ಅವತಾರಗಳಲ್ಲಿಯೂ ಕಾಣಬಹುದು ಜಗತ್ತಿನ ವಿಕಾಸವಾದ

Prachina Jnyana vvani
Published on

ಗತ್ತಿನ ವಿಕಾಸವಾದವನ್ನು ಅವತಾರಗಳಲ್ಲಿಯೂ ಕಾಣಬಹುದು. ಮತ್ಸ್ಯ ಕೇವಲ ನೀರಿನಲ್ಲಿ, ನೀರು-ನೆಲ ಎರಡರಲ್ಲಿಯೂ ಕೂರ್ಮ, ನೆಲದಲ್ಲಿ ಮಾತ್ರವಿರುವ ವರಾಹ, ಅತ್ತ ಮನುಷ್ಯನೂ ಅಲ್ಲ-ಇತ್ತ ಸಿಂಹವೂ ಅಲ್ಲವೆನ್ನುವ ನರಸಿಂಹ, ಮಾನವರೂಪದ ಚಿಕ್ಕ ವಟು, ಬಯಸಿದರೆ ತ್ರಿವಿಕ್ರಮನೂ ಆಗಬಲ್ಲ ವಾಮನ. ಬ್ರಹ್ಮಜ್ಞನಾಗಿ ಕ್ಷತ್ರಿಯ ಕಾರ್ಯ ಕೈಗೊಂಡ ಪರಶುರಾಮ, ಆದರ್ಶ ಪ್ರತಿಪಾದಕ ಕ್ಷತ್ರಿಯ ಶ್ರೀರಾಮ, ಸರ್ವಾಧಿಕಾರಿ ಆಗಬಹುದಾದರೂ ಯಾವ ಅಧಿಕಾರವನ್ನೂ ಬಯಸದ ಶ್ರೀಕೃಷ್ಣ - ಹೀಗೆ ಈ ಅವತಾರಗಳು ಆಗಲು ಕಾರಣವಿಲ್ಲದಿಲ್ಲ. ಪ್ರತಿಯೊಂದು ಅವತಾರದಲ್ಲಿಯೂ ಬೇರೆ-ಬೇರೆ ಅವತಾರಗಳ ಬಿಂಬ-ಪ್ರತಿಬಿಂಬ-ಗತಿಬಿಂಬವಿದೆ.

ಆಗ ಮಾತ್ರವೇ ಜನಿಸಿದ ಮಗು ಮತ್ಸ್ಯಾವತಾರವನ್ನು ನೆನಪಿಸದೇ? ಹರಿದಾಡಲು ಪ್ರಾರಂಭಿಸಿದಾಗ ನೆಲದ ಮೇಲೂ-ಮೊಣಕಾಲಿನಲ್ಲಿ ಚಲಿಸಿ ಕೂರ್ವವತಾರವನ್ನು ನೆನಪಿಸದೇ? ಇದು ಮೇಧ್ಯ-ಇದು ಅಮೇಧ್ಯ ಎನ್ನುವ ಕಲ್ಪನೆಯೂ ಇಲ್ಲದ ಮಗು ವರಹಾವತಾರವನ್ನು ನೆನಪಿಸದೇ? ನಡೆಯಲು ಪ್ರಾರಂಭಿಸಿದಾಗ ವಾಮನಾವತಾರವನ್ನು ನೆನಪಿಸದೇ? ತೊದಲು ಮಾತಿನ ವೈಖರಿ ತ್ರಿವಿಕ್ರಮತೆಯನ್ನು ತೋರಿಸದೇ? ‘ಯುವಕನಾಗಿ ಎಲ್ಲವನ್ನು ಸಾಧಿಸುತ್ತೇನೆ’ ಎಂದು ಹೊರಡುವ ಮಗು ಪರಶುರಾಮನನ್ನು ನೆನಪಿಸದೇ? ಆದರ್ಶದ ಬೆನ್ನು ಹತ್ತಿ ಹೊರಡುವಾಗ ರಾಮನ ನೆನಪು ತರದೇ? ದೇಹದ ಬೆಳವಣಿಗೆಯ ಜೊತೆ, ಆಸೆ-ಆಕಾಂಕ್ಷೆಗಳ ನಡುವೆ ಕರ್ತವ್ಯವು ಶ್ರೀಕೃಷ್ಣನ ನೆನಪು ತಾರದೇ? (ಶೇಣಿ ಗೋಪಾಲಕೃಷ್ಣ ಭಟ್ಟ)

ಸ್ತ್ರೀಯರ ಗರ್ಭದಲ್ಲಿ ಶಿಶುವಿನ ಬೆಳವಣಿಗೆಯ ಸ್ವರೂಪವೇ ಅವತಾರಗಳೆಂದು ಜ್ಞಾನಿಗಳು ಹೇಳುತ್ತಾರೆ. ಗರ್ಭ ಧರಿಸುವುದು ಪುಣ್ಯ. ಜೀವನದ ಸುಖ-ಸಂತೃಪ್ತಿಯ ಸುಪ್ಪತ್ತಿಗೆ. ಅದಕ್ಕೇ ಗಂಡಿಗಿಂತ ಹೆಣ್ಣು ಶ್ರೇಷ್ಠ. ಆದರೆ ಜನನಕ್ರಿಯೆಯನ್ನು ಭಯವೆಂದೇ ಸೃಷ್ಟಿಸಲಾಗಿದೆ. ಮೊದಲು ಗರ್ಭವು ಮೀನಿನ ಆಕಾರದಲ್ಲಿರುವುದು. ಅದು ಮತ್ಸ್ಯಾವತಾರವನ್ನು ನೆನಪಿಸದೇ? ಚಿಕ್ಕ ತಲೆ-ಬಾಲ ಉಂಟಾದಾಗ ಕೂರ್ವವತಾರವನ್ನು ಹೋಲುವುದು. ನಂತರ ಚಿಕ್ಕ ಹಂದಿಮರಿಯ ರೂಪವನ್ನು ತಾಳಿ ವರಹಾವತಾರವನ್ನು ನೆನಪಿಸುವುದು. ಕೂದಲು, ಉಗುರು ಮೂಡಿಬಂದಾಗ ನರಸಿಂಹಾವತಾರವನ್ನು ಜ್ಞಾಪಿಸುವುದು. ಕುಬ್ಜಾಕೃತಿಯ ಮಾನವರೂಪವನ್ನು ತಾಳಿದಾಗ ವಾಮನನ ಕಲ್ಪನೆಯನ್ನು ತರುವುದು. ಸ್ಥೂಲಾಕೃತಿ ಧರಿಸಿ ಕ್ರೂರತ್ವವಿರುವ ಮಾನವೀಯತೆಯನ್ನು ಹೊಂದುವುದು. ತಾಯಿಗೆ ಗರ್ಭದಲ್ಲಿ ತಳಮಳದ ಸೆಳೆತ ಜನಿಸುವುದು. ಮಗುವಿಗೆ ಪೌರುಷ ಜನಿಸುವುದು. ಆಗ ಪರಶುರಾಮನ ಅವತಾರವನ್ನು ನೆನಪಿಸದೆ? ನಂತರ ಮಗುವಿಗೆ ಹಿಂದಿನ ಜನ್ಮದ ಮತ್ತು ಮುಂದಿನ ಭವಿಷ್ಯದ ಸ್ಮರಣೆ ಜನಿಸುವುದು. ವಿಲವಿಲ ಒದ್ದಾಟವನ್ನು ಸಹಿಸಿಕೊಳ್ಳುವುದು. ಆಗ ಶ್ರೀರಾಮನ ಕಲ್ಪನೆ ಬಾರದಿರುವುದೆ? ಪೂರ್ಣಸ್ವರೂಪವನ್ನು ಪಡೆದು ತಾಯಿಯ ವರ್ತನೆ-ಆಲೋಚನೆಗಳ ಪಡಿಯಚ್ಚಾಗಿ ಬೆಳೆಯುವಾಗ ಕೃಷ್ಣನ ನೆನಪು ತರದೆ? ಕಲಿಯುವಿಕೆ, ಬಾಹ್ಯಕ್ರಿಯೆಗೆ ಸ್ಪಂದಿಸುವಾಗ ಬುದ್ಧನನ್ನು ಜ್ಞಾಪಿಸದೆ? ಒಂದು ಜೀವದಿಂದ ಇನ್ನೊಂದು ಜೀವ ಪ್ರಪಂಚಕ್ಕೆ ಬರುವ ಕ್ರಿಯೆ ಕಲ್ಕಿಯನ್ನು ನೆನಪಿಸದೆ? ಸಿಸೇರಿಯನ್ ಮಾಡಬಾರದು. ಅದು ಕೃತಕ ಜನನ. ಹೊಕ್ಕುಳಬಳ್ಳಿಯನ್ನು ಜನನದ ಮೊದಲೇ ಕತ್ತರಿಸುವ ಅಸಹಜ ಕ್ರಿಯೆಯಿಂದಾಗಿ ತಾಯಿಗೂ-ಮಗುವಿಗೂ ಇರುವ ಕರುಳ ಸಂಬಂಧ ಹರಿಯಲ್ಪಡುವುದು. ತಾಯಿಯ ಭಾವನೆಯಂತೆ ಮಗುವಿನ ಭಾವನೆ ಜನಿಸುವುದು. ಗರ್ಭಧಾರಣೆ ಹಾಗೂ ವಂಶೋದ್ಧರಣ ಕ್ರಿಯೆ ಒಂದು ತಪಸ್ಸು. ತಪಸ್ಸಿಗೆ ತಕ್ಕ ಫಲ ಲಭಿಸುವುದು. ತಾಯಿಯೇ ಭಾವ-ಬುದ್ಧಿಗಳ ಪೋಷಕಳು.

ಕರ್ದಮಮುನಿ ಹಾಗೂ ದೇವಹೂತಿಯರ ಮಗಳೇ ಅನಸೂಯ. ಅತ್ರಿಮಹರ್ಷಿಯ ಹೆಂಡತಿ. ಪರಮ ಪತಿವ್ರತೆ. ತ್ರಿಮೂರ್ತಿಗಳಿಗೆ ಸರಿಸಮನಾದ ಮಗನನ್ನು ಬಯಸಿದಳು. ಪತ್ನಿಯರ ಪ್ರೇರಣೆಯಿಂದ ಬ್ರಹ್ಮ, ವಿಷ್ಣು, ಮಹೇಶ್ವರರು ವಿವಸ್ತ್ರ ಭಿಕ್ಷೆಯನ್ನು ಬೇಡಿದರು. ಹಾಗೆ ಭಿಕ್ಷೆ ನೀಡಿದರೆ ಪತಿವ್ರತಾಧರ್ಮಕ್ಕೆ ಅಪಚಾರ. ಭಿಕ್ಷೆ ಕೊಡದಿದ್ದರೆ ಗೃಹಸ್ಥಧರ್ಮದ ಅತಿಕ್ರಮಣ. ಉಭಯ ಸಂಕಟ. ಪತಿಯ ಪಾದವನ್ನು ತೊಳೆದ ನೀರನ್ನು ಪ್ರೋಕ್ಷಿಸಿದಳು. ತ್ರಿಮೂರ್ತಿಗಳು ಎಳೆ ಕಂದಮ್ಮರಾದರು. ಅಹಂಕಾರದಿಂದ ನಕ್ಕುನಲಿದ ಸರಸ್ವತಿ, ಲಕ್ಷಿ್ಮೕ ಮತ್ತು ಪಾರ್ವತಿಯರಿಗೆ ಅನಸೂಯೆಯಲ್ಲಿಯೇ ಪತಿ ಭಿಕ್ಷೆ ಕೇಳುವ ಪ್ರಸಂಗ ಬಂದಿತು. ಕರುಣಾಮಯಿಯಾದ ಅನಸೂಯೆಯ ಒಪ್ಪಿಗೆಯಿಂದ ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮ ನಿಜರೂಪವನ್ನು ಪಡೆದರು. ‘ದತ್ತಾತ್ರೇಯ ಸ್ವಾಮಿಯಾಗುವನು. ನಮಗೆ ಸಮನಾಗಿರುವನು’ ಎಂದು ವರವನ್ನು ನೀಡಿ ಅಂತರ್ಧಾನರಾಗುವರು. ವಾಮನನು ಬಲಿಯ ಇಂದ್ರಪದವಿಯನ್ನು ಪಡೆಯಲು ಮೂರು ಪಾದಗಳ ಭೂಮಿಯನ್ನು ಕೇಳಿದ. ಬಲಿಯೂ ಕೊಟ್ಟ. ಕೊನೆಗೆ ಬಲಿಯ ಮನೆಯ ಬಾಗಿಲನ್ನು ಕಾಯುವ ಕಾವಲುಗಾರನಾದ. ಪರಶುರಾಮ ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ಕೊಂದು, ಕುರುಕ್ಷೇತ್ರದಲ್ಲಿ ಸಮಂತಪಂಚಕವೆಂಬ ಕ್ಷತ್ರಿಯರಕ್ತದ ಮಡುವನ್ನೇ ನಿರ್ವಿುಸಿದ. ಆದರೆ ಶ್ರೀರಾಮನಲ್ಲಿ ಯುದ್ಧವನ್ನು ಬಯಸಿ ಹೋಗಿ ತನ್ನ ತಪೋಶಕ್ತಿಯನ್ನೇ ಕಳೆದುಕೊಂಡ. ಶ್ರೀರಾಮನ ಸಮಾಜತೃಪ್ತಿಯೇ ಸೀತೆಯನ್ನು ಕಳೆದುಕೊಳ್ಳುವಂತಾಯಿತು. ಈ ಭೂಮಿಯ ಸಾಂಸಾರಿಕ ಸೆಳೆತ ಎಷ್ಟು ಬಲಿಷ್ಠವಾಗಿರುವುದೆಂದು ಶ್ರೀರಾಮನಿಂದ ತಿಳಿಯುವುದು. ಶ್ರೀರಾಮನನ್ನು ಎಚ್ಚರಿಸಲು ಕಾಲಪುರುಷನೇ ಬರಬೇಕಾಯಿತು. ನಂತರ ಶ್ರೀರಾಮ ಸರಯೂ ನದಿಯಲ್ಲಿ ಕುಟುಂಬ ಸಮೇತನಾಗಿ ಐಕ್ಯನಾದ. ಶ್ರೀಕೃಷ್ಣನಂತೂ ವ್ಯಾಧನ ಬಾಣಕ್ಕೆ ತುತ್ತಾಗಿ ಪ್ರಾಣವನ್ನು ತ್ಯಜಿಸಿದ. ಗುಹ್ಯತಮವಾದ ಇವುಗಳ ಸಾರಸರ್ವಸ್ವವನ್ನು ಭೇದಿಸಿದರೆ ಮಾತ್ರದ ತತ್ತ್ವದ ಅರಿವಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net