ರಕ್ತದಲ್ಲಿ ಬಿದ್ದು ಒದ್ದಾಡುತ್ತಿರುವ ಜೀವಚ್ಛವಗಳು

Sudina Shrirama
Published on

ಶ್ರೀ ವಸಿಷ್ಠರು ಶ್ರೀರಾಮನಿಗೆ ವಿದೂರಥನೆಂಬ ಸಾಮ್ರಾಟನ ಮತ್ತು ಸಿಂಧುರಾಜನ ಪರಿವಾರದ ನಡುವೆ ನಡೆದಿರುವ ಘೊರ ಯುದ್ಧವನ್ನು ವರ್ಣಿಸಿದ ನಂತರ ಇದೀಗ ಯುದ್ಧಾನಂತರದ ಪರಿಸ್ಥಿತಿಯನ್ನು ವರ್ಣಿಸುತ್ತಿದ್ದಾರೆ. ಯುದ್ಧಾನಂತರದ ಪರಿಸ್ಥಿತಿಯನ್ನು ನೋಡಿದರೆ ‘ಅಯ್ಯೋ! ಇಂತಹ ಘೊರ ಯುದ್ಧವಾಗಬಾರದಿತ್ತು’ ಎಂದು ಅನ್ನಿಸುತ್ತದೆ. ಅಂತಹ ಕ್ರೂರ ರೀತಿಯ ಹಿಂಸೆಗಳು ಅಲ್ಲಿ ಆಗಿರುತ್ತವೆ. ಇವತ್ತು ಜಗತ್ತಿನಲ್ಲಿ ಯುದ್ಧದ ವಾತಾವರಣವಿದೆ. ಹಿಂದಿನ ಕಾಲದ ಯುದ್ಧಕ್ಕಿಂತಲೂ ಈ ಕಾಲದ ಯುದ್ಧ ತುಂಬಾ ಭೀಕರ. ಹಿಂದಿನ ಕಾಲದ ಯುದ್ಧಗಳು ಪರಿಸರದ ಮೇಲೆ ಮತ್ತು ಜನಾಂಗದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತಿರಲಿಲ್ಲ. ಆದರೆ ಈ ಕಾಲದ ಯುದ್ಧಗಳು ಪ್ರಕೃತಿಯನ್ನು ನಾಶಪಡಿಸುತ್ತವೆ. ಮನುಷ್ಯನ ಶರೀರದ ಮೇಲೆ ದುಷ್ಪರಿಣಾಮವನ್ನುಂಟುಮಾಡುವ ಅಸ್ತ್ರಗಳು ಈ ಕಾಲದಲ್ಲಿ ಇವೆ. ಕೆಲವು ವಿಧದ ರಾಸಾಯನಿಕ ಅಸ್ತ್ರಗಳು ಮುಂದಿನ ತಲೆಮಾರುಗಳವರೆಗೂ ದುಷ್ಪರಿಣಾಮವನ್ನುಂಟುಮಾಡುತ್ತಿರುತ್ತವೆ.

ಆದ್ದರಿಂದ ಈ ಕಾಲದ ಯುದ್ಧ ತುಂಬಾ ಭೀಕರವಾಗಿದೆ. ಇಲ್ಲಿ ಬಂದಿರುವ ಯುದ್ಧದಲ್ಲಿ ಆಗಿರುವ ಹಿಂಸೆ ಮತ್ತು ಪ್ರಾಣಹಾನಿಗಳು ಯುದ್ಧ ಮಾಡಬೇಕೆಂದು ಹಪಹಪಿಸುವ ನಾಯಕರಿಗೆ ಯುದ್ಧವು ಒಳ್ಳೆಯದಲ್ಲ ಎಂಬ ಸಂದೇಶವನ್ನು ಕೊಡುತ್ತಿವೆ. ಹಿಂದೆಯೇ ಅನೇಕ ಸಲ ತಿಳಿಸಿದಂತೆ ಈ ಯುದ್ಧವನ್ನು ಲೀಲಾಮಹಾರಾಣಿಯು ಶ್ರೀದೇವಿಯೊಂದಿಗೆ ಆಗಮಿಸಿ ನೋಡುತ್ತಿದ್ದಾಳೆ.

ಶ್ರೀ ವಸಿಷ್ಠರ ಉಪದೇಶ ಮುಂದುವರೆಯುತ್ತಿದೆ - ‘ಶ್ರೀರಾಮ! ಹರಿಯುತ್ತಿರುವ ರಕ್ತದ ನದಿಗಳ ತೀರಗಳಲ್ಲಿ ಕುಂತಾಯುಧ ಎಂಬ ಎತ್ತರದ ಆಯುಧಗಳು ಎತ್ತರದ ಮರಗಳಂತೆ ನಿಂತ ಸ್ಥಿತಿಯಲ್ಲಿ ಬಿದ್ದಿವೆ. ಇದನ್ನು ನೋಡಿದರೆ ಶಿಲೆಯುಳ್ಳ ಶಿಖರದ ತುದಿಯಲ್ಲಿ ಹುಟ್ಟಿದ ತಾಳವೃಕ್ಷದ ಸಮೂಹವು ಅಲ್ಲಿ ಹರಡಿಕೊಂಡಿರುವಂತೆ ಕಾಣುತ್ತಿತ್ತು.’

‘ಸತ್ತು ಬಿದ್ದಿರುವ ಆನೆಗಳ ಶರೀರಗಳ ಮೇಲೆ ಆಯುಧಗಳು ಚುಚ್ಚಿಕೊಂಡು ನಿಂತಿವೆ. ಆ ಆಯುಧಗಳಿಗೆ ಇರುವ ಹೊಳಪಿನ ಕಿರಣಗಳನ್ನು ನೋಡಿದರೆ ಪುಷ್ಪಗಳಿಂದ ಅಲಂಕೃತವಾಗಿರುವ ಗಿಡಗಳಂತೆ ಕಾಣುತ್ತಿತ್ತು. ಹದ್ದುಗಳು ಬಿದ್ದಿರುವ ಶವಗಳ ಕರುಳುಗಳನ್ನು ಮತ್ತು ನಾಲಿಗೆಗಳನ್ನು ಎಳೆದು ಹೊರಹಾಕುತ್ತಿವೆ. ಕರುಳುಗಳೆಂಬ ಹಗ್ಗಗಳಿಂದ ಕೂಡಿದ ಬಲೆಗಳಿಂದ ಅಲ್ಲಿರುವ ಆಕಾಶ (ಅವಕಾಶ) ಗಳೆಲ್ಲ ತುಂಬಿಹೋಗಿವೆ. ರಕ್ತದ ನದಿಗಳ ತೀರಗಳಲ್ಲಿ ನಿಂತುಕೊಂಡ ಸ್ಥಿತಿಯಲ್ಲಿ (ಭೂಮಿಗೆ ಲಂಬವಾಗಿ) ಬಿದ್ದಿರುವ ಕುಂತಾಯುಧಗಳು ಎತ್ತರದ ಮರಗಳಂತೆ ಕಾಣುತ್ತಿವೆ. ರಕ್ತದ ಸರೋವರದ ಮೇಲ್ಭಾಗದಲ್ಲಿ ತೇಲುತ್ತಿರುವ ಪತಾಕೆಗಳು ಸರೋವರದಲ್ಲಿರುವ ಕಮಲಗಳಂತೆ ಕಾಣುತ್ತಿದ್ದವು. ರಕ್ತದ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಮನುಷ್ಯರು ದಾಟಿ ಬರಲಾರದೆ ತಮ್ಮ ಆತ್ಮೀಯರನ್ನು ಕೂಗಿ ಕರೆಯುತ್ತಿದ್ದರು.

ದೊಡ್ಡ ಆನೆಗಳು ಆಯುಧಗಳ ಆಘಾತಕ್ಕೆ ಒಳಗಾಗಿ ಸತ್ತುಬೀಳುತ್ತಿರುವಾಗ ಕೆಳಗೆ ಸಿಲುಕಿಕೊಂಡಿರುವ ಮನುಷ್ಯರು ಸೊಂಟವೇ ಮೊದಲಾದ ಅಂಗಗಳಲ್ಲಿ ಪೆಟ್ಟಾಗಿ ಬಿದ್ದಿದ್ದಾರೆ. ಅಲ್ಲಿಂದ ಹೊರಗೆ ಸ್ವತಃ ಬರಲಾಗದೇ ಬೇರೆಯವರ ಸಹಾಯಕ್ಕಾಗಿ ದೈನ್ಯದಿಂದ ನೋಡುತ್ತಿರುವ ದೃಶ್ಯ.’ ‘ಕಬಂಧಗಳೆಂಬ ಅರ್ಧ (ರುಂಡಕಡಿಯಲ್ಪಟ್ಟಿದ್ದರಿಂದ ಉಳಿದಿರುವ ಕುತ್ತಿಗೆಯ ಕೆಳಗಿನ) ಶರೀರಗಳನ್ನು ನೋಡಿದರೆ ಆಯುಧಗಳಿಂದ ಕತ್ತರಿಸಲ್ಪಟ್ಟ ಲತೆಗಳಿರುವ ಮರಗಳೋ ಎಂಬ ಸಂದೇಹ ಉಂಟಾಗು ವಂತಿತ್ತು. ರಕ್ತದ ನದಿಗಳಲ್ಲಿ ತೇಲುತ್ತಿರುವ ಆನೆಗಳ ಮೇಲಿನ ಆಸನಗಳು ಮತ್ತು ಆನೆಗಳಿಗೆ ಹೊದಿಸುವ ಬಟ್ಟೆಗಳು ನೌಕೆಗಳಂತೆ ಕಾಣುತ್ತಿದ್ದವು. ರಕ್ತದ ಝುರಿಗಳಲ್ಲಿ ಎದ್ದು ಕಾಣುತ್ತಿರುವ ಬಿಳಿ ಬಟ್ಟೆ ಝುರಿಯ ಮಧ್ಯದಲ್ಲಿರುವ ನೊರೆಯ ಸಮೂಹದಂತೆ ಗೋಚರವಾಗುತ್ತಿತ್ತು. ಯುದ್ಧ ಸಮಾಪ್ತಿಯ ನಂತರ ಆಗಬೇಕಾದ ಕೆಲಸಗಳಿಗೋಸ್ಕರ ಯುದ್ಧರಂಗದಲ್ಲಿ ಓಡಾಡಲು ನಿಯುಕ್ತರಾದ ಸೇವಕರು ಅತ್ತಿಂದ ಇತ್ತ ಕ್ಷಿಪ್ರಗತಿಯಿಂದ ಸಂಚರಿಸುತ್ತಿದ್ದರು. ಅವರ ಓಡಾಟಕ್ಕೋಸ್ಕರ ನೆರೆದಿರುವ ಜನಸಮೂಹದ ನಡುವೆ ದಾರಿಯಾಗಲು ಜನಗಳನ್ನು ವಿಭಾಗಿಸಿ ನಿಲ್ಲಿಸಲಾಗಿತ್ತು.’

‘ರುಂಡಗಳು ಕತ್ತರಿಸಲ್ಪಟ್ಟು ಪ್ರಾಣಬಿಡಲುವಿಲಿವಿಲಿ ಒದ್ದಾಡುತ್ತಿರುವ ಕಬಂಧಗಳು ಬೀಳುತ್ತ ಬೀಳುತ್ತ ಶಬ್ದಮಾಡುತ್ತಿರುವುದು ಅತ್ಯಂತ ಕ್ರೂರವಾದ ದೃಶ್ಯ. ರಥಗಳು ಮುರಿದುತಲೆಕೆಳಗಾಗಿ ಬಿದ್ದಿರುವುದರಿಂದ ಮೇಲೆ ಬಿದ್ದಿರುವ ದಪ್ಪನೆಯ ಅಕ್ಷಗಳಿರುವ ಚಕ್ರಗಳಲ್ಲಿ ಅಲ್ಲಿ ಓಡಾಡುತ್ತಿರುವ ಸೈನ್ಯದ ಜನರ ಕಾಲು ಸಿಲುಕಿಕೊಂಡು ಮುರಿದುಹೋಗುತ್ತಿತ್ತು. ಯುದ್ಧದಲ್ಲಿ ತೀವ್ರ ಗಾಯಗೊಂಡು ಸಾಯುತ್ತಿರುವ ಕುದುರೆ, ಆನೆ ಮುಂತಾದ ಪ್ರಾಣಿಗಳು ರಕ್ತವನ್ನು ಸುರಿಸುತ್ತಾ ಭಾಂಕಾರಗೈಯ್ಯುತ್ತಿದ್ದವು, ನಿಟ್ಟುಸಿರುಬಿಡುತ್ತಾ ಫೇತ್ಕಾರ ಗೈಯುತ್ತಿದ್ದವು. ಅಲ್ಲಲ್ಲಿ ಕಲ್ಲುಬಂಡೆಗಳ ಮೇಲೆ ಬಿದ್ದಿರುವ ರಕ್ತವು ತೊಟ್ಟಿಕ್ಕಿ ಬೀಳುತ್ತಿರಲು ಅದನ್ನು ಸವಿಯಲು ರಣಹದ್ದುಗಳುರೆಕ್ಕೆ ಬಡಿಯುತ್ತಾ ಮುತ್ತಿಕ್ಕುತ್ತಿರುವುದರಿಂದ ಧೂಳಿನ ಕಣಗಳು ಅಲ್ಲಿ ಹಾರುತ್ತಿದ್ದವು.

ಇಷ್ಟೊಂದು ರಕ್ತ ಮಾಂಸಗಳ ಆಹಾರ ದೊರಕುತ್ತಿರುವುದನ್ನು ನೋಡಿ, ತಾಳೆಯ ಮರದಂತೆ ಎತ್ತರವಾದ ಬೇತಾಳಗಳು ತಾಳ ಹಾಕುತ್ತಾ ತಾಂಡವ ನೃತ್ಯವನ್ನು ಮಾಡುತ್ತಿರುವುದನ್ನು ನೋಡಿದರೆ ಎಂತಹ ವ್ಯಕ್ತಿಗೂ ಸಂಕಟವಾಗುವಂತಿತ್ತು. ಮುರಿದು ಬಿದ್ದಿರುವ ರಥಗಳ ಕಟ್ಟಿಗೆಗಳ ಕೆಳಭಾಗದಲ್ಲಿ ಇನ್ನೂ ಜೀವಂತವಿರುವ ವೀರ ಭಟರು ಅರ್ಧ ಶರೀರದಿಂದ ಸಿಕ್ಕಿಹಾಕಿಕೊಂಡು ವಿಲಿ ವಿಲಿ ಒದ್ದಾಡುತ್ತಿರುವ ದೃಶ್ಯ. ಕೆಳಗಡೆ ಇನ್ನೂ ಜೀವವಿರುವ ಅನೇಕ ವೀರ ಭಟರು ಅರ್ಧ ಸತ್ತು ಬಿದ್ದಿರುವ ಸ್ಥಿತಿಯಲ್ಲಿಯೇ ಅವರ ಮೇಲೆ ಬೇರೆ ಶವಗಳು ಮುಂತಾದವು ಬಿದ್ದಿರುವುದರಿಂದ, ಮೇಲೆ ಬಿದ್ದಿರುವ ಶವಗಳೇ ಮುಂತಾದವು ಅಲುಗಾಡುತ್ತಿವೆ. ಅವುಗಳನ್ನು ನೋಡಿದರೆ ತುಂಬಾ ಭಯ ಹುಟ್ಟಿಸುವಂತಿತ್ತು. ಬಾಯಲ್ಲಿ ರಕ್ತದ ಕೆಸರನ್ನು ತುಂಬಿಕೊಂಡು ಸ್ವಲ್ಪ ಮಾತ್ರ ಜೀವವಿದ್ದು ನರಳುತ್ತಿರುವ ದೇಹಗಳು ಎಂಥವನ ಮನಸ್ಸಿನಲ್ಲಿಯೂ ಕರುಣೆಯನ್ನು ಹುಟ್ಟಿಸುವಂತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net