

ವಿರಾಜಪೇಟೆ : ಕೊಡವರ ಎಲ್ಲ ಆಚಾರ, ವಿಚಾರಗಳು ಹಳಿ ತಪ್ಪಿ ಹೋಗುತ್ತಿದೆ ಎಂದು ಹಿರಿಯ ಸಾಹಿತಿ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಜಾನಪದ ತಜ್ಞ ಬಾಚರಣಿಯಂಡ ಬಿ. ಅಪ್ಪಣ್ಣ ಬೇಸರ ವ್ಯಕ್ತಪಡಿಸಿದರು.
ಜಾನಪದ ಆಧಾರಿತ ಸಂಗ್ರಹ ಪುಸ್ತಕ ಪಟ್ಟೋಲೆ ಪಳಮೆಯನ್ನು ಪ್ರಕಟಿಸಿದ ದಿ. ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ಭಾನುವಾರ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಸ್ಮರಣಿಕೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಡಿಕೇರಿಯಂಡ ಚಿಣ್ಣಪ್ಪ ಅವರ ಪಟ್ಟೋಲೆ ಪಳಮೆ ಜಾನಪದ ಕ್ಷೇತ್ರಕ್ಕೆ ಮಹಾನ್ ಕೊಡುಗೆ. ಕಾವೇರಿ ನಾಡಿನ ಪುಣ್ಯ ಭೂಮಿಯಲ್ಲಿ ಹುಟ್ಟಿ ಬೆಳೆದ ನಾವು ಕೊಡವ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಂತಾಗಬೇಕು. ಕೊಡವ ಭಗವದ್ಗೀತೆ ಎಂದೇ ಕರೆಯುವ ಪಟ್ಟೋಳೆ ಪಳಮೆ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹತ್ವದ ಕೆಲಸ ಮಾಡಿದೆ. ಇಂತಹ ಅಮೂಲ್ಯ ಕೃತಿಯನ್ನು ರಚಿಸಿದ ಚಿಣ್ಣಪ್ಪ ಅವರ ಜನ್ಮ ದಿನದ ಅಂಗವಾಗಿ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಮಾಡಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಣ್ಣಪ್ಪ ಅವರು ಭಗವಂತನ ಹಾಡನ್ನು ಕೂಡ ರಚಿಸಿದ್ದು ಅದನ್ನು ನಾವು ಹಾಡಬೇಕು. ಈ ಕೊಡಗಿನ ಮಣ್ಣಿನಲ್ಲಿ ಮತ್ತೊಮ್ಮೆ ಹುಟ್ಟಿ ಬರಬೇಕಾದರೆ ಪಟ್ಟೋಲೆ ಪಳಮೆ ಓದಬೇಕು. ಇದರಿಂದ ಕೊಡಗಿನಲ್ಲಿ ಹುಟ್ಟುವ ಭಾಗ್ಯ ಲಭಿಸುತ್ತದೆ ಎಂದರಲ್ಲದೆ, ಕೊಡವರ ಪದ್ಧತಿಯಂತೆ ಚಾವು ಪಾಟ್ ಇದೆ. ಅದನ್ನು ಈಗ ಹಾಡುವುದು ಎಲ್ಲೂ ಕಂಡುಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ, ಕೊಡವರು ತಮ್ಮ ಆಚಾರ ವಿಚಾರ ಪದ್ಧತಿ ಪರಂಪರೆಗಳನ್ನು ಮರೆಯಬಾರದು. ಪಾಲಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕೃತಿಯ ಪಾಠ ಹೇಳಿಕೊಡಬೇಕು. ಕೊಡಗು, ಕೊಡವ ಎಂದರೆ ಜಗತ್ತಿನ ಯಾವ ಮೂಲೆಗೆ ಹೋದರೂ ಗೌರವ ಸಿಗುತ್ತದೆ. ಈ ನಾಡಿನಲ್ಲಿ ಜನಿಸಿದ ನಾವು ಜಾನಪದ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಕೊಡವಾಮೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಕೊಡಗಿನ ಹಿರಿಮೆಯನ್ನು ಸಾರುವಂತಾಗಬೇಕೆಂದರು.
ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, 1924ರಲ್ಲಿ ರಚನೆಗೊಂಡ ಪಟ್ಟೋಲೆ ಪಳಮೆ 7 ಮರು ಮುದ್ರಣ ಕಂಡಿದೆ. ಈ ಕೃತಿ ಕೊಡವ ಭಾಷೆ, ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ವರ್ಷಾಚರಣೆಯ ಅಂಗವಾಗಿ ರಾಜ್ಯಮಟ್ಟದ ಬೃಹತ್ ಜಾನಪದ ನಮ್ಮೆಯನ್ನು ಕರ್ನಾಟಕದ ಎಲ್ಲ ಜಿಲ್ಲೆಗಳ ಪ್ರಮುಖರನ್ನು ಸೇರಿಸಿ ಆಯೋಜಿಸಲಾಗುತ್ತದೆ. ರಾಜ್ಯ ಸರ್ಕಾರದ ವತಿಯಿಂದ ಇವರ ಜನ್ಮದಿನ ಆಚರಿಸುವಂತಾಗಬೇಕು ಎಂದರು.
ಸರ್ಕಂಡ ಸೋಮಯ್ಯ, ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರತ್ಯು, ಕೊಡವ ಭಾಷಿಕ ಸಮಾಜ ಒಕ್ಕೂಟ ಅಧ್ಯಕ್ಷ ಮೇಚಿರ ಸುಭಾಶ್ ನಾಣಯ್ಯ, ನಡಿಕೇರಿಯಂಡ ಒಕ್ಕ ಅಧ್ಯಕ್ಷ ನಡಿಕೇರಿಯಂಡ ಕಿಶೋರ್ ತಿಮ್ಮಯ್ಯ ಮಾತನಾಡಿದರು.
ಇದೇ ಸಂದರ್ಭ ಮುಕ್ಕಾಟಿರ ಶಿವು ಮಾದಪ್ಪ, ಸಿನಿಮಾ ನಿರ್ದೇಶಕ ಆಪಾಡಂಡ ಟಿ.ರಘು ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಮುಕ್ಕಾಟಿರ ಸುಧಾ ಪೂಣಚ್ಚ, ಪುತ್ತಾಮನೆ ವಿದ್ಯಾ ಜಗದೀಶ್, ಮೊಣ್ಣಂಡ ಶೋಭಾ ಸುಬ್ಬಯ್ಯ, ಪೋಡಮಾಡ ಭವಾನಿ ನಾಣಯ್ಯ ಮತ್ತಿತರರು ಇದ್ದರು.