

ಬೆಂಗಳೂರು: ಉತ್ತರ ಗೋವಾದ ಸಂಗೋಲ್ಡಾ ಪ್ರದೇಶದಲ್ಲಿ ಇತ್ತೀಚೆಗೆ ಕನ್ನಡಿಗರ ಮನೆಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋತ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದ ನಿಯೋಗ ರಾಜಭವನದದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ.
ಕಳೆದ ನಾಲ್ಕೈದು ದಶಕಗಳ ಹಿಂದೆ ಉದ್ಯೋಗ ಅರಸಿ ಗೋವಾಕ್ಕೆ ಹೋಗಿರುವ ಕನ್ನಡಿಗರು ವಿವಿಧ ಉದ್ಯೋಗ, ವ್ಯಾಪಾರ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದಾರೆ. ಇಷ್ಟಾದರೂ ಗೋವಾ ಸರ್ಕಾರ ಕಳೆದ ಏ.14-15 ರಂದು ಯಾವುದೇ ಮುನ್ಸೂಚನೆ ನೀಡದೆ, ಎಷ್ಟೇ ವಿನಂತಿ ಮಾಡಿದರೂ ಕನ್ನಡಿಗರ ಮೇಲೆ ದೌರ್ಜನ್ಯ ಮಾಡಿ ಅವರ ಮನೆಗಳನ್ನು ಧ್ವಂಸ ಮಾಡಿದ್ದಾರೆ.
ಪೊಲೀಸರು ಲಾಠಿ ಬೀಸಿ ಮನೆಯಿಂದ ಹೊರಗೆ ಓಡಿಸಿ ನಿರ್ದಾಕ್ಷಿಣ್ಯವಾಗಿ ಅಲ್ಲಿಂದ ಸ್ಥಳಾಂತರಿಸಲಾಗಿದೆ. ಕನ್ನಡಿಗರ ಮೇಲೆ ಗೋವಾದಲ್ಲಿ ವಡೆಯುತ್ತಿರುವ ದಬ್ಬಾಳಿಕೆಗಳನ್ನು ಗಮನಿಸಿದರೆ. ಗೋವಾದಲ್ಲಿ ಕನ್ನಡಿಗರು ಯಾರೂ ಇರಲೇಬಾರದು ಎಂಬ ತೀರ್ಮಾನಕ್ಕೆ ಅಲ್ಲಿನ ಸರ್ಕಾರ ಬಂದಂತಿದೆ.
ಗೋವದಲ್ಲಿ ಕನ್ನರಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಈಗ 15 ಮನೆಗಳನ್ನು ಧ್ವಂಸಗೊಳಿಸಿದೆ. ಇಂತಹ ದೌರ್ಜನ್ಯವು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದ್ದು ಭಾರತ ಒಕ್ಕೂಟ ವ್ಯವಸ್ಥೆ ಮತ್ತು ಭಾರತ ಸಂವಿಧಾನದ ಮೂಲ ಆಶಯಗಳಿಗೆ ಮಾಡಿದ ಅಪಮಾನವಾಗಿದೆ.
ಸಂವಿಧಾನದ 29 ಮತ್ತು 30ರ ಅನ್ವಯ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕಾದ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೌರವಾನ್ವಿತ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅನ್ಯಾಯಕ್ಕೊಳಗಾದ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.