ಬೀದಿಬದಿ ವ್ಯಾಪಾರಿಗಳದು ಶ್ರಮದ ಬದುಕು

skp ID card
ಶಿಕಾರಿಪುರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪುರಸಭೆ ಸದಸ್ಯ ಪ್ರಶಾಂತ್ ಜೀನಳ್ಳಿ ಗುರುತಿನ ಚೀಟಿ ವಿತರಿಸಿದರು. ಶೈಲಾ ಮಡ್ಡಿ, ಮಂಜುನಾಥ್, ಸುರೇಶ್, ದೇವೇಂದ್ರ ನಾಯಕ್ ಇತರರಿದ್ದರು.
Published on

ಶಿಕಾರಿಪುರ: ಬೀದಿ ಬದಿಯ ವ್ಯಾಪಾರಿಗಳು ಸಣ್ಣ ಮೊತ್ತದಲ್ಲಿ ವ್ಯಾಪಾರ ವಹಿವಾಟು ನಡೆಸಿ ಜೀವನ ನಿರ್ವಹಣೆ ಮಾಡುವವರು. ಸರ್ಕಾರ ನಿಮಗೆ ಸಾಕಷ್ಟು ಸವಲತ್ತು ನೀಡಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ ಹೇಳಿದರು.

ಪುರಸಭೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ಮಾರಾಟ ಪ್ರಮಾಣ ಪತ್ರ, ಡಿಜಿಟಲ್ ಕ್ಯೂಆರ್ ಕೋಡ್, ಸಾಲ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.

ಶಿಕಾರಿಪುರ ಬೆಳೆಯುತ್ತಿರುವ ಪಟ್ಟಣ. ಇದನ್ನು ಸ್ವಚ್ಛ, ಸುಂದರ ಪಟ್ಟಣವನ್ನಾಗಿಸುವುದು ನಮ್ಮ ನಿಮ್ಮೆಲ್ಲರ ಹೊಣೆ. ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ಗಲೀಜು ಆಗುತ್ತದೆ. ಪುರಸಭೆ ಗಾಡಿಗಳಲ್ಲಿ ತ್ಯಾಜ್ಯ ಹಾಕಬೇಕು. ರಸ್ತೆ ಮೇಲೆ ಕಸ ಹಾಕದಂತೆ ಗ್ರಾಹಕರಲ್ಲಿಯೂ ನೀವು ಮನವಿ ಮಾಡಬೇಕು ಎಂದು ಹೇಳಿದರು.

ಸದಸ್ಯ ಪ್ರಶಾಂತ್ ಜೀನಳ್ಳಿ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಎಲ್ಲೆಂದರಲ್ಲಿ ಅಂಗಡಿಗಳನ್ನು ಹಾಕಬೇಡಿ. ಜನರ ಆರೋಗ್ಯ ನಿಮ್ಮ ಕೈಯ್ಯಲ್ಲಿದೆ. ಶುಚಿ ಮತ್ತು ರುಚಿಗೆ ಹೆಚ್ಚಿನ ಆದ್ಯತೆ ಕೊಡಿ. ಶುದ್ಧ ಕುಡಿಯುವ ನೀರನ್ನು ಗ್ರಾಹಕರಿಗೆ ಪೂರೈಸಿ, ಶುದ್ಧ ಆಹಾರದ ಕಡೆಗೆ ಗಮನ ಕೊಡಿ ಎಂದರು.

ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಪುರಸಭೆ ಸಾಕಷ್ಟು ಶ್ರಮಿಸುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗಾಗಿ ನಿರ್ಮಿಸುತ್ತಿರುವ ಫುಡ್ ಕೋರ್ಟ್ ಕೆಲವೇ ತಿಂಗಳಿನಲ್ಲಿ ಲೋಕಾರ್ಪಣೆಯಾಗಲಿದೆ. ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳ ಅಭ್ಯುದಯಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಪುರಸಭೆ ಉಪಾಧ್ಯಕ್ಷೆ ರೂಪ ಮಂಜುನಾಥ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ದೇವೇಂದ್ರ ನಾಯಕ್, ಸದಸ್ಯರಾದ ಲಕ್ಷ್ಮೀ, ಮಹಾಲಿಂಗಪ್ಪ, ಸುನಂದಮ್ಮ, ಸುರೇಶ್, ರೇಣುಕಾಸ್ವಾಮಿ, ಮುಖ್ಯಾಧಿಕಾರಿ ಭರತ್, ರಾಜ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net