

ಹುಬ್ಬಳ್ಳಿ: ನಾಡಿನ ಪ್ರಸಿದ್ಧ ವಿದ್ವಾಂಸ ಕಂಠಪಲ್ಲೀ ಸಮೀರಾಚಾರ್ಯ ಅವರ ಇಂಗ್ಲಿಷ್ ಅನುವಾದಿತ ಕೃತಿ ‘ದಿ ಇಂಟ್ರಿನ್ಸಿಕ್ ವ್ಯಾಲ್ಯೂ ಆಫ್ ಶ್ರೀಮದ್ಭಾಗವತ’ ಸೋಮವಾರ ನವದೆಹಲಿಯಲ್ಲಿ ಲೋಕಾರ್ಪಣೆಗೊಂಡಿತು.
ಹಿರಿಯ ನ್ಯಾಯವಾದಿ ಹಾಗೂ ಕೇಂದ್ರದ ಮಾಜಿ ಸಚಿವ ದಿ.ರಾಮ್ ಜೇಠ್ಮಲಾನಿ ಅವರ ಕಾರ್ಯದರ್ಶಿಗಳಾಗಿದ್ದ ಕೆ.ಎಸ್.ಚಾರಿ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಸಂಕೇಶ್ವರ ಅವರು ಶುಭನುಡಿ ಕೋರಿದ್ದಾರೆ. ದೇಶದ ಪ್ರಗತಿಗೆ ಪೂರಕವಾಗುವಂತಹ ವಿಚಾರಗಳು, ಮಾನವ ಕುಲ ಅದರಲ್ಲೂ ವಿಶೇಷವಾಗಿ ಯುವಕರು ನೈತಿಕತೆಯ ಹಾದಿಯಲ್ಲಿ ಸಾಗಲು ಪ್ರೇರೇಪಿಸುವಂತಹ ಮೌಲ್ಯಾಧಾರಿತ ಕಥೆಗಳು ಭಾಗವತ ಪುರಾಣದ ಅನೇಕ ವ್ಯಕ್ತಿಗಳ ವ್ಯಕ್ತಿತ್ವದ ರೂಪದಲ್ಲಿ ಈ ಪುಸ್ತಕದಲ್ಲಿ ಅಡಕವಾಗಿವೆ.
ಭಾಗವತ ಕುರಿತ ವಿದ್ವತ್ಪೂರ್ಣ ಪ್ರವಚನ ಹಾಗೂ ವ್ಯಾಖ್ಯಾನದಲ್ಲಿ ಸುಮಾರು ಎರಡು ದಶಕಗಳ ಅನುಭವ ಇರುವ ಕಂಠಪಲ್ಲೀ ಸಮೀರಾಚಾರ್ಯ ಅವರು ಭಾಗವತ ಕುರಿತ ಜ್ಞಾನ ಸಾಗರವನ್ನು ಈ ಪುಸ್ತಕದಲ್ಲಿ ಮಂಥನ ಮಾಡುವ ಮೂಲಕ ಆಧ್ಯಾತ್ಮದ ಅಮೃತವನ್ನು ಉಣಬಡಿಸಿದ್ದಾರೆ. | ಆನಂದ ಸಂಕೇಶ್ವರ ಎಂಡಿ, ವಿಆರ್ಎಲ್ ಸಮೂಹ ಸಂಸ್ಥೆಗಳು