ಟ್ರಂಪ್​ ಆಪ್ತ ಚಾರ್ಲಿ ಹತ್ಯೆ ಕೇಸ್​: ಇನ್ನೂ ಪತ್ತೆಯಾಗದ ಆರೋಪಿ! ತನಿಖಾ ತಂಡಕ್ಕೆ ಸಿಕ್ತು ಒಂದಷ್ಟು ಸುಳಿವು | Charlie Kirk

ವಿಜಯವಾಣಿ (68)
Published on

Charlie Kirk: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಸ್ನೇಹಿತ ಚಾರ್ಲಿ ಕಿರ್ಕ್ (31) ಕಿಡಿಗೇಡಿಗಳ ಗುಂಡೇಟಿಗೆ ನಿಂತಲ್ಲೇ ಉಸಿರು ಚೆಲ್ಲಿದ ಘಟನೆ ಇಡೀ ಅಮೆರಿಕವನ್ನೇ ನಡುಗಿಸಿದೆ. ಉತಾಹ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಚಾರ್ಲಿ ಹಂತಕ ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಗುಂಪಿನ ಮಧ್ಯೆ ಗುಂಡು ಹಾರಿಸಿದ ದುಷ್ಕರ್ಮಿ ಯಾರು ಎಂಬುದನ್ನು ಪತ್ತೆಹಚ್ಚುವುದು ಸದ್ಯ ಅಮೆರಿಕಕ್ಕೆ ಸವಾಲಾಗಿ ಪರಿಣಮಿಸಿದೆ. ಆರೋಪಿಯ ಸೆರೆಗೆ ಪೊಲೀಸರು ಎಲ್ಲಾ ಪ್ರದೇಶಗಳನ್ನು ಜಾಲಾಡುತ್ತಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ಶಂಕಿತನನ್ನು ಗುರುತಿಸಲು ಶತಾಯ ಗತಾಯ ಪ್ರಯತ್ನದಲ್ಲಿ ತೊಡಗಿದ್ದಾರೆ. ಶಂಕಿತನು ಉತಾಹ್ ವಿಶ್ವವಿದ್ಯಾಲಯದ ಮೇಲ್ಛಾವಣಿಯಿಂದ ಪರಾರಿಯಾಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಆದಾಗ್ಯೂ, ಅವನ ಮುಖ ಸ್ಪಷ್ಟವಾಗಿ ಗೋಚರಿಸಿಲ್ಲ. ಶಂಕಿತ ಇನ್ನೂ ತಲೆಮರೆಸಿಕೊಂಡಿರುವುದು ಖಾಕಿಗೆ ತಲೆನೋವಾಗಿ ಕಾಡಿದೆ. ಗುಂಡಿನ ದಾಳಿಯ ಹಿಂದಿನ ಉದ್ದೇಶವೇನೆಂದು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಪೊಲೀಸರು ಮತ್ತು ಫೆಡರಲ್ ತನಿಖಾಧಿಕಾರಿಗಳು ಶಂಕಿತನ ಫೋಟೋಗಳು ಮತ್ತು ವಿಡಿಯೊಗಳನ್ನು ಬಿಡುಗಡೆಗೊಳಿಸಿದ್ದಾರೆ.

ಮಾಹಿತಿ ತಿಳಿದರೆ ಮುಂದೆ ಬನ್ನಿ

ಶಂಕಿತನ ಬಗ್ಗೆ ಮಾಹಿತಿ ತಿಳಿದರೆ ದಯವಿಟ್ಟು ಮುಂದೆ ಬನ್ನಿ ಎಂದು ಎಫ್‌ಬಿಐ ಅಧಿಕಾರಿಗಳು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ. ವಿಶ್ವವಿದ್ಯಾಲಯದ ಛಾವಣಿಯ ಮೇಲೆ ಮತ್ತು ಹತ್ತಿರದ ಕಾಡಿನಲ್ಲಿ ಕೈಮುದ್ರೆ, ಶೂ ಪ್ರಿಂಟ್​ ಹಾಗೂ ರೈಫಲ್ ಕಂಡುಬಂದಿದೆ ಎಂದು ಹೇಳಲಾಗಿದೆ. ಉತಾಹ್ ಸಾರ್ವಜನಿಕ ಸುರಕ್ಷತಾ ಇಲಾಖೆ ಬಿಡುಗಡೆ ಮಾಡಿದ ಫೋಟೋಗಳಲ್ಲಿ ಶಂಕಿತನನ್ನು ಬಿಳಿ ಮೈಬಣ್ಣ ಹೊಂದಿರುವ ವ್ಯಕ್ತಿಯೆಂದು ತೋರಿಸಲಾಗಿದೆ. ಆತ ಕಾನ್ವರ್ಸ್ ಸ್ನೀಕರ್ಸ್, ಜೀನ್ಸ್, ಅಮೇರಿಕನ್ ಧ್ವಜ ಮತ್ತು ಹದ್ದಿನ ಮುದ್ರಣವಿರುವ ಕಪ್ಪು ಲ್ಯಾಂಡ್ ಸ್ಯೂಡ್ ಟಿ-ಶರ್ಟ್ ಮತ್ತು ತ್ರಿಕೋನವಿರುವ ಕಪ್ಪು ಟೋಪಿ ಧರಿಸಿದ್ದಾನೆ ಎಂದು ತಿಳಿಸಿದೆ.

ಕಿರ್ಕ್‌ನ ಹತ್ಯೆಗೆ ಕಾರಣರಾದವರನ್ನು ಗುರುತಿಸಿ, ಬಂಧಿಸಲು ಯಾರು ಸುಳಿವು ಅಥವಾ ಹೆಚ್ಚಿನ ಮಾಹಿತಿ ನೀಡುತ್ತಾರೋ ಅವರಿಗೆ 1,00,000 ಡಾಲರ್​ (88 ಲಕ್ಷ ರೂ.) ಹಣವನ್ನು ಬಹುಮಾನವಾಗಿ ಕೊಡಲು ಯುಎಸ್ ಅಧಿಕಾರಿಗಳು ಘೋಷಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net