

ಶರಣರಾದ ಚೆನ್ನಬಸವಣ್ಣ, ಸೊಡ್ಡಳ ಬಾಚರಸ, ಹಡಪದ ಅಪ್ಪಣ್ಣ, ಮೋಳಿಗೆ ಮಾರಯ್ಯ, ಮಡಿವಾಳ ಮಾಚಯ್ಯ-ಮುಂತಾದ ಶರಣರು ಅಣ್ಣ ಬಸವಣ್ಣನ ಸುತ್ತ ನೆರೆದಿದ್ದಾರೆ. ಬಸವಣ್ಣನು ಅಲ್ಲಮನ ಬರುವಿಕೆಗಾಗಿ ತಹತಹಿಸುತ್ತಿದ್ದಾನೆ. ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಅಲ್ಲಮನ ಬಗೆಗೆ ಚಿಂತಿಸುತ್ತಿದ್ದಾರೆ. ಇಂಥದೊಂದು ಅಪೂರ್ವ ಪ್ರಸಂಗವನ್ನು ಶಿವಗಣಪ್ರಸಾದಿ ಮಹಾದೇವಯ್ಯ ಶೂನ್ಯ ಸಂಪಾದನೆಯಲ್ಲಿ ಚಿತ್ರಿಸುತ್ತಿದ್ದಾನೆ.
ಅಲ್ಲಮನು ಎಡದ ಕೈಯಲ್ಲಿ ಹಾಲಿನ ಬಟ್ಟಲನ್ನು ಬಲದ ಕೈಯಲ್ಲಿ ಶಿಕ್ಷಣದಂಡವನ್ನು ಹಿಡಿದುಕೊಂಡು ಬರುತ್ತಿದ್ದಾನೆಂದು ಬಸವಣ್ಣ ಭಾವಿಸುತ್ತಿದ್ದಾನೆ. ‘ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಮಂದಿರಂ! ಅತಿಭಕ್ತಾ್ಯ ಲಿಂಗತುಷ್ಟಿರಪಹಾಸಾಚ್ಚ ದಂಡನಂ!’ ಎಂಬ ಪೂರ್ವದ ಮಾತುಂಟು. ಆ ಮಾತಿನಂತೆ ‘ಭಕ್ತಿಯ ಪಥವನ್ನು ತೋರಿಸುವ ತಂದೆ ಅವನೊಬ್ಬನೇ.’ ಈ ಮಾತನ್ನು ಹೇಳಿದ ಚಿಕ್ಕದಣ್ಣಾಯಕರು ಹೀಗೆಂದು ಹೇಳುತ್ತಾರೆ: ‘ಮನಸ್ಸಿನಲ್ಲಿ ಬಂದದ್ದೆಲ್ಲ ಮಂಗಳವೇ. ದಿಟದ ದಾರಿಯನ್ನು ಹುಡುಕುವವನಿಗೆ ಅರಕೆ ಆಗಲು ಸಾಧ್ಯವಿಲ್ಲ. ಪ್ರಭುದೇವರು ಬಂದೇ ಬರುತ್ತಾರೆ. ಇದು ತಪ್ಪಲು ಸಾಧ್ಯವಿಲ್ಲ’ -ಎಂದು ನುಡಿದಾಗ ಇದಕ್ಕೆ ಮಡಿವಾಳ ಮಾಚಯ್ಯ ಹೀಗೆ ಉತ್ತರಿಸುತ್ತಾರೆ: ‘ಭಕ್ತ-ಭಗವಂತರಿಗೆ ಭೇದವಿಲ್ಲ, ಕಾಯಕ್ಕೆ ಕಾಯ, ಪ್ರಾಣಕ್ಕೆ ಪ್ರಾಣ-ಇರುವವರಿಗೆ ಅಭೇದ ಉಂಟು.’ ನಿಜವಾದ ರೀತಿಯಲ್ಲಿ ಬಯಸಿದರೆ ಭಗವಂತನು ಭಕ್ತನೆಡೆಗೆ ಬಂದೇ ಬರುತ್ತಾನೆ ಎಂದು ದಿಟದ ನುಡಿಯನ್ನೇ ನುಡಿಯುತ್ತಾರೆ. ಆಗ ಬಸವಣ್ಣ ಮಡಿವಾಳ ಮಾಚಯ್ಯನಿಗೆ ಹೇಳುವ ಮಾತಿದು:
ಹಸಿದಳುವ ಶಿಶುವಿಂಗೆ ತಾಯಮೊಲೆ ಕೊಟ್ಟರೆ/ಆ ಶಿಶು ಜೀವಿಸದಿಪ್ಪುದೆ ಹೇಳಯ್ಯ?/ಪ್ರಾಣವಲ್ಲಭನ ಅಗಲಿಕೆಯಿಂದ ಪ್ರಾಣವಿಯೋಗವಾಗುತ್ತಿಹ/ಹೆಂಗೂಸಿಂಗೆ ಆ ಪ್ರಾಣವಲ್ಲಭ ಬಂದರೆ ವಿರಹ/ಸಂತೈಸದಿಪ್ಪುದೆ ಹೇಳಯ್ಯ?/ಕೂಡಲಸಂಗಮದೇವರು ಸಾಕ್ಷಿಯಾಗಿ/ಪ್ರಭುವೆನ್ನ ಮನೆಗೆ ಬಂದರೆ, ಎನ್ನಬಯಕೆ ಕೈಸಾರಿ/ಚೆನ್ನಬಸವಣ್ಣನ ಕರುಣದ ಕಂದನಾಗಿ ಉಳಿವೆನು/ ಕಾಣಾ ಮಡಿವಾಳ ಮಾಚಯ್ಯ (ಶೂನ್ಯ ಸಂ.ಪುಟ. 187)
-ಈ ವಚನದಲ್ಲಿ ಬಸವಣ್ಣ ಎರಡು ಪ್ರತಿಮೆಗಳನ್ನು ನಿರೂಪಿಸಿದ್ದಾನೆ. ಇಲ್ಲಿ ಮೊದಲಿಗೆ ಶಿಶು-ತಾಯಿಯ ಪ್ರತಿಮೆ ಬಂದಿದೆ. ನಂತರ ಪ್ರಾಣವಲ್ಲಭ ಮತ್ತು ಪ್ರಾಣವಲ್ಲಭೆಯ ಪ್ರತಿಮೆಗಳು. ಮೊದಲನೆಯ ಪ್ರತಿಮೆಗೆ ಭಾವಶುದ್ಧತೆಯೂ ಎರಡನೆಯ ಪ್ರತಿಮೆಗೆ ಭಾವಸಾಂದ್ರತೆಯೂ ಉಂಟು. ಶಿಶು-ಪ್ರಾಣವಲ್ಲಭೆ ಈ ಪ್ರತಿಮೆಗಳು ಬಸವಣ್ಣನನ್ನು ಸಂಕೇತಿಸಿದರೆ; ತಾಯಿ ಮತ್ತು ಪ್ರಾಣವಲ್ಲಭ ಪ್ರತಿಮೆಗಳು ಅಲ್ಲಮನನ್ನು ಸಂಕೇತಿಸುತ್ತವೆ. ಬಸವಣ್ಣನ ತೀವ್ರತಮ ನಿರೀಕ್ಷೆಯನ್ನು ಈ ವಚನವು ಪ್ರತಿಮಿಸುತ್ತದೆ.
ಅಣ್ಣ ಬಸವಣ್ಣನು ಕೇವಲ ಬೌದ್ಧಿಕ ನೆಲೆಯಲ್ಲಿ ಅಲ್ಲಮನನ್ನು ನಿರೀಕ್ಷಿಸುತ್ತಿಲ್ಲ. ಅವನ ನಿರೀಕ್ಷೆ ಬೇರೆ ತೆರನಾದುದು. ಅದು ಅಣ್ಣನು ಅಂತಃಸ್ಪುರಣೆಯಿಂದ ಅಲ್ಲಮನನ್ನು ನಿರೀಕ್ಷಿಸುತ್ತಿದ್ದಾನೆ. ಇದು ಈ ಮಾತಿನಿಂದ ರುಜುವಾತಾಗುತ್ತಿದೆ. ‘ಇಂತು ನುಡಿವುತ್ತಿರ್ಪ ಪ್ರಸ್ತಾವದೊಳು ಪ್ರಭುದೇವರ ಬರವಿನ ಸೂಚನೆ ಬಸವರಾಜದೇವರಿಗೆ ತೋರು
ತ್ತಿದ್ದಿತು’ ಎಂದು ಶಿವಗಣಪ್ರಸಾದಿ ಮಹಾದೇವಯ್ಯ ವಚನಾನು ಸಂಧಾನದ ನೆಲೆಯಲ್ಲಿ ಹೇಳುತ್ತಾನೆ. ಇಲ್ಲಿ ಬರುವ ‘ತೋರುತ್ತಿದ್ದಿತು’ ಎಂಬ ಕ್ರಿಯಾಪದದಲ್ಲಿ ಆ ಸೂಚನೆಯು ಅಡಗಿದೆ. ಪ್ರಭುದೇವರ ಕುರಿತ ಶರಣರ ಸಂವಾದದಲ್ಲಿ ಸೊಡ್ಡಳ ಬಾಚರಸರು ಬಸವಣ್ಣನನ್ನು ಕುರಿತು ಹೇಳುವ ಮಾತು ಗಮನೀಯ! ಮನಸ್ಸಿನ ಒಡೆಯ ಮನೆಗೆ ಬರದೆ ಇನ್ನೆಲ್ಲಿ ಹೋಗುತ್ತಾನೆ. ಅವನು ಮನಸ್ಸಿಗೆ ಮನೋಹರ; ಚಿತ್ತಕ್ಕೂ ಮನೋಹರ! ನನಗೆ ಅಲ್ಲಮಪ್ರಭು ಬರುವುದು ನಿಶ್ಚಿತ. ಪ್ರಭುದೇವನ ಬರವನೀಗಳೆ ತೋರುವೆನಯ್ಯ ಸಂಗನ ಬಸವಣ್ಣ-ಎಂದು ಸೊಡ್ಡಳ ಬಾಚರಸರು ನುಡಿಯುತ್ತಾರೆ. ಇದಕ್ಕೆ ಬಸವಣ್ಣನವರು ‘ಶರಣರ ನುಡಿ ತಪ್ಪುವುದೆ? ಎಂದು ಕೃತನಿಶ್ಚಯಕ್ಕೆ ಬರುತ್ತಾರೆ! ಇದೇ ಸಮಯಕ್ಕೆ ಹಡಪದ ಅಪ್ಪಣ್ಣನವರು:
ಬಯಸುವ ಬಯಕೆ ಕೈಸಾರುವಂತೆ, ನಿಧಿನಿಧಾನ ಮನೆಗೆ ಬಪ್ಪಂತೆ/ಪರಿಮಳವನರಸಿ ಬಪ್ಪ ಭ್ರಮರನಂತೆ/ಚಿಂತಾಮಣಿಯ ಪುತ್ಥಳಿ ನಡೆಗಲಿತಂತೆ/ ಬಸವಪ್ರಿಯ ಕೂಡಲ ಚೆನ್ನಸಂಗನಲ್ಲಿ/ಪ್ರಭುದೇವರ ಬರವು ಕಾಣಬರುತ್ತಿದೆ ನೋಡಾ ಸಂಗನ ಬಸವಣ್ಣ (ಅದೇ.ಪುಟ-187)
ಶರಣರು ಕೇವಲ ಬಾಹ್ಯ ಆಚಾರಗಳನ್ನು ಗಮನಿಸುವವರಲ್ಲ. ಅವರ ಮನಸ್ಸಿನ ಇಂಗಿತ ಅಪರಂಪಾರ. ಪ್ರಭುದೇವರು ಬರುತ್ತಿದ್ದಾರೆಂಬ ಸೂಚನೆ ಮನೋಗೋಚರವಾಗುತ್ತಿದೆ. ಇದು ಮನೋಯೋಗದ ಪೂರ್ವಸೂಚನೆ!
ಶರಣರ ಮನಸ್ಸು ದೃಢನಿಶ್ಚಯದಿಂದ ಕೂಡಿದೆ. ಪ್ರತಿಯೊಬ್ಬ ಶರಣರೂ ಅಲ್ಲಮನ ಧ್ಯಾನದಲ್ಲೇ ಮುಳುಗಿದ್ದಾರೆ. ಇದಕ್ಕೆ ಅನುಗುಣವಾಗಿ ಅಲ್ಲಮನ ಮನೋಕಲ್ಪವು ಪ್ರತಿಯೊಬ್ಬರಲ್ಲೂ ಪ್ರತಿಮಿಸುತ್ತಿದೆ! ಇದು ನಿಶ್ಚಿತವೆಂಬುದು ಪ್ರತಿಯೊಬ್ಬ ಶರಣರಲ್ಲೂ ಕೃತನಿಶ್ಚಯವಾಗುತ್ತಿದೆ. ಅಲ್ಲಮನು ಯಾವ ರೂಪದಿಂದ ಬರುತ್ತಾನೆಂಬುದು ಯಾವ ಶರಣರಿಗೂ ತಿಳಿಯುತ್ತಿಲ್ಲ. ಶರಣರಲ್ಲಿ ಮೈದೋರಿದ ಈ ಭಾವನೆ ಅಲ್ಲಮನಿಗೂ ತಿಳಿದಿದೆ. ಅವನು ತನ್ನ ಸ್ವರೂಪವನ್ನು ಮರೆಮಾಚಿಕೊಂಡು ಕಲ್ಯಾಣಪಟ್ಟಣಕ್ಕೆ ಬರುತ್ತಾನೆ! ಅವನು ಯಾವ ರೂಪವನ್ನು ಧರಿಸಿ ಬಂದನೆಂಬುದನ್ನು ಚಾಮರಸ ಮತ್ತು ಮಹಾದೇವಯ್ಯ ಒಂದೇ ಬಗೆಯಲ್ಲಿ ಹೇಳುತ್ತಿದ್ದಾರೆ! (ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)