

ಬೆಳಗಾವಿ: ದೇಶದ ಮೊಟ್ಟಮೊದಲ ಕಿಸಾನ್ ರೈಲು ಸಂಚಾರಕ್ಕೆ ಇಂದು (ಶುಕ್ರವಾರ) ಚಾಲನೆ ನೀಡಲಾಗಿದ್ದು, ಕೃಷಿ ಉತ್ಪನ್ನಗಳ ಸಾಗಾಟಕ್ಕೆ ರೈಲ್ವೆ ಸೇವೆ ತೆರೆದುಕೊಂಡಿದೆ.
ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ ಸಂಚರಿಸಲಿರುವ ಮೊದಲ ಕಿಸಾನ್ ರೈಲಿಗೆ ವರ್ಚುವಲ್ ವೇದಿಕೆ ಮೂಲಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಇಲಾಖೆ ಸಚಿವ ಪಿಯುಷ್ ಗೋಯಲ್, ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಹಸಿರುನಿಶಾನೆ ತೋರಿದರು.
ಇದನ್ನೂ ಓದಿರಿ ಆ.10ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ
ಪ್ರಧಾನ ಮಂತ್ರಿಗಳ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸಲು ಕಿಸಾನ್ ರೈಲು ಸಹಕಾರಿಯಾಗಲಿದೆ. ರೈತರ ಅಭಿವೃದ್ಧಿಗಾಗಿ ರೈಲ್ವೆ ಇಲಾಖೆ ಕೈಜೋಡಿಸಿದೆ ಎಂದು ಕೇಂದ್ರ ಕೃಷಿ ಸಚಿವ ತೋಮರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ಭಾನುವಾರ ಸಂಚರಿಸುವ ಈ ಕಿಸಾನ್ ರೈಲು, ರೈತರ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿದೆ ಎಂದ ಸುರೇಶ್ ಅಂಗಡಿ, ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದರೆ ಇಲ್ಲಿಂದಲೂ ಕಿಸಾನ್ ರೈಲು ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ನಾಸಿಕ ಜಿಲ್ಲಾ ಉಸ್ತುವಾರಿ ಸಚಿವ ಛಗಬ್ ಭುಜಬಲ್, ಕೇಂದ್ರ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಮಿತ್ತಲ್ ಉಪಸ್ಥಿತರಿದ್ದರು.