ಗುರುವಿನ ಕ್ರಿಯಾಶಕ್ತಿಯ ಮಹತ್ವ

1-67f6aeec18d85
Published on
ಕಲಬುರಗಿ ಜಿಲ್ಲೆ ಜೇವರ್ಗಿಯ ಮಹಾಮಹಿಮ ಷಣ್ಮುಖ ಶಿವಯೋಗಿಗಳು ತಮ್ಮವಚನದಲ್ಲಿ ಹೀಗೆ ತಿಳಿಸಿದ್ದಾರೆ: ಕಟ್ಟಿಗೆಯಲ್ಲಿ ಬೆಂಕಿ ಇರುವುದು ಸತ್ಯ. ಆದರೆ ಕಟ್ಟಿಗೆ ಸುಡಲು ಅದಕ್ಕೆ ತಿಳಿಯದು.

ಹಾಗೆಯೇ ದೇಹದೊಳಗೆ ಪರ ವಸ್ತು ಉಂಟೆಂದರೆ ಅದು ತಾನೇ ಹರಿದು ಹೊರಬಾರದು. ದೇಹವು ಜಡ ಭಾವದ್ದು. ಅದ್ಹೇಗೆಂದರೆ ಕಟ್ಟಿಗೆ ಮಧ್ಯದಲ್ಲಿ ಅಡಗಿದ್ದ ಮಂದಾಗ್ನಿಯ ಮಂಥನದಿಂದ ಸುಡುವಂತೆಯೇ ದೇಹದ ಮಧ್ಯದಲ್ಲಿ ಅಡಗಿದ ಪರ ವಸ್ತುವನ್ನು ಶ್ರೀ ಗುರುವು ತನ್ನ ಯೋಗದ ಕ್ರಿಯಾಶಕ್ತಿ ಮಂಥನದಿಂದ ಬಹಿರಂಗದ ಶಿಷ್ಯನ ಸ್ಥೂಲ ಅಂಗದ ಮೇಲೆ ಇಷ್ಟಲಿಂಗವಾಗಿ ಇರುವನು.

ಆ ಲಿಂಗದ ಸಕ್ರಿಯ ಪೂಜೆಯಿಂದ ಸ್ಥೂಲ ಶರೀರದ ಗುಣಧರ್ಮಗಳೆಲ್ಲವೂ ನಷ್ಟವಾಗಿ ಅಂತರಂಗ ಬಹಿರಂಗ ಒಂದಾಗಿ ಆತ್ಮನಲ್ಲಿಯ ಅಹಂ ಎಂಬ ಮಮತೆ ಕೆಟ್ಟು ಬರಿಯುಂಡ ಕರ್ಪರದಂತೆ ಆಗುವುದು ಅಂದರೆ ಬೆಂಕಿ ಮತ್ತು ಕರ್ಪರ ಸಂಯೋಗವಾದಂತೆ

ಪರತತ್ವವನ್ನು ಒಡಗೂಡಿದ ಮಹಾತ್ಮನ ಕಾಯ ನಿಶ್ಚಲ ನಿರಾಕಾರವಾಗುವುದು. ದೇಹ, ಪ್ರಾಣ ಮತ್ತು ಪ್ರಕೃತಿ ವರ್ತನೆಯಲ್ಲಿ ನಡೆದು ನಿತ್ಯರಾದೆ ಎಂಬುವರೆಲ್ಲ ಭವಾಂಬುದಿಯಲ್ಲಿ ಬಿದ್ದು ಮುಳುಗುತ್ತೇಳುತ್ತ ದಡ ಸೇರಲರಿಯದೆ ಕೆಟ್ಟು ಹೋದರು.

ಇದನ್ನೇ ಮುಂದುವರಿದು ಅವರು ತಿಳಿಸುತ್ತಾರೆ: ಎನ್ನ ಕರಕಮಲ ಮಧ್ಯದಲ್ಲಿ ಗುರುವು ನಿರಂಜನ ಕುರುಹ ತೋರಿದ. ಆ ಕುರುಹಿನ ಮಧ್ಯದಲ್ಲಿ ಅರುಹಿನ ಕಳೆಯನ್ನು ತೋರಿಸಿ ಆ ಕಳೆಯ ಮಧ್ಯದಲ್ಲಿ ಮಹಾಜ್ಞಾನದ ಬೆಳಗು ತೋರಿ ಆ ಬೆಳಗಿನ ನಿಲವಿನೊಳಗೆ ಎನ್ನ ತೋರಿದನು. ಮತ್ತೆ ಎನ್ನೊಳಗೆ ತನ್ನ ತೋರಿ ತನ್ನೊಳಗೆ ಎನ್ನನ್ನು ಇಂಬಿಟ್ಟುಕೊಂಡಿರುವಂತಹ ಶ್ರೀ ಗುರುವಿಗೆ ನಮೋ ನಮೋ ಎನುತಿರ್ದೆನು... ಗುರುವಿನ ಕ್ರಿಯಾಶಕ್ತಿ ಎಂತಹುದು ಎಂಬುದನ್ನು ಅರಿವಿನ ಗುರುವಿನ ಕರುಣದಿಂದ ಗುರುವನ್ನು ಎಷ್ಟು ಸ್ತುತಿಸಿದರೂ ಸಾಲದು. ಅದಕ್ಕೆ, ಗುರುಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರಃ, ಗುರುಸಾಕ್ಷಾತ್ ಪರಬ್ರಹ್ಮ ಎಂದಿರುವುದು. ಇಂತಹ ಗುರುವಿಗೆ ಶರಣಾಗಬೇಕು. ಇದನ್ನರಿತು ನಡೆದರೆ ಜನ್ಮ ಪಾವನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net