ದೌರ್ಜನ್ಯ ಪ್ರಕರಣ ಹೆಚ್ಚಳ ಆತಂಕಕಾರಿ

17bdvt1
ಭದ್ರಾವತಿ ಸಂಚೀಯ ಹೊನ್ನಮ್ಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹದಿಹರೆಯದ ಹೆಣ್ಣು ಮಕ್ಕಳ ಹಕ್ಕುಗಳು ಕುರಿತ ಅರಿವು ಕಾರ್ಯಕ್ರಮವನ್ನು ರಮೇಶ್ ಉದ್ಘಾಟಿಸಿದರು. ಮನೋಹರ್, ಶ್ರುತಿ, ಶಾಂತಾ ಇತರರಿದ್ದರು.
Published on

ಭದ್ರಾವತಿ: ಬಾಲ್ಯವಿವಾಹ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೋಡಲ್ ಅಧಿಕಾರಿ ರಮೇಶ್ ಹೇಳಿದರು.

ಹಳೇನಗರದ ಸಂಚೀಯ ಹೊನ್ನಮ್ಮ ಪ್ರೌಢಶಾಲೆಯಲ್ಲಿ ಕುವೆಂಪು ವಿವಿ ಸಮಾಜಕಾರ್ಯ ಸ್ನಾತಕೋತ್ತರ ಪ್ರಶಿಕ್ಷಣಾರ್ಥಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದಿಂದ ಆಯೋಜಿಸಿದ್ದ ಹದಿಹರೆಯದ ಹೆಣ್ಣು ಮಕ್ಕಳ ಹಕ್ಕುಗಳು ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
18 ವರ್ಷದೊಳಗಿನ ಹೆಣ್ಣುಮಕ್ಕಳ ರಕ್ಷಣೆ ಹಾಗೂ ಹಕ್ಕುಗಳ ಪಾಲನೆ ಕುರಿತು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೆಣ್ಣು ಮಕ್ಕಳ ರಕ್ಷಣೆಗೆ ಅನೇಕ ಹಕ್ಕು ಮತ್ತು ಕಾಯ್ದೆಗಳಿವೆ. ಈ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ನೀಡುವುದು ಮುಖ್ಯ. ಲಿಂಗಾನುಪಾತದಂತೆ ಗಂಡು ಮಕ್ಕಳ ಸಂಖ್ಯೆ ಹೆಚ್ಚಿದೆ. ಭ್ರೂಣ ಲಿಂಗ ಪತ್ತೆ ಇದಕ್ಕೆ ಕಾರಣ. ಇದನ್ನು ತಡೆಯುವಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಲಿಂಗ ಪತ್ತೆ ಮೂಲಕ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ತಿಳಿಸಿದರು.
ಮನೆ ಪರಿಸರ, ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ, ಬಾಲಕಾರ್ಮಿಕರು, ಭಿಕ್ಷಾಟನೆ ಮಾಡುವವರು ಹಾಗೂ ಬಾಲ್ಯವಿವಾಹ ಕಂಡುಬಂದರೆ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಅವರ ರಕ್ಷಣೆಗೆ ಮಕ್ಕಳ ಕಲ್ಯಾಣ ಸಮಿತಿ ಧಾವಿಸಲಿದೆ. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಡಲಾಗುತ್ತದೆ. ಸಹಾಯವಾಣಿ ಸಂಖ್ಯೆಯನ್ನು ಶಾಲೆಗಳಲ್ಲಿ ಬರೆಯಬೇಕು ಎಂದರು.
ಮಕ್ಕಳ ಸಹಾಯವಾಣಿ ವಿಷಯ ನಿರ್ವಾಹಕಿ ಶ್ರುತಿ ಮಾತನಾಡಿ, ಹೆಣ್ಣುಮಕ್ಕಳು ಹದಿಹರಯದಲ್ಲಿ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡಬೇಕು. ಪಾಲಕರ ಒತ್ತಡದಿಂದ ಬಾಲ್ಯವಿವಾಹವಾದರೆ ಭವಿಷ್ಯ ಹಾಳಾಗುವ ಜತೆಗೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಾಚಾರ್ಯ ಮನೋಹರ್, ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಶಾಂತಾ, ಪ್ರಶಿಕ್ಷಣಾರ್ಥಿಗಳಾದ ವೇದಾ ಶೆಟ್ಟಿ, ಕೀರ್ತನಾ, ಸಹನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net