

ಬೆಂಗಳೂರು: ಮನೆ ಮಾರಾಟ ಮಾಡಿ ಹಣ ಕೊಡಲಿಲ್ಲವೆಂದು ಪತ್ನಿಯನ್ನು ಕೊಂದು ನಾಟಕವಾಡಿದ್ದ ಪತಿಯ ನಿಜ ಬಣ್ಣವನ್ನು ಬಾಗಲೂರು ಪೊಲೀಸರು ಬಯಲು ಮಾಡಿದ್ದಾರೆ.
ಬಾಗಲೂರು ಸಮೀಪದ ಹೊಸಹಳ್ಳಿ ನಿವಾಸಿ ಮುತ್ತಾಜ್ ತಾಜ್ (40) ಮೃತ ಮಹಿಳೆ. ಪತ್ನಿಯ ಕೊಂದ ಆರೋಪಿ ಮೆಹಬೂಬ್ ಸಾಬ್ (45) ಎಂಬಾತನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗ ಡಿಸಿಪಿ ವಿ.ಜೆ. ಸಜೀತ್ ತಿಳಿಸಿದ್ದಾರೆ.
ಹೊಸಹಳ್ಳಿಯ ಮುತ್ತಾಜ್ ತಾಜ್ ಮತ್ತು ಮೆಹಬೂಬ್ ಸಾಬ್ ದಂಪತಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮೆಹಬೂಬ್‌ಗೆ ಇದು 2ನೇ ಮದುವೆ ಆಗಿದ್ದು, ಮೊದಲ ಪತ್ನಿಗೆ ಪುತ್ರಿ ಇದ್ದಳು. ಇತ್ತೀಚೆಗೆ ಆಂಧ್ರಪ್ರದೇಶದ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದ. ಇದಕ್ಕಾಗಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಆದ್ದರಿಂದ ಪತ್ನಿ ಹೆಸರಿನಲ್ಲಿದ್ದ ಮನೆಯನ್ನು ಮಾರಾಟ ಮಾಡಿ ಹಣ ಕೊಡುವಂತೆ ಒತ್ತಾಯ ಮಾಡುತ್ತಿದ್ದ. ಇದಕ್ಕೆ ಮುತ್ತಾಜ್ ಒಪ್ಪಿರಲಿಲ್ಲ.
ಆ.24ರ ರಾತ್ರಿ 8.30ರಲ್ಲಿ ತಾವು ಕೆಲಸ ಮಾಡುತ್ತಿದ್ದ ತೋಟಕ್ಕೆ ತರಕಾರಿ ಬಿಡಿಸಿಕೊಂಡು ಬರುವ ನೆಪದಲ್ಲಿ ಪತ್ನಿಯನ್ನು ಕರೆದೊಯ್ದು ತಲೆ ಹೊಡೆದು ಕೊಲೆ ಮಾಡಿದ್ದ. ಅಲ್ಲಿಂದ ನೇರವಾಗಿ ಮುತ್ತಾಜ್ ತಾಜ್ ತವರು ಮನೆ ಕೆ.ಆರ್.ಪುರಕ್ಕೆ ಹೋಗಿ ಪತ್ನಿ ಕಾಣುತ್ತಿಲ್ಲ. ಇಲ್ಲಿಗೆ ಏನಾದರೂ ಬಂದಿದ್ದಾಳ ಎಂದು ಪ್ರಶ್ನಿಸಿ ಅಲ್ಲಿಯೇ ರಾತ್ರಿ ಉಳಿದುಕೊಂಡಿದ್ದ. ಮಾರನೇ ದಿನ ಬೆಳಗ್ಗೆ ಹೊಸಹಳ್ಳಿಗೆ ಬಂದು ತೋಟದಲ್ಲಿ ಪತ್ನಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ವಿ.ಎಸ್. ಶಬರೀಶ್ ನೇತೃತ್ವದ ತಂಡ ಮೆಹಬೂಬ್ ಸಾಬ್‌ನ್ನು ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.