ಮನೆ-ಮನಗಳ ಕನ್ನಡ ಉಸಿರಾದರೆ ಭಾಷೆ ಉಳಿಸಲು ಸಾಧ್ಯ

kannada rajyostava celebration
ಜಿಪಂ ಸಿಇಒ ಎನ್.ಹೇಮಂತ್ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಿ.ಕೆ.ಮಿಥುನ್‌ಕುಮಾರ್, ಸಿದ್ದಲಿಂಗ ರೆಡ್ಡಿ, ಡಾ. ಕವಿತಾ ಯೋಗಪ್ಪನವರ್, ಸತ್ಯನಾರಾಯಣ, ಬಿ.ಎನ್.ಗಿರೀಶ್ ಇದ್ದರು.
Published on

ಶಿವಮೊಗ್ಗ: ಕನ್ನಡ ರಾಜ್ಯೋತ್ಸವವನ್ನು ನ.1ರಂದು ಮಾತ್ರ ಆಚರಿಸಿದರೆ ಸಾಲದು. ಪ್ರತಿಯೊಬ್ಬರ ಮನೆ-ಮನಗಳಲ್ಲೂ ಕನ್ನಡ ಉಸಿರಾಗಬೇಕು. ಆಗ ಭಾಷೆಯನ್ನು ಉಳಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಹೇಳಿದರು.

ನಗರದ ಡಿಎಆರ್ ಮೈದಾನದಲ್ಲಿ ಶುಕ್ರವಾರ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಾತಿ, ಧರ್ಮದ ಭೇದವಿಲ್ಲದೆ ಕನ್ನಡಿಗರೆಲ್ಲ ಒಂದೆಡೆ ಸೇರಿ ಭಾಷೆಯ ಮಹತ್ವವನ್ನು ಜಗತ್ತಿಗೆ ಸಾರಬೇಕಿದೆ. ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸುವ, ಕನ್ನಡಕ್ಕಾಗಿ ಮಿಡಿಯುವ ಹೃದಯಗಳ ವಿಶೇಷ ದಿನ ಇದಾಗಿದೆ ಎಂದು ಬಣ್ಣಿಸಿದರು.

ಅನ್ಯಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಬೇರೆ ಭಾಷೆ ಕಲಿತು ಕನ್ನಡ ಮರೆಯಬಾರದು. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದಲ್ಲೇ ಪ್ರಮುಖ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ 2000 ವರ್ಷಗಳಿಗೂ ಮಿಗಿಲಾದ ಇತಿಹಾಸವಿದೆ ಎಂದು ಹೇಳಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಎಡಿಸಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಎಸಿ ಸತ್ಯನಾರಾಯಣ, ತಹಸೀಲ್ದಾರ್ ಬಿ.ಎನ್.ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net