ಈಸೂರಿನ ಹೋರಾಟಗಾರರ ಬದುಕು ಸ್ಫೂರ್ತಿದಾಯಕ

skp (2)
ಈಸೂರಿನಲ್ಲಿ ಆಯೋಜಿಸಿದ್ದ ಸರ್ವೊದಯ ರಾಷ್ಟ್ರೀಯ ಸಮ್ಮೇಳನ, ಹುತಾತ್ಮರ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಲಾಯಿತು. ಚಂದನ್ ಪಾಲ್, ಡಾ. ಸುರೇಶ್, ಬಸವರಾಜಪ್ಪ, ಸುಂದರ್ ರಾಜ್, ರೇಖಾ ಪಾಟೀಲ್, ಕುಮಾರ್, ಲಕ್ಷ್ಮಣ್ ತುಕಾರಾಂ ಗೋಲೆ ಇತರರಿದ್ದರು.
Published on

ಶಿಕಾರಿಪುರ: ನಮ್ಮ ದೇಶ ದಾಸ್ಯಮುಕ್ತವಾಗಲು ಲಕ್ಷಾಂತರ ಸ್ವಾತಂತ್ರೃ ಹೋರಾಟಗಾರರು ಹುತಾತ್ಮರಾಗಿದ್ದಾರೆ. ಅವರ ಬದುಕು, ದೇಶಭಕ್ತಿ ನಮಗೆ ನಿತ್ಯಸ್ಫೂರ್ತಿಯಾಗಬೇಕು ಎಂದು ಅಖಿಲ ಭಾರತ ಸರ್ವೋದಯ ಮಂಡಲದ ಅಧ್ಯಕ್ಷ ಚಂದನ್ ಪಾಲ್ ಹೇಳಿದರು.

ಈಸೂರಿನ ಹುತಾತ್ಮರ ಸ್ಮಾರಕದ ಆವರಣದಲ್ಲಿ ಸರ್ವೋದಯ ಮಂಡಲ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಮತ್ತು ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಸೂರಿನ ಸ್ವಾತಂತ್ರ್ಯದ ಕೂಗು ಇಡೀ ದೇಶದಲ್ಲಿ ಪ್ರತಿಧ್ವನಿಸಿತ್ತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಕಚ್‌ನಿಂದ ಕಾಮಕೂಟದವರೆಗೆ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿತ್ತು. ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಕರುನಾಡ ಕಲಿಗಳ ಊರು ಇದು. ಇಂತಹ ಶ್ರೇಷ್ಠ ಮಣ್ಣಿನಲ್ಲಿ ನಾವು ಕಾರ್ಯಕ್ರಮ ಮಾಡುತ್ತಿರುವುದು ನಮಗೆ ಬದುಕಿನುದ್ದಕ್ಕೂ ದೇಶಭಕ್ತಿಯ ಪ್ರೇರಣೆ ದೊರಕಲಿದೆ ಎಂದರು.

ಪಾತಕಲೋಕದಿಂದ ಗಾಂಧಿಯೆಡೆಗೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಈಸೂರಿನ ಧರ್ಮದರ್ಶಿ ಶಿವಯೋಗಿ ಗೌಡ ಮಾತನಾಡಿ, ಸರ್ವೋದಯ ಮಂಡಲದ ಸಾಮಾಜಿಕ ಕಳಕಳಿ ಶ್ಲಾಘನೀಯ. ಮುಂಬೈ ಭೂಗತ ಜಗತ್ತಿನಿಂದ ಗಾಂಧೀಜಿ ಅವರ ತತ್ವಾದರ್ಶಗಳಿಗೆ ಮಾರುಹೋದ ಚಂದನ್ ಪಾಲ್ ಅವರು ಸರ್ವೋದಯ ನಾಯಕರಾಗಿ ನಮ್ಮ ನಡುವೆ ಇರುವುದು ಸಂತಸದ ಸಂಗತಿ. ಈಸೂರಿನಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು.

ಗ್ರಪಂ ಅಧ್ಯಕ್ಷೆ ರೇಖಾ ಪಾಟೀಲ್ ಮಾತನಾಡಿ, ನಮ್ಮೂರಿನಲ್ಲಿ ಸರ್ವೋದಯ ಮಂಡಲದಿಂದ ಹುತಾತ್ಮರ ದಿನವನ್ನು ಆಚರಿಸುತ್ತಿರುವದು ಸಂತಸದ ಸಂಗತಿ. ಸ್ವಾಭಿಮಾನದ ಸಂಕೇತವಾದ ಸ್ವಾತಂತ್ರ್ಯ ಹೋರಾಟ ಇನ್ನಷ್ಟು ತಾರಕಕ್ಕೇರಲು ಈಸೂರಿನ ದಂಗೆಯೂ ಒಂದು ಪ್ರಮುಖ ಕಾರಣ. ಏಸೂರು ಕೊಟ್ಟರೂ ಈಸೂರು ಕೊಡೆವು ಎಂಬ ಘೋಷವಾಕ್ಯ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಬಡಿದೆಬ್ಬಿಸಿತು ಎಂದು ತಿಳಿಸಿದರು.

ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ. ಸುರೇಶ್ ಮಾತನಾಡಿ, ಸರ್ವರಲ್ಲೂ ಏಳಿಗೆ, ಸಮಾನತೆ ಮತ್ತು ಸಹೃದಯತೆ ಬೆಳೆಸುವುದೇ ಸರ್ವೋದಯದ ಪರಮಗುರಿ. ಸರ್ವೋದಯದ ಸಂದೇಶಗಳು ಪ್ರತಿ ಮನೆಯಲ್ಲೂ ಇರಬೇಕು. ಸರ್ವರ ಹಿತವೇ ಸರ್ವೋದಯದ ಸಂದೇಶ ಎಂದರು.

ಬೆಳಗ್ಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಹೊರಟ ಮೆರವಣಿಗೆ ಗ್ರಾಪಂ ರಸ್ತೆ, ಬನಶಂಕರಿ ದೇವಸ್ಥಾನ ರಸ್ತೆ ಮತ್ತು ಉಳಿದ ರಸ್ತೆಗಳಲ್ಲಿ ಹಾಯ್ದು ಹುತಾತ್ಮರ ಸ್ಮಾರಕ ತಲುಪಿತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ್ ತುಕಾರಾಮ್ ಗೋಲೆ, ಗ್ರಾಪಂ ಉಪಾಧ್ಯಕ್ಷ ಕುಮಾರ್, ಸರ್ವೋದಯ ಮಂಡಲದ ಸಂಚಾಲಕ ಸುಂದರರಾಜ್, ಬಸವರಾಜಪ್ಪ, ಡಾ. ವಿ.ಪ್ರಶಾಂತ್, ಗ್ರಾಪಂ ಸದಸ್ಯರಾದ ರೇಣುಕಮ್ಮ, ಲೀಲಾವತಿ, ಸತೀಶ್‌ಚಂದ್ರ, ಉಜ್ಜಳ್ಳಿ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net