

ಸಾಗರ: ಇತ್ತೀಚಿನ ದಿನಗಳಲ್ಲಿ ಗಾಂಧಿಯನ್ನು ಬೈಯುವವನೇ ನೇತಾರ, ದ್ವೇಷ ಹರಡುವವನೇ ನಾಯಕ ಎಂದು ಬಿಂಬಿಸಲಾಗುತ್ತಿದೆ. ಇಂತಹ ವಿಚಿತ್ರವಾದ ಸ್ಥಿತಿಯಲ್ಲಿ ಯುವ ಸಮುದಾಯದ ಜವಾಬ್ದಾರಿ ಹೆಚ್ಚಿದೆ. ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಗಾಂಧಿವಾದಿ ಹಾಗೂ ಬಾಪೂ ಕೆ ಲೋಗ್ ಸಂಘಟನೆ ರಾಷ್ಟ್ರೀಯ ಸಂಚಾಲಕ ವಿಜಯ ಪ್ರತಾಪ್ ಹೇಳಿದರು.
ಸಾಗರ ತಾಲೂಕಿನ ಹೆಗ್ಗೋಡಿನ ಚರಕ ಸಂಸ್ಥೆಯಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶುಕ್ರವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.
ಸೌಹಾರ್ದ, ಸಹಬಾಳ್ವೆಗೆ ಈಗ ಬಲವಾದ ಪೆಟ್ಟು ಬಿದ್ದಿದೆ. ಯುವಜನರನ್ನು ದಾರಿ ತಪ್ಪಿಸುವ ಕೆಲಸ ನಡೆದಿದೆ. ಆದರೆ ಯುವ ಸಮುದಾಯ ಎಚ್ಚರದಿಂದ ಇವೆಲ್ಲವನ್ನೂ ಅವಲೋಕಿಸಬೇಕು. ಇತ್ತೀಚಿನ ದಿನಗಳಲ್ಲಿ ನಗರೀಕರಣ, ನಿರುದ್ಯೋಗ, ಹವಾಮಾನ ಬದಲಾವಣೆ, ವಲಸೆ ಮತ್ತಿತರ ಬಿಕ್ಕಟ್ಟುಗಳಿಂದ ಹೊರಬರಬೇಕೆಂದರೆ ಗಾಂಧೀಜಿಯ ಗ್ರಾಮ ಕೈಗಾರಿಕೆಯೇ ಸದ್ಯದ ಪರಿಹಾರ ಎಂದರು.
ಸ್ವಾತಂತ್ರಾೃನಂತರ ನಮ್ಮೆದುರು ಎರಡು ರೀತಿಯ ಅಭಿವೃದ್ಧಿ ಪರಿಕಲ್ಪನೆಗಳಿದ್ದವು. ಒಂದು ಬಹೃತ್ ಕೈಗಾರಿಕೆ ಸ್ಥಾಪನೆ ಮತ್ತು ಯಾಂತ್ರೀಕರಣ. ಇನ್ನೊಂದು ಗಾಂಧೀಜಿಯ ಸಣ್ಣ ಕೈಗಾರಿಕೆ ಮತ್ತು ಕರಕುಶಲ ವಸ್ತುಗಳ ಉತ್ಪಾದನೆ. ಇದುವರೆಗೆ ನಮ್ಮನ್ನಾಳುವ ಸರ್ಕಾರಗಳು ಬೃಹತ್ ಕೈಗಾರಿಕೆ ಸ್ಥಾಪನೆಗೆ ಒತ್ತು ಕೊಟ್ಟಿದ್ದರಿಂದ ಸಾಕಷ್ಟು ಬಿಕ್ಕಟ್ಟುಗಳನ್ನು ಎದುರಿಸುವಂತಾಯಿತು. ಈಗ ಈ ಎಲ್ಲ ಬಿಕ್ಕಟ್ಟುಗಳಿಗೆ ಗ್ರಾಮಕ್ಕೆ, ಪ್ರಕೃತಿಗೆ ಮರಳುವುದೊಂದೇ ದಾರಿ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
ಗಾಂಧೀಜಿ ಅವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇಡೀ ಜನ್ಮ ಬೇಕಾಗುತ್ತದೆ. ಅವರು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅದರಲ್ಲೂ ಗ್ರಾಮ, ಗ್ರಾಮೀಣ ಬದುಕು ಮತ್ತು ಪ್ರಕೃತಿ ಇವುಗಳ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿಯಾಗದು ಎಂಬುದು ಅವರ ನಿಲುವಾಗಿತ್ತು. ಪೇಟೆಯಲ್ಲಿ ಕಲಿಕೆ, ಉದ್ಯೋಗ ಮಾಡುವುದು ಬೇಡ ಎಂದು ಹೇಳುತ್ತಿಲ್ಲ. ಜತೆಗೆ ಗ್ರಾಮಗಳನ್ನು ಸಶಕ್ತೀಕರಣಗೊಳಿಸಿ ಆ ಮೂಲಕ ಅಭಿವೃದ್ಧಿಯ ಚಿಂತನೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ತಮಿಳುನಾಡಿನ ರಂಗಕರ್ಮಿ ಪ್ರಲಯನ್ ಮಾತನಾಡಿ, ಚರಕದಲ್ಲಿ ಮಾತೃಪ್ರಣೀತವಾದ ಸಂಸ್ಕೃತಿ ಮೇಳೈಸಿದೆ. ಅಂತಃಕರಣ, ಸಹಕಾರಗಳು ಇಲ್ಲಿ ಸಹಬಾಳ್ವೆಗೆ ನಾಂದಿ ಹಾಡಿವೆ. ಗಾಂಧೀಜಿಯ ಕೈಮಗ್ಗ, ನೇಕಾರಿಕೆ ಪರಿಕಲ್ಪನೆಗಳಿಗೆ ಇಲ್ಲಿ ನಿಜವಾದ ಅರ್ಥ ಸಿಕ್ಕಿದೆ ಎಂದು ಹೇಳಿದರು.
ಚರಕ ಸಂಸ್ಥಾಪಕ ಪ್ರಸನ್ನ, ಅಧ್ಯಕ್ಷೆ ಮಹಾಲಕ್ಷ್ಮೀ, ಕಾರ್ಯದರ್ಶಿ ರಮೇಶ್, ಸಿಇಒ ಟೆರೆನ್ಸ್ ಪೀಟರ್, ವ್ಯವಸ್ಥಾಪಕರಾದ ಕೃಷ್ಣ, ಮಧುರಾ ಇತರರಿದ್ದರು.