ಪತ್ನಿ ದೂರ ಆಗಿದ್ದಕ್ಕೆ ಸಂಬಂಧಿಯ ಕೊಂದ ಪತಿ

Vector illustration in HD very easy to make edits.
Vector illustration in HD very easy to make edits.
Published on

ಬೆಂಗಳೂರು: ಕೌಟುಂಬಿಕ ಕಲಹದಿಂದ ಪತ್ನಿ ದೂರವಾಗಿದ್ದರಿಂದ ಕೋಪಗೊಂಡ ಪತಿ, ದೂರದ ಸಂಬಂಧಿ ಮಹಿಳೆ ಜತೆಗೆ ಜಗಳ ತೆಗೆದು ಚಾಕುವಿನಿಂದು ಇರಿದು ಹತ್ಯೆ ಮಾಡಿದ್ದಾನೆ.

ಪಾದರಾಯನಪುರ 4ನೇ ಕ್ರಾಸ್ ನಿವಾಸಿ ಪರ್ವಿನ್ ತಾಜ್ (33) ಮೃತೆ. ಭಾನುವಾರ ರಾತ್ರಿ 7.30ರಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಅಂಚೆಪಾಳ್ಯದ ಜುನೈದ್ (26) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುನೈದ್, ಕೊಲೆಯಾದ ಪರ್ವಿನ್ ತಾಜ್‌ನ ಪತಿಯ ಅಕ್ಕನ ಅಳಿಯ. ಈ ಹಿಂದೆ ಅವೆನ್ಯೂ ರಸ್ತೆಯ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ಪತ್ನಿ ಮತ್ತು ಮಗು ದೂರವಾಗಿ ಪ್ರತ್ಯೇಕವಾಗಿ ನೆಲೆಸಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಜುನೈದ್, ಕಳೆದ 1 ವರ್ಷದಿಂದ ದುಶ್ಚಟಗಳ ವ್ಯಸನಿಯಾಗಿದ್ದ. ಈ ನಡುವೆ ಪರ್ವಿನ್ ತಾಜ್ ಮನೆಯವರ ಮೇಲೆ ದ್ವೇಷ ಸಾಧಿಸುತ್ತಿದ್ದ.

ಭಾನುವಾರ ಸಂಜೆ 7.30ರಲ್ಲಿ ಪರ್ವಿನ್ ಗಂಡ ಊಟ ಮುಗಿಸಿ ಮನೆಯಿಂದ ಹೊರಗೆ ಹೋಗಿದ್ದ. ಇಬ್ಬರು ಮಕ್ಕಳು ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಅಜ್ಜಿ ಮನೆಗೆ ತೆರಳಿದ್ದರು. ಮನೆಯಲ್ಲಿ ಪರ್ವಿನ್ ಒಬ್ಬರೇ ಇದ್ದರು. ಇದನ್ನು ತಿಳಿದು ಮನೆಗೆ ತೆರಳಿದ ಜುನೈದ್, ನನ್ನ ಹೆಂಡತಿ-ಮಗುವನ್ನು ತೋರಿಸು ಎಂದು ಜಗಳ ಮಾಡಿದ್ದ.

ಆನಂತರ ಬ್ಯಾಗಿನಲ್ಲಿ ತಂದಿದ್ದ ಚಾಕು ತೆಗೆದು ಏಕಾಏಕಿ ಪರ್ವಿನ್ ಹೊಟ್ಟೆಗೆ ಇರಿದು ಪರಾರಿಯಾಗಿದ್ದ. ಸ್ಥಳೀಯರು ಆಕೆಯ ನೆರವಿಗೆ ಧಾವಿಸಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸಲಿಲ್ಲ. ಪರ್ವಿನ್ ತಾಜ್ ಪತಿ ನೀಡಿದ ದೂರಿನ ಮೇರೆಗೆ ಜೆ.ಜೆ.ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net