

ಮಂಗಳೂರು: ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕರೊನಾ ಸೋಂಕಿಗೆ ಔಷಧ ಅಭಿವೃದ್ಧಿಪಡಿಸುವಲ್ಲಿ ಮಂಗಳೂರು ಮೂಲದ ವೈದ್ಯ ಡಾ.ವಿಶಾಲ್ ರಾವ್ ನೇತೃತ್ವದ ತಂಡ ಬಹುತೇಕ ಯಶಸ್ವಿಯಾಗಿದೆ. ಈ ಔಷಧ ಕ್ಲಿನಿಕಲ್ ಟ್ರಯಲ್ನ ಅಂತಿಮ ಹಂತ ತಲುಪಿರುವುದಾಗಿ ಬೆಂಗಳೂರಿನ ಎಚ್ಸಿಜಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ, ಪ್ರಾದೇಶಿಕ ನಿರ್ದೇಶಕ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ. ಮನುಷ್ಯನ ದೇಹದೊಳಗಿನ ವೈರಸ್ ಕೊಲ್ಲುವ ಇಂಟರ್ ಫೆರೋನ್ (ಪೊ›ಟೀನ್) ಪದಾರ್ಥದ ಕಣಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಕೊವಿಡ್ -19 ಪ್ರಕರಣದಲ್ಲಿ ಈ ಕಣ ಬಿಡುಗಡೆಯಾಗುವುದಿಲ್ಲ. ಸೋಂಕಿತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿರುವುದೇ ಇದಕ್ಕೆ ಕಾರಣ.
ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಡಾ.ವಿಶಾಲ್ ರಾವ್ ಕಾಲೇಜು ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದು ಬೆಳಗಾವಿಯಲ್ಲಿ ಎಂಬಿಬಿಎಸ್ ಮುಗಿಸಿದರು. ಮುಂಬೈ ಟಾಟಾ ಆಸ್ಪತ್ರೆಯಲ್ಲಿ ಎಂಎಸ್ ಹಾಗೂ ಲಂಡನ್ನಲ್ಲಿ ಎಫ್ಆರ್ಸಿಎಸ್ ಪದವಿ ಗಳಿಸಿದ್ದಾರೆ. ಅವರೊಂದಿಗೆ ಡಾ.ಗುರುರಾಜ ರಾವ್ ಹಾಗೂ ಡಾ.ಜ್ಯೋತ್ಸಾ್ನ ರಾವ್ ಕೂಡಾ ಈ ಹೊಸ ಔಷಧದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದಾರೆ. ಇದೊಂದು ಸರಳ ಚಿಕಿತ್ಸೆ. ಇಂಜೆಕ್ಷನ್ ಅಥವಾ ಐವಿ ಮೂಲಕ ದೇಹಕ್ಕೆ ಸೈಟೊಕೈನ್ಗಳನ್ನು ಸೇರಿಸುವ ಮೂಲಕ ವೈರಸ್ ವಿರುದ್ಧ ಕಾದಾಡುವ ಶಕ್ತಿಯನ್ನು ದೇಹದ ಜೀವಕಣಗಳಿಗೆ ನೀಡುವುದು. ಇದನ್ನು ಆದಷ್ಟು ಬೇಗ ಪರಿಶೀಲನೆ ಮಾಡುವಂತೆ ಸರ್ಕಾರಗಳಿಗೆ ಕೋರಲಾಗಿದೆ ಎಂದು ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.
ಕಾರ್ಯನಿರ್ವಹಣೆ ಹೇಗೆ
ಡಾ.ರಾವ್ ಪ್ರಕಾರ, ದೇಹದಲ್ಲಿ ಕರೊನಾ ವೈರಸ್ನಿಂದ ಕಳೆದುಹೋದ ರೋಗನಿರೋಧಕ ಶಕ್ತಿಯನ್ನು ಹೊಸ ಔಷಧದ ಮೂಲಕ ಮರಳಿ ಪಡೆಯಬಹುದು. ಸೈಟೊಕೈನ್ಗಳ ಮಿಶ್ರಣವನ್ನು ಸಿದ್ಧಪಡಿಸಿದ್ದು, ಇದನ್ನು ಕರೊನಾ ಪಾಸಿಟಿವ್ ಇರುವ ರೋಗಿಗಳ ದೇಹಕ್ಕೆ ನೀಡಿದಾಗ ಅವರ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಸೈಟೊಕೈನ್ಗಳು ದೇಹಕ್ಕೆ ಸೇರಿದ ನಂತರ ಜೀವಕಣಗಳು ಇಂಟರ್ಫೆರೊನ್ ಎನ್ನುವ ರಾಸಾಯನಿಕವನ್ನು ಬಿಡುಗಡೆಗೊಳಿಸುತ್ತವೆ, ಇದರಿಂದ ವೈರಸ್ಗಳು ನಾಶವಾಗುತ್ತವೆ.