ಹೈಕಮಾಂಡ್ ನಿರ್ಧಾರಕ್ಕೆ ಕೆಎಚ್‌ಎಂ ಕುಟುಂಬ ಬದ್ಧ

MLA-Roopakala
Published on

ಕೋಲಾರ: ಹೈಕಮಾಂಡ್ ನಿರ್ಧಾರಕ್ಕೆ ಕೆ.ಎಚ್.ಮುನಿಯಪ್ಪ ಹಾಗೂ ಅವರ ಕುಟುಂಬ ಬದ್ಧವಾಗಿರುತ್ತದೆ. ನಮಗೆ ಪಕ್ಷ ಮುಖ್ಯವೇ ಹೊರತು ಕುಟುಂಬವಲ್ಲ. 40 ವರ್ಷಗಳಿಂದ ಪಕ್ಷಕ್ಕಾಗಿ ನಮ್ಮ ತಂದೆ ದುಡಿದಿದ್ದಾರೆ. ಪಕ್ಷವು ನಮ್ಮನ್ನು ಉತ್ತಮವಾಗಿ ನಡೆಸಿಕೊಂಡಿದೆ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.

ಬೆಂಗಳೂರಿನ ಕೆ.ಎಚ್.ಮುನಿಯಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಮಗೆ ಪಕ್ಷದ ವರ್ಚಸ್ಸೇ ಮುಖ್ಯ. ಎಷ್ಟೋ ಜನರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಆದರೆ ಪಕ್ಷ ನಮಗೆ ಸಾಕಷ್ಟು ಅವಕಾಶ ನೀಡಿ, ಸ್ಥಾನಮಾನ ಕೊಟ್ಟು ಗೌರವದಿಂದ ನಡೆಸಿಕೊಂಡಿದೆ. ನಮಗೆ ಅವಮಾನ ಮಾಡಿದರೂ ಸಹಿಸಿಕೊಳ್ಳುತ್ತೇವೆ. ಆದರೆ ಪಕ್ಷಕ್ಕೆ ಅವಮಾನವಾಗುವ ರೀತಿ ನಡೆದುಕೊಳ್ಳುವುದಿಲ್ಲ ಎಂದರು.
ರಾಜೀನಾಮೆ ನೀಡಲು ಹೊರಟ ಶಾಸಕರು ಮತ್ತು ಸಚಿವರ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಬೇರೊಬ್ಬರ ಬಗ್ಗೆ ಉತ್ತರ ನೀಡಲ್ಲ. ಪಕ್ಷದಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಹೈಕಮಾಂಡ್ ಇದೆ. ಬುದ್ಧಿ ಹೇಳುವವರೂ ಇದ್ದಾರೆ. ತಪು÷್ಪ ಮಾಡಿದ್ದರೆ ತಿದ್ದಿಕೊಳ್ಳುವ ಅವಕಾಶಗಳಿವೆ. ಅಂತಹವರು ಅಲ್ಲಿ ಹೇಳಬಹುದು. ಪ್ರತಿ ವಾರ ಎಐಸಿಸಿಯಿಂದ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ಬೆಂಗಳೂರಿಗೆ ಬರುತ್ತಿದ್ದರು. ಶಾಸಕರು ಆ ವೇಳೆ ಸಮಸ್ಯೆ ಹೇಳಿಕೊಳ್ಳಬಹುದಾಗಿತ್ತು. ಆಗ ಅವರು ಎಲ್ಲಿ ಹೋಗಿದ್ದರು ಎಂದು ಪ್ರತಿಕ್ರಿಯಿಸಿದರು.
ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಅದನ್ನು ತಿದ್ದಿ ಒಂದೇ ದಾರಿಯಲ್ಲಿ ನಡೆಸಲು ನಾಯಕರಿದ್ದಾರೆ. ನಾವು ಪಕ್ಷದ ನಾಯಕರ ಮೇಲೆ ನಂಬಿಕೆ ಇಟ್ಟಿದ್ದೇವೆ. ಪಕ್ಷದ ಗೌರವ ಉಳಿದರೆ ನಮ್ಮ ಹಾಗೂ ಕಾರ್ಯಕರ್ತರ ಗೌರವ ಉಳಿಯುತ್ತದೆ. ನಮ್ಮನ್ನು ಬೆಳೆಸಿದ ಕಾರ್ಯಕರ್ತರ ಗೌರವವನ್ನು ಉಳಿಸಬೇಕಿದೆ. ನಾವು ತಪ್ಪು ಮಾಡಿದರೆ ತಿದ್ದಿಕೊಳ್ಳಲು ಸಿದ್ಧ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net