

ಶಿವಮೊಗ್ಗ: ಅನುಭವ ಮಂಟಪವು ಸಂವಾದ ಪರಂಪರೆಯ ಅತ್ಯುತ್ಕೃಷ್ಟ ಅಭಿವ್ಯಕ್ತಿ ಎಂದು ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬಸವ ಜಯಂತಿ ಹಾಗೂ ಸಂಘದ ದಶಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು.
ವಿಶ್ವದಲ್ಲಿ ಬಸವಾದಿಶರಣರ ಕಾಲದಿಂದ ಇದುವರೆಗೆ ಅನೇಕ ಸಂವಾದ, ಚರ್ಚೆಗಳು ನಡೆದಿವೆ. ಆದರೆ ಅನುಭವ ಮಂಟಪದಲ್ಲಿ ಅಕ್ಷರದ ಪರಿಚಯವಿಲ್ಲದ, ಮುಖ್ಯವಾಹಿನಿ ಎಂದರೆ ಗೊತ್ತೇ ಇಲ್ಲದವರ ಜತೆ ವಿಶೇಷ ಚರ್ಚೆಗಳು ನಡೆದಿವೆ. ಶರಣರ ವಚನಗಳಿಂದ ದಾಸರು ಪ್ರಭಾವಕ್ಕೆ ಒಳಗಾಗಿದ್ದಾರೆ. ಅನೇಕ ದಾಸರ ವಚನಗಳಲ್ಲಿ ಶರಣರ ವಚನಗಳಿವೆ ಎಂದರು.
ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ ಮಾತನಾಡಿ, ರಾಜ್ಯ ಸರ್ಕಾರ ಜಗಜ್ಯೋತಿ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದೆ. ಬಸವಣ್ಣನ ವಚನಗಳು ನಮ್ಮ ಬದುಕಿನ ಮೇಲೆ ಪ್ರಭಾವ ಬೀರಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದರು.
ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಉಪನ್ಯಾಸ ನೀಡಿದರು. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂಎಲ್‌ಸಿಗಳಾದ ಡಿ.ಎಸ್.ಅರುಣ್ ಡಾ. ಧನಂಜಯ ಸರ್ಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಸಂಘದ ಅಧ್ಯಕ್ಷ ಎಸ್.ಜಿ.ಶಶಿಧರ್, ಕಾರ್ಯಾಧ್ಯಕ್ಷ ಎಂ.ಆರ್.ಜಯದೇವಪ್ಪ, ಪ್ರಮುಖರಾದ ಎಸ್.ಪಿ.ದಿನೇಶ್, ರುದ್ರಮುನಿ ಸಜ್ಜನ್, ಎಚ್.ಎನ್.ಮಹಾರುದ್ರ ಮತ್ತಿತರರು ಉಪಸ್ಥಿತರಿದ್ದರು.