ಪತ್ನಿ ಹತ್ಯೆ ಮಾಡಿ ಫೇಸ್‌ಬುಕ್ ಲೈವ್ ಮಾಡಿದ ಪತಿ

Crime Logo
Published on

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಪತಿಯೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿದ್ದಾನೆ.
ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ಹತ್ಯೆಯ ಬಳಿಕ ಆರೋಪಿ ಫೇಸ್‌ಬುಕ್ ಲೈವ್ ಮಾಡಿ, ಯಾವ ರೀತಿ ಹತ್ಯೆ ಮಾಡಿದ್ದೇನೆ ಎಂದು ಬಹಿರಂಗ ಪಡಿಸಿದ್ದಾನೆ.
ಚಾಮರಾಜಪೇಟೆಯ ಎಂ.ಡಿ.ಬ್ಲಾಕ್ ನಿವಾಸಿ ಸೈಯಿದಾ ಫಾಜೀಲ್ ಫಾತೀಮಾ(೩೪) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಈಕೆಯ ಪತಿ ತಬ್ರೇಜ್ ಪಾಷಾ(೩೭) ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದಾಪುರದ ಸೋಮೇಶ್ವರ ನಗರ ನಿವಾಸಿ ತಬ್ರೇಜ್ ಪಾಷಾ ಮತ್ತು ಸೈಯಿದಾ ಫಾಜೀಲ್ ಫಾತೀಮಾ ೯ ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಈ ಮಧ್ಯೆ ಕೌಟುಂಬಿಕ ವಿಚಾರವಾಗಿ ಇಬ್ಬರು ದೂರವಾಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಸೈಯಿದಾ ಎಂ.ಡಿ.ಬ್ಲಾಕ್‌ನಲ್ಲಿ ತವರು ಮನೆಯಲ್ಲಿ ವಾಸವಾಗಿದ್ದರೆ, ಆರೋಪಿ ಸಿದ್ದಾಪುರದಲ್ಲಿ ತನ್ನ ಪಾಲಕರ ಜತೆ ವಾಸವಾಗಿದ್ದ. ಾತೀಮಾ ಜೀವನ ನಿರ್ವಹಣೆಗಾಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಮತ್ತೊಂದೆಡೆ ವಿಚ್ಛೇಧನ ಕೋರಿ ಕೋರ್ಟ್ ಮೋರೆ ಹೋಗಿದ್ದರು. ಆದರೆ, ತಮ್ಮ ಸಮುದಾಯ ಗುರುಗಳು ಇಬ್ಬರಿಗೂ ಬುದ್ದಿವಾದ ಹೇಳಿದ್ದರಿಂದ ವಿಚ್ಛೇಧನ ಅರ್ಜಿ ವಾಪಸ್ ಪಡೆದುಕೊಂಡಿದ್ದರು. ಆ ನಂತರವೂ ಆರೋಪಿ ಆಗಾಗ್ಗೆ ಸೈಯಿದಾ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಆಗಲೂ ಹಿರಿಯರು ಮಧ್ಯಸ್ಥಿಕೆ ವಹಿಸಿ ರಾಜಿ-ಸಂಧಾನ ಮಾಡಿದ್ದರು ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಫೇಸ್‌ಬುಕ್ ಲೈವ್
ಶುಕ್ರವಾರ ಬೆಳಗ್ಗೆ ೯ ಗಂಟೆ ಸುಮಾರಿಗೆ ಪತ್ನಿ ಸೈಯಿದಾ ತವರು ಮನೆಗೆ ಬಂದ ಆರೋಪಿ, ಆಕೆಗೆ ತನ್ನೊಂದಿಗೆ ಮನೆಗೆ ಬರುವಂತೆ ಕೇಳಿದ್ದಾನೆ. ಆದರೆ, ಆಕೆ ನಿರಾಕರಿಸಿದ್ದಾಳೆ. ಅದರಿಂದ ಕೋಪಗೊಂಡ ಆರೋಪಿ ತಾನೂ ತಂದಿದ್ದ ಚಾಕುವಿನಿಂದ ಆಕೆಯ ಹೊಟ್ಟೆ, ತಲೆ, ಕೈ, ಕಾಲು ಹಾಗೂ ದೇಹದ ಇತರೆ ಭಾಗಗಳ ಮೇಲೆ ಹತ್ತಾರು ಬಾರಿ ಇರಿದು ಭೀಕರವಾಗಿ ಹತ್ಯೆಗೈದಿದ್ದಾನೆ. ಈ ವೇಳೆ ಸೈಯಿದಾಳ ವಿಶೇಷ ಚೇತನ ತಾಯಿ ಇದ್ದರು. ಆಕೆಯ ಸಹೋದರ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದ. ಈ ವೇಳೆಯೇ ದುರ್ಘಟನೆ ನಡೆದಿದೆ. ಪತ್ನಿಯನ್ನು ಭೀಕರವಾಗಿ ಹತ್ಯೆಗೈದ ಬಳಿಕ ಆರೋಪಿ, ತಾನೂ ಪತ್ನಿಗೆ ಯಾವ ರೀತಿ ನಿಂದಿಸಿದಿದ್ದೇನೆ. ಹಾಗೆಯೇ ಯಾವ ರೀತಿ ಹತ್ಯೆಗೈದಿದ್ದೇನೆ ಎಂದು ಫೇಸ್‌ಬುಕ್ ಲೈವ್ ಮಾಡಿದ್ದಾನೆ. ಆದರೆ, ಅದನ್ನು ಫೇಸ್‌ಬುಕ್‌ನಲ್ಲಿ ಪ್ರೈವೇಟ್ ಮಾಡಿ ಚಾಕು ಹಿಡಿದುಕೊಂಡೇ ಹೊರ ಹೋಗಿದ್ದಾನೆ. ಈತನ ಹಿನ್ನೆಲೆ ಪರಿಶೀಲಿಸಿದಾಗ ೨೦೧೬ರಲ್ಲಿ ಕಾಟನ್‌ಪೇಟೆ ಠಾಣೆ ಪೊಲೀಸರು ಆತನನ್ನು ಸರ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net