

ಸರಯೂ ವಿ. ಮುತಾಲಿಕ್, ದಾವಣಗೆರೆ
ಕನ್ನಡ ಸಾಹಿತ್ಯಕ್ಕೆ ಹರಿದಾಸ ಪಂಥವು ನೀಡಿದ ಕೊಡುಗೆ ಅಪಾರ. ದಾಸಚತುಷ್ಟಯರೆಂದೇ ಗುರುತಿಸಿಕೊಂಡ ಪುರಂದರದಾಸರು, ವಿಜಯದಾಸರು, ಗೋಪಾಲದಾಸರು ಮತ್ತು ಜಗನ್ನಾಥದಾಸರು ಈ ಪರಂಪರೆಯಲ್ಲಿ ಪ್ರಮುಖರು. ಇವರಲ್ಲಿ ಒಬ್ಬರಾದ ಶ್ರೀ ಜಗನ್ನಾಥದಾಸರು, ಜನತೆಗೆ ಭಗವಂತನ ಅರಿವು ಮೂಡಿಸಿದ ಮಹಾನ್ ಸಾಧಕರು. ಅನೇಕ ದಾಸರನ್ನು ಕೊಡುಗೆಯಾಗಿ ನೀಡಿದ್ದು ರಾಯಚೂರು ಜಿಲ್ಲೆ. ಮಾನ್ವಿ ತಾಲೂಕಿನ ವ್ಯಾಗೋಟಿ ಗ್ರಾಮದಲ್ಲಿ ನರಸಿಂಹದಾಸ ಮತ್ತು ಲಕ್ಷ್ಮೀದೇವಿ ದಂಪತಿಗೆ ತಿರುಪತಿಯ ಶ್ರೀನಿವಾಸನ ಅನುಗ್ರಹದಿಂದ ಜನಿಸಿದ ಇವರಿಗೆ ಶ್ರೀನಿವಾಸ ಎಂದು ಹೆಸರಿಡಲಾಯಿತು.
ಬಾಲ್ಯದಿಂದಲೇ ಚುರುಕಾಗಿದ್ದ ಶ್ರೀನಿವಾಸರನ್ನು ಅಕ್ಕರೆಯಿಂದ ಬೆಳೆಸಿ, ಸಕಾಲಕ್ಕೆ ಉಪನಯನ ಮಾಡಿದರು. ವಿದ್ಯಾಭ್ಯಾಸ ಹಾಗೂ ಶಾಸ್ತ್ರಾಭ್ಯಾಸಕ್ಕಾಗಿ ಮಂತ್ರಾಲಯ ಪೀಠದಲ್ಲಿ ಅಂದು ವಿರಾಜಮಾನರಾಗಿದ್ದ ಶ್ರೀ ವರದೇಂದ್ರ ತೀರ್ಥರ ಬಳಿ ಕಳುಹಿಸಿದರು. ಎಲ್ಲ ಶಾಸ್ತ್ರಗಳನ್ನು ಕಲಿತು ಆಚಾರ್ಯ ಪಟ್ಟ ಪಡೆದರು. ಮಾನ್ವಿಗೆ ಹಿಂದಿರುಗಿ ಗುರುಕುಲ ಸ್ಥಾಪಿಸಿದರು. ಆದರೆ, ಪಾಂಡಿತ್ಯ ಮತ್ತು ಕೀರ್ತಿಯಿಂದಾಗಿ ಶ್ರೀನಿವಾಸಾಚಾರ್ಯರಲ್ಲಿ ಕೊಂಚ ಅಹಂ ಬೆಳೆಯಿತು. ಹರಿದಾಸರಿಗೆ ಸಂಸ್ಕೃತ ಜ್ಞಾನವಿಲ್ಲವೆಂದು ಅವರನ್ನು ದೂರ ಇಡುತ್ತಿದ್ದರು.
ಭಗವಂತನ ಇಚ್ಛೆಯಂತೆ, ಅವರನ್ನು ಹರಿದಾಸರನ್ನಾಗಿ ಪರಿವರ್ತಿಸಲು ಒಂದು ಘಟನೆ ನಡೆಯಿತು. ಒಂದು ದಿನ, ವಿಜಯದಾಸರ ಔತಣವನ್ನು ಹೊಟ್ಟೆ ನೋವಿನ ನೆಪ ಹೇಳಿ ತಪ್ಪಿಸಿಕೊಂಡರು. ಮರುದಿನದಿಂದಲೇ ಶ್ರೀನಿವಾಸಾಚಾರ್ಯರಿಗೆ ಅತಿಯಾದ ಹೊಟ್ಟೆ ನೋವು ಶುರುವಾಯಿತು. ಎಷ್ಟೇ ಚಿಕಿತ್ಸೆ ಪಡೆದರೂ ನೋವು ಕಡಿಮೆಯಾಗಲಿಲ್ಲ. ಆಗ ಮಂತ್ರಾಲಯದಲ್ಲಿ ಗುರುಗಳು ಕನಸಿನಲ್ಲಿ ಬಂದು, ವಿಜಯದಾಸರ ಬಳಿ ಹೋಗಲು ಸೂಚಿಸಿದರು.
ದಾಸರ ಅನುಗ್ರಹದಿಂದ ಹೊಸ ಜೀವನ: ವಿಜಯದಾಸರು ಶ್ರೀನಿವಾಸಾಚಾರ್ಯರನ್ನು ಗೋಪಾಲದಾಸರ ಬಳಿ ಕಳುಹಿಸಿದರು. ಗೋಪಾಲದಾಸರು ಧನ್ವಂತರಿಯನ್ನು ಅಭಿಮಂತ್ರಿಸಿ ದಿನವೂ ಜೋಳದ ರೊಟ್ಟಿ ನೀಡುತ್ತಿದ್ದರು. ಆ ಪ್ರಸಾದವನ್ನು ಸ್ವೀಕರಿಸಿದ ಶ್ರೀನಿವಾಸಾಚಾರ್ಯರು ಸಂಪೂರ್ಣವಾಗಿ ಗುಣಮುಖರಾದರು. ದಾಸರ ಅನುಗ್ರಹದಿಂದ ಹೊಟ್ಟೆನೋವು ಗುಣವಾದ ನಂತರ, ಶ್ರೀನಿವಾಸಾಚಾರ್ಯರು ವಿಜಯದಾಸರ ಶಿಷ್ಯರಾದರು. ಆದರೆ, ಶ್ರೀನಿವಾಸಾಚಾರ್ಯರಿಗೆ ಅಲ್ಪಾಯುಷ್ಯ ಎಂಬುದನ್ನು ಅರಿತ ವಿಜಯದಾಸರು, ಗೋಪಾಲದಾಸರಿಂದ 40 ವರ್ಷಗಳ ಆಯುಷ್ಯ ದಾನ ಮಾಡಿಸಿದರು.
ಆಗ ಹೊಸ ಚೈತನ್ಯ ಪಡೆದ ಶ್ರೀನಿವಾಸಾಚಾರ್ಯರು ಪಂಢರಪುರಕ್ಕೆ ತೆರಳಿ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡುವಾಗ ಜಗನ್ನಾಥ ವಿಠ್ಠಲ ಎಂಬ ಶಿಲೆ ದೊರೆಯಿತು. ಆಗ ಹರಿದಾಸರ ಶಕ್ತಿಯ ಅರಿವು ಆಚಾರ್ಯರಿಗೆ ಸಂಪೂರ್ಣವಾಗಿ ಆಯಿತು. ಮನಸ್ಸಿನಲ್ಲಿ ಸ್ಪೂರ್ತಿ ತುಂಬಿ, ‘ತಟಿತ್ಕೋಟಿನಿಭ ಕಾಯ ಜಗನ್ನಾಥ ವಿಠಲಯ್ಯ...’ ಎಂದು ಹಾಡಿದರು. ತಮ್ಮೊಳಗಿನ ಅಹಂ ತೊರೆದು, ಆಚಾರ್ಯ ಪಟ್ಟವನ್ನು ತ್ಯಜಿಸಿ ಹರಿದಾಸ ಜೀವನವನ್ನು ಸ್ವೀಕರಿಸಿದರು. ‘ಜಗನ್ನಾಥ ವಿಠ್ಠಲ’ ಎಂಬ ಅಂಕಿತನಾಮದಿಂದ ನೂರಾರು ಕೀರ್ತನೆಗಳನ್ನು ರಚಿಸಿದರು.
ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ: ಶ್ರೀ ಜಗನ್ನಾಥದಾಸರು ದಾಸ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅನೇಕ ಕೀರ್ತನೆ, ಸುಳಾದಿ, ಉಗಾಭೋಗ, ತತ್ವ ಸುವ್ವಾಲಿ ರಚಿಸಿದರು. ಅವರು ರಚಿಸಿದ ಕೃತಿಗಳಲ್ಲಿ ಶ್ರೀಹರಿ ಕಥಾಮೃತಸಾರ ಪ್ರಮುಖವಾದುದು. ತಮ್ಮ 82ನೇ ವಯಸ್ಸಿನಲ್ಲಿ, ಭಾದ್ರಪದ ಶುದ್ಧ ನವಮಿಯಂದು ತಮ್ಮ ದೇಹತ್ಯಾಗ ಮಾಡಿ ಹರಿಪುರ ಸೇರಿದರು.