಆದರೆ, ಯುಪಿಐ ಮೇಲೆ ಹೊಸ ಶುಲ್ಕವು 2026ರ ಅಕ್ಟೋಬರ್​ 15ರಿಂದ ಜಾರಿಗೆ ಬರಲಿದೆ. ರೂ.2,000ಕ್ಕಿಂತ ಹೆಚ್ಚಿನ ಪಾವತಿಗಳ ಮೇಲೆ ವ್ಯಾಪಾರಿಗಳು ಶೇ.0.4ರಷ್ಟು ಎಂಡಿಆರ್​ ಪಾವತಿಸಬೇಕಾಗುತ್ತದೆ. ಗ್ರಾಹಕರ ಜೇಬಿನಿಂದ ಒಂದು ರೂಪಾಯಿಯೂ ಕಡಿತವಾಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಹಾಗಾದರೆ ಈ ಹೊಸ ಯುಪಿಐ ಶುಲ್ಕ ಎಂದರೇನು, ಇದರಿಂದ ಎಷ್ಟು ಆದಾಯ ಬರಲಿದೆ, ಈ ಹಣ ಯಾರಿಗೆಲ್ಲ ಸಿಗಲಿದೆ ಮತ್ತು ಇದರ ನಿಜವಾದ ಹೊರೆ ಸಾಮಾನ್ಯ ಜನರ ಮೇಲೆ ಬೀಳುತ್ತದೆಯೇ? ಈ ಕುರಿತಾದ ವಿವರ ಇಲ್ಲಿದೆ.
ದೇಶದಲ್ಲಿ ಪ್ರಸ್ತುತ 55.49 ಕೋಟಿ ಯುಪಿಐ ಬಳಕೆದಾರರಿದ್ದಾರೆ ಮತ್ತು ದೇಶದ ಶೇಕಡ 88ರಷ್ಟು ಡಿಜಿಟಲ್​ ಪಾವತಿಗಳು ಯುಪಿಐ ಮೂಲಕವೇ ನಡೆಯುತ್ತವೆ. ಭಾರತದ ಯುಪಿಐ ವ್ಯವಸ್ಥೆಯಿಂದ 11 ದೇಶಗಳಲ್ಲಿ ಪ್ರತಿ ತಿಂಗಳು 24 ಶತಕೋಟಿಗಿಂತಲೂ (2,400 ಕೋಟಿ) ಹೆಚ್ಚು ವಹಿವಾಟುಗಳು ನಡೆಯುತ್ತಿವೆ. ಭಾರತದಲ್ಲಿ 2026ರ ಜುಲೈನಲ್ಲಿ 2,366 ಕೋಟಿ ಯುಪಿಐ ವಹಿವಾಟುಗಳ ಮೂಲಕ ರೂ.29.88 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದೆ.
ಹಣಕಾಸು ಸಚಿವಾಲಯವು ಇದೇ ಸೆಪ್ಟೆಂಬರ್​ 14ರಂದು ಅಧಿಸೂಚನೆಯೊಂದನ್ನು ಹೊರಡಿಸಿ, ರೂ.2,000ವರೆಗಿನ ಯುಪಿಐ ಮತ್ತು ರುಪೇ ಡೆಬಿಟ್​ ಕಾರ್ಡ್​ ವಹಿವಾಟುಗಳ ಮೇಲೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ತಿಳಿಸಿತು. ಒಂದು ವೇಳೆ ಎಂಡಿಆರ್​ ಶುಲ್ಕವನ್ನು ಜಾರಿಗೆ ತಂದರೂ, ಅದು ಅತ್ಯಂತ ನಾಮಮಾತ್ರದ ದರದಲ್ಲಿ ರೂ.2,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ವ್ಯಾಪಾರಿಗಳ ಮೇಲೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿತು.
ದೇಶದಲ್ಲಿ ಯುಪಿಐ ವ್ಯವಸ್ಥೆಯನ್ನು ನಿರ್ವಹಿಸುವ ಸಂಸ್ಥೆಯಾದ ನ್ಯಾಷನಲ್​ ಪೇಮೆಂಟ್ಸ್​ ಕಾರ್ಪೊರೇಷನ್​ ಆಫ್​ ಇಂಡಿಯಾ (ಎನ್​ಪಿಸಿಐ) ಮರುದಿನವೇ, ಸೆಪ್ಟೆಂಬರ್​ 15ರಂದು ಎಂಡಿಆರ್​ನ ದರವನ್ನು ನಿಗದಿಪಡಿಸಿತು. ಹೊಸ ನಿಯಮದ ಪ್ರಕಾರ, ರೂ.2,000ಕ್ಕಿಂತ ಹೆಚ್ಚಿನ ಪರ್ಸನ್​ ಟು ಮರ್ಚೆಂಟ್​ (ಪಿ2ಎಂ) ಪಾವತಿಗಳ ಮೇಲೆ ಶೇ.0.4ರಷ್ಟು ಎಂಡಿಆರ್​ ವಿಧಿಸಲಾಗುತ್ತದೆ. ಈ ಬದಲಾವಣೆಗಾಗಿ "ಟ್ಯಾಕ್ಸೇಶನ್​ ಆ್ಯಂಡ್​ ಅದರ್​ ಲಾಸ್​ (ಅಮೆಂಡ್​ಮೆಂಟ್​) ಆ್ಯಕ್ಟ್​, 2026' (ತೆರಿಗೆ ಮತ್ತು ಇತರ ಕಾನೂನುಗಳ ತಿದ್ದುಪಡಿ ಕಾಯ್ದೆ, 2026) ಅನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಲಾಯಿತು.

ಎಂಡಿಆರ್​ ಶುಲ್ಕದಿಂದ ಬರುವ ಆದಾಯ

ಕ್ರೆಡಿಟ್​ ರೇಟಿಂಗ್​ ಸಂಸ್ಥೆ ಕೇರ್​ಎಡ್ಜ್​ ಪ್ರಕಾರ, ಒಟ್ಟು ಯುಪಿಐ ಪಾವತಿಗಳಲ್ಲಿ ಶೇ.29ರಷ್ಟು ಮೌಲ್ಯದ ವಹಿವಾಟುಗಳನ್ನು ಸಾಮಾನ್ಯ ಜನರು ವ್ಯಾಪಾರಿಗಳಿಗೆ ಮಾಡಿದ್ದಾರೆ, ಅಂದರೆ ಪರ್ಸನ್​ ಟು ಮರ್ಚೆಂಟ್​ (ಪಿ2ಎಂ) ಪಾವತಿಗಳು. ಈ ಪಿ2ಎಂ ಪಾವತಿಗಳಲ್ಲಿ, ರೂ.2,000ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಮಾತ್ರ ಎಂಡಿಆರ್​ ಅನ್ವಯಿಸುತ್ತದೆ. ಇಂತಹ ಪಾವತಿಗಳ ಒಟ್ಟು ಮೌಲ್ಯವು ಒಟ್ಟಾರೆ ಪಿ2ಎಂ ಪಾವತಿಗಳ ಶೇ.67.2ರಷ್ಟಿದೆ. 2025-26ರಲ್ಲಿ ಎಂಡಿಆರ್​ ವ್ಯಾಪ್ತಿಗೆ ಬರಬಹುದಾದ ಪಾವತಿಗಳ ಮೊತ್ತ ರೂ.61.13 ಲಕ್ಷ ಕೋಟಿ ಆಗಿತ್ತು. ಮುಂದಿನ ವರ್ಷಕ್ಕೂ (2026-27) ಇದೇ ಮೊತ್ತವನ್ನು ಆಧಾರವಾಗಿಟ್ಟುಕೊಂಡರೆ, ಶೇ.0.4ರಷ್ಟು ಎಂಡಿಆರ್​ ದರದಂತೆ ಗರಿಷ್ಠ ರೂ.24,452 ಕೋಟಿ ಆದಾಯ ಗಳಿಸಬಹುದು. ಆದಾಗ್ಯೂ, ರೂ.75,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಗರಿಷ್ಠ ರೂ.300 ಮಿತಿಯನ್ನು ನಿಗದಿಪಡಿಸಲಾಗಿದೆ. ಆದ್ದರಿಂದ ಒಟ್ಟು ಎಂಡಿಆರ್​ ಆದಾಯವು ಸ್ವಲ್ಪ ಕಡಿಮೆಯಾಗಬಹುದು. ಶೇ.0.25ರಿಂದ 0.50ರವರೆಗೆ ಎಂಡಿಆರ್​ ಜಾರಿಗೆ ಬಂದರೆ, ರೂ.15,000 ಕೋಟಿಯಿಂದ ರೂ.30,000 ಕೋಟಿಯವರೆಗೆ ಆದಾಯ ನಿರೀಕ್ಷಿಸಬಹುದು ಎನ್ನುತ್ತಾರೆ ತಜ್ಞರು.

ಆದಾಯದ ಹಂಚಿಕೆ

ಯಾವುದೇ ಒಂದು ಯುಪಿಐ ವಹಿವಾಟಿನಲ್ಲಿ ಹಣ ಪಾವತಿಸುವವರು ಮತ್ತು ಸ್ವೀಕರಿಸುವವರಲ್ಲದೆ, ಸಂಪೂರ್ಣ ಪ್ರಕ್ರಿಯೆಯಲ್ಲಿ ಇನ್ನೂ 4 ಪಾಲುದಾರರು ಕೆಲಸ ಮಾಡುತ್ತಾರೆ.
ವಿತರಿಸುವ ಬ್ಯಾಂಕ್​ (ಇssuing Bank) ಎಂದರೆ ಹಣ ಪಾವತಿಸುವ ವ್ಯಕ್ತಿಯ ಬ್ಯಾಂಕ್​.
ಸ್ವೀಕರಿಸುವ ಬ್ಯಾಂಕ್​ (Acquiring Bank) ಎಂದರೆ ಹಣ ಪಡೆಯುವ ವ್ಯಾಪಾರಿಯ ಬ್ಯಾಂಕ್​.
ಪಾವತಿ ಸೇವೆ ಒದಗಿಸುವ ಮೂರನೇ ಬ್ಯಾಂಕ್​. (Payment Service Provider Bank)
ಫೋನ್​ಪೇ, ಗೂಗಲ್​ ಪೇ, ಭೀಮ್​ ಇತ್ಯಾದಿ ಯುಪಿಐ ಆ್ಯಪ್​ಗಳು.
ಯುಪಿಐನ ಸಂಪೂರ್ಣ ಮೂಲಸೌಕರ್ಯವನ್ನು ನಿರ್ವಹಿಸಲು ಈ ನಾಲ್ಕು ಪಾಲುದಾರರಿಗೆ ವಾರ್ಷಿಕವಾಗಿ ರೂ.20 ಸಾವಿರ ಕೋಟಿ ವೆಚ್ಚವಾಗುತ್ತದೆ. ವರದಿಗಳ ಪ್ರಕಾರ, ಇದರಲ್ಲಿ ವಿತರಿಸುವ ಬ್ಯಾಂಕ್​ನ ವೆಚ್ಚವೇ ಅತ್ಯಧಿಕವಾಗಿರುತ್ತದೆ. ಬ್ಯಾಂಕ್​ಗಳ ಒಟ್ಟು ವೆಚ್ಚ 70% ಆಗಿದ್ದರೆ, ಯುಪಿಐ ಆ್ಯಪ್​ಗಳು 30% ವೆಚ್ಚವನ್ನು ಭರಿಸಬೇಕಾಗುತ್ತದೆ. ಯುಪಿಐ ಅನ್ನು ಉತ್ತೇಜಿಸಲು ಸರ್ಕಾರವು 2021-22ರಿಂದ 2024-25ರವರೆಗೆ ಎಂಡಿಆರ್​ ಅನ್ನು ಶೂನ್ಯವಾಗಿ ಇರಿಸಿತ್ತು. ಬ್ಯಾಂಕ್​ಗಳ ವೆಚ್ಚವನ್ನು ಸರಿದೂಗಿಸಲು ಈ ಐದು ವರ್ಷಗಳಲ್ಲಿ ಒಟ್ಟು ರೂ.8,276 ಕೋಟಿ ಪ್ರೋತ್ಸಾಹಧನವನ್ನು ನೀಡಲಾಗಿತ್ತು. ಆದರೂ, ಇಡೀ ಯುಪಿಐ ವ್ಯವಸ್ಥೆಗೆ ವಾರ್ಷಿಕವಾಗಿ ರೂ.5,000ದಿಂದ ರೂ.6,000 ಕೋಟಿ ನಷ್ಟವಾಗುತ್ತಿತ್ತು. ಈಗ ಎಂಡಿಆರ್​ನಿಂದ ಬರುವ ಆದಾಯದ ಮೂಲಕ ಈ ನಾಲ್ಕೂ ಪಾಲುದಾರರಿಗೆ ಹಣ ನೀಡಲಾಗುತ್ತದೆ. ಯಾರಿಗೆ ಎಷ್ಟು ಪಾಲು ಸಿಗಲಿದೆ ಎಂಬುದರ ಕುರಿತು ಎನ್​ಪಿಸಿಐ ಇನ್ನೂ ಅಧಿಕೃತ ಅಂಕಿ-ಅಂಶಗಳನ್ನು ಪ್ರಕಟಿಸಿಲ್ಲ. ಆದಾಗ್ಯೂ ವರದಿಗಳ ಪ್ರಕಾರ, ಎಂಡಿಆರ್​ನ 40% ವಿತರಿಸುವ ಬ್ಯಾಂಕ್​ಗೆ, 30% ಸ್ವೀಕರಿಸುವ ಬ್ಯಾಂಕ್​ಗೆ, 20% ಫೋನ್​ಪೇ, ಗೂಗಲ್​ ಪೇ ಮುಂತಾದ ಆ್ಯಪ್​ಗಳಿಗೆ ಮತ್ತು 10% ಪಾವತಿ ಸೇವಾ ಬ್ಯಾಂಕ್​ಗೆ ಸಿಗಲಿದೆ.
ಈ ವ್ಯವಹಾರದಿಂದ ವಿದೇಶಿ ಯುಪಿಐ ಆ್ಯಪ್​ಗಳಿಗೆ ಹೆಚ್ಚಿನ ಲಾಭವಾಗುತ್ತಿದ್ದು, ಭಾರತೀಯ ಯುಪಿಐ ಆ್ಯಪ್​ಗಳ ಪಾಲು ತೀರಾ ಕಡಿಮೆಯಾಗಿದೆ ಎಂಬುದು ಗಮನಾರ್ಹ. ಒಟ್ಟು ಯುಪಿಐ ಪಾವತಿಗಳಲ್ಲಿ ಎನ್​ಪಿಸಿಐನ ಭೀಮ್​ ಆ್ಯಪ್​ನ ಪಾಲು 0.86% ಮಾತ್ರ. ಅದೇ ರೀತಿ ಪೇಟಿಎಂ ಮೂಲಕ 8% ಮತ್ತು ಜೋಹೋ ಆ್ಯಪ್​ ಮೂಲಕ 3.5% ಯುಪಿಐ ಪಾವತಿಗಳು ನಡೆಯುತ್ತಿವೆ. ಆದರೆ, ಅಮೆರಿಕದ ವಾಲ್​ಮಾರ್ಟ್​ ಒಡೆತನದ ಫೋನ್​ಪೇ ಮೂಲಕ 47% ಮತ್ತು ಗೂಗಲ್​ ಪೇ ಮೂಲಕ 37% ಪಾವತಿಗಳು ನಡೆಯುತ್ತಿವೆ. ಎಂಡಿಆರ್​ ಶುಲ್ಕದಿಂದ ಫೋನ್​ಪೇಗೆ ವಾರ್ಷಿಕವಾಗಿ ರೂ.700 ಕೋಟಿ ಮತ್ತು ಗೂಗಲ್​ ಪೇಗೆ ರೂ.500 ಕೋಟಿ ಆದಾಯ ಬರಲಿದೆ.
ಯುಪಿಐನಲ್ಲಿ ಯಾವುದೇ ಒಂದು ಕಂಪನಿಯ ಪಾಲು ಶೇ.30ಕ್ಕಿಂತ ಹೆಚ್ಚಿರಬಾರದು ಎಂದು ಎನ್​ಪಿಸಿಐ 2020ರ ನವೆಂಬರ್​ನಲ್ಲಿ ಆದೇಶಿಸಿತ್ತು. ಆದರೆ ಈ ನಿಯಮವನ್ನು ಜಾರಿಗೆ ತರುವ ಗಡುವನ್ನು ಈಗಾಗಲೇ ಮೂರು ಬಾರಿ ವಿಸ್ತರಿಸಲಾಗಿದೆ. ಯುಪಿಐನಲ್ಲಿ ಈ ಎರಡೂ ಅಮೆರಿಕನ್​ ಆ್ಯಪ್​ಗಳ ಒಟ್ಟು ಪಾಲು ಶೇ.84ರಷ್ಟಿರುವುದರ ಬಗ್ಗೆ ಸಂಸದೀಯ ಸಮಿತಿಯು 2024ರಲ್ಲಿ ಕಳವಳ ವ್ಯಕ್ತಪಡಿಸಿದೆ.
ಯುಪಿಐ ಬಳಕೆ ತೀವ್ರವಾಗಿ ಹೆಚ್ಚುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಸೈಬರ್​ ವಂಚನೆಗಳನ್ನು ತಡೆಗಟ್ಟುವುದು, ತಂತ್ರಜ್ಞಾನವನ್ನು ಉನ್ನತೀಕರಿಸುವುದು ಹಾಗೂ ಪಾವತಿ ವ್ಯವಸ್ಥೆಯನ್ನು ಸದೃಢವಾಗಿಡಲು ವೆಚ್ಚವಾಗುತ್ತದೆ, ಆದ್ದರಿಂದ ಎಂಡಿಆರ್​ ಶುಲ್ಕವನ್ನು ವಿಧಿಸಲಾಗಿದೆ ಎಂಬುದು ಸರ್ಕಾರದ ಸಮರ್ಥನೆ. ಎಂಡಿಆರ್​ ಹೆಚ್ಚಿಸುವುದರಿಂದ ಗ್ರಾಹಕರ ಜೇಬಿಗೆ ಯಾವುದೇ ಹೊರೆಯಾಗುವುದಿಲ್ಲ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ. ಆದರೆ ವಾಸ್ತವವಾಗಿ, ಪಾವತಿಗಳ ಮೇಲೆ ವ್ಯಾಪಾರಿಗಳು ಅಥವಾ ವ್ಯವಹಾರಗಳ ಮೇಲೆ ಯಾವುದೇ ಶುಲ್ಕ ವಿಧಿಸಿದಾಗ, ವ್ಯಾಪಾರಿಗಳು ಆ ಹೊರೆಯನ್ನು ಗ್ರಾಹಕರ ಮೇಲೆಯೇ ವರ್ಗಾಯಿಸಿದ ಹಲವು ಉದಾಹರಣೆಗಳಿವೆ.

ಜನಸಾಮಾನ್ಯರಿಗೆ ಹೊರೆಯಾಗುವುದೆ..?

1. ಹಲವು ಬಾರಿ ದೊಡ್ಡ ವ್ಯಾಪಾರಿಗಳು ಮತ್ತು ಆಭರಣ ವ್ಯಾಪಾರಿಗಳು ಎಂಡಿಆರ್​ ನಷ್ಟವನ್ನು ಸರಿದೂಗಿಸಲು ಗ್ರಾಹಕರ ಬಿಲ್​ನಲ್ಲಿ ಸರ್ಚಾರ್ಜ್​ (ಹೆಚ್ಚುವರಿ ಶುಲ್ಕ) ಅನ್ನು ಸೇರಿಸುತ್ತಾರೆ.
2. ಅನೇಕ ಸಂದರ್ಭಗಳಲ್ಲಿ ಕಾರ್ಡ್​ ಮೂಲಕ ಪಾವತಿಸಿದಾಗ ಪೆಟ್ರೋಲ್​ ಬಂಕ್​ಗಳವರು ಇಂಧನ ಸರ್ಚಾರ್ಜ್​ ಹೆಸರಿನಲ್ಲಿ ಗ್ರಾಹಕರಿಂದ ಶೇ.1ರಿಂದ 2ರಷ್ಟು ವಸೂಲಿ ಮಾಡುತ್ತಾರೆ.
3. ರೈಲು ಮತ್ತು ಸಿನಿಮಾ ಹಾಲ್​ ಮುಂತಾದ ಟಿಕೆಟ್​ಗಳನ್ನು ಖರೀದಿಸುವಾಗ "ಕನ್ವೀನಿಯನ್ಸ್​ ಫೀ' ಹೆಸರಿನಲ್ಲಿ ಪಾವತಿ ಗೇಟ್​ವೇ ಶುಲ್ಕವನ್ನು ಪಡೆಯಲಾಗುತ್ತದೆ.
4. ನಿಗದಿತ ಸಂಸ್ಕರಣಾ ವೆಚ್ಚವನ್ನು ತಪ್ಪಿಸಲು ಸಣ್ಣ ಮೊತ್ತದ ಪಾವತಿಗಳಿಗೆ ಕಾರ್ಡ್​ ಸ್ವೀಕರಿಸಲು ವ್ಯಾಪಾರಿಗಳು ನಿರಾಕರಿಸುತ್ತಾರೆ.
5. ಎಂಡಿಆರ್​ ಅಥವಾ ಯಾವುದೇ ಇತರ ರೀತಿಯ ಶುಲ್ಕವನ್ನು ಬಿಲ್​ನಲ್ಲಿ ಸೇರಿಸುವುದು ಕಾನೂನುಬಾಹಿರವಾಗಿದ್ದರೂ, ರೆಸ್ಟೋರೆಂಟ್​ಗಳು ಮತ್ತು ಮಳಿಗೆಗಳು ಬಿಲ್​ನಲ್ಲಿ ಕೆಲವು ಸರ್ವಿಸ್​ ಚಾರ್ಜ್​ (ಸೇವಾ ಶುಲ್ಕ) ಅನ್ನು ಸೇರಿಸುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net