

ಶ್ರೀವಸಿಷ್ಠರು ಶ್ರೀರಾಮನಿಗೆ ಮಂಡಪೋಪಾಖ್ಯಾನವನ್ನು ಹೇಳುತ್ತಿ ದ್ದಾರೆ. ಸಂಕ್ಷೇಪದಲ್ಲಿ ಹಿಂದಿನ ಕಥೆ ಹೀಗಿದೆ- ಪದ್ಮ ಮಹಾರಾಜನು ಯುದ್ಧದಲ್ಲಿ ತೀರಿಕೊಂಡನು. ಅವನನ್ನು ತಿರುಗಿ ತನಗೆ ದೊರಕಿಸಿ ಕೊಡಬೇಕೆಂದು ಪತ್ನಿಯಾದ ಲೀಲಾ ಮಹಾರಾಣಿಯು ಶ್ರೀದೇವಿ ಯಲ್ಲಿ ಮೊರೆಯಿಟ್ಟಳು. ಶ್ರೀದೇವಿಯು ಲೀಲಾ ಮಹಾರಾಣಿಗೆ ಸಮಾಧಿಸ್ಥಿತಿಯನ್ನು ಉಂಟುಮಾಡುವ ಮೂಲಕ ಈ ಜಗತ್ತು ಪರಮಾರ್ಥ ಸತ್ಯವಲ್ಲ ಎಂಬುದನ್ನು ಅನೇಕ ರೀತಿಯಿಂದ ತೋರಿಸಿಕೊಡುತ್ತಿದ್ದಾಳೆ. ಇದೇ ದಂಪತಿಗಳ ಹಿಂದಿನ ಜನ್ಮದ ಸ್ಥಳವನ್ನು ಮತ್ತು ಅಲ್ಲಿಯ ಘಟನೆಗಳನ್ನು ತೋರಿಸಿಕೊಂಡು ಬಂದಿದ್ದಾಳೆ.
ಲೋಕ, ಲೋಕಾಂತರಗಳನ್ನು ತೋರಿಸಿದ್ದಾಳೆ. ಹಿಂದಿನ ನೂರಾರು ಜನ್ಮಗಳನ್ನು ತೋರಿಸಿದ್ದಾಳೆ. ಪದ್ಮ ಮಹಾರಾಜನ ಮುಂದಿನ ಜನ್ಮವನ್ನು ನೋಡಬೇಕೆಂದು ಅವಳಿಗೆ ಅಪೇಕ್ಷೆಯಾಯಿತು. ವಿದೂರಥನೆಂಬ ಭರತಖಂಡದ ಚಕ್ರವರ್ತಿಯೇ ಪದ್ಮ ಮಹಾರಾಜನ ಮುಂದಿನ ಜನ್ಮ. ಸೂಕ್ಷ್ಮರೂಪದಿಂದ ಲೀಲಾ ಮಹಾರಾಣಿಯನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದಾಳೆ. ಆದರೆ ವಿದೂರಥನ ರಾಜಧಾನಿಯ ಸಮೀಪದಲ್ಲಿ ಘೊರ ಯುದ್ಧ ನಡೆಯುತ್ತಿದೆ. ಸಿಂಧುರಾಜನೆಂಬ ಸಾಮಂತ ರಾಜನು ಇತರ ಕೆಲವು ಸಾಮಂತ ರಾಜರೊಂದಿಗೆ ಸೇರಿಕೊಂಡು ಬಂದಿದ್ದರಿಂದ ಯುದ್ಧ ನಡೆಯುತ್ತಿದೆ. ಯುದ್ಧದಲ್ಲಿ ಜಯಪರಾಜಯಗಳನ್ನು ನಿರ್ಧರಿಸಲು ಸಾಧ್ಯವಾಗದೇ ಹೋಯಿತು. ಆದರೆ ಅಪಾರವಾದ ಪ್ರಾಣಹಾನಿ ಆಗಿದ್ದರಿಂದ ಯುದ್ಧವನ್ನು ನಿಲ್ಲಿಸಬೇಕೆಂಬ ನಿರ್ಧಾರಕ್ಕೆ ಎರಡೂ ಪಕ್ಷದವರು ಬಂದರು. ಯುದ್ಧವೇನೋ ನಿಂತಿದೆ. ಆದರೆ ಯುದ್ಧರಂಗದಲ್ಲಿ ಹೆಣಗಳ ರಾಶಿಗಳು ಬಿದ್ದಿವೆ, ರಕ್ತದ ನದಿಗಳು ಹರಿಯುತ್ತಿವೆ. ಈ ಸ್ಥಿತಿಯನ್ನು ಈಗ ಶ್ರೀವಸಿಷ್ಠರು ಮನೋಜ್ಞವಾಗಿ ವರ್ಣಿಸುತ್ತಿದ್ದಾರೆ.
‘ಶ್ರೀರಾಮ! ಯುದ್ಧದಲ್ಲಿ ಮಡಿದವರ ಶವಗಳನ್ನು ಸಂಸ್ಕಾರ ಮಾಡಲು ಎತ್ತಿಕೊಂಡು ಬರಬೇಕಾಗಿದೆ. ಅದಕ್ಕಾಗಿ ಶಿಬಿರದಲ್ಲಿರುವ ಸೇನೆಗಳ ಕೆಲವು ಸೈನಿಕರಿಗೆ ಸೇನಾಪತಿಗಳು ಆಜ್ಞಾಪಿಸಿದ್ದಾರೆ. ಆ ಜ್ಞಾಪಿಸಲ್ಪಟ್ಟ ಸೈನಿಕರ ಗುಂಪಿನ ಜೊತೆ ಸೈನಿಕರಲ್ಲದ ಸಾಮಾನ್ಯ ಜನರು ಹೋಗುತ್ತಿದ್ದಾರೆ. ಸಾಮಾನ್ಯ ಜನರಿಗೆ ಒಬ್ಬೊಬ್ಬರೇ ರಣರಂಗದೊಳಗೆ ಪ್ರವೇಶಿಸಲು ಭಯವಾಗುತ್ತದೆ. ಆದ್ದರಿಂದ ಗುಂಪು ಕಟ್ಟಿಕೊಂಡು ಶೀಘ್ರವಾಗಿ ಶವಗಳನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ. ಹೊರಕ್ಕೆ ತರುವ ಮೊದಲು ತಮ್ಮ ಪರಿಚಿತರ ಶವವನ್ನು ಗುರುತಿಸಲು ಶವಗಳನ್ನು ಪರೀಕ್ಷಿಸಿ ನೋಡುತ್ತಿದ್ದಾರೆ. ತ್ವರೆಯಿಂದ ತಮಗೆ ಬೇಕಾದ ಶವಗಳನ್ನು ಅನ್ವೇಷಣೆ ಮಾಡಿಕೊಂಡು ಹೊರಗೆತರುತ್ತಿದ್ದಾರೆ. ಹಾಗೆ ತರುತ್ತಿರುವಾಗ ಪ್ರಾಣ ಇದ್ದವರನ್ನು ತಳ್ಳಿಕೊಂಡೇ ಬರುತ್ತಿದ್ದಾರೆ. ಅಲ್ಲಿದ್ದ ಸೇವಕರನ್ನು ತಳ್ಳಿಕೊಂಡು ಬರುತ್ತಿರುವುದರಿಂದ ಗಲಿಬಿಲಿಯ ವಾತಾವರಣ ಉಂಟಾಗಿದೆ.’
‘ಯುದ್ಧರಂಗದಲ್ಲಿ ಹರಿಯುತ್ತಿರುವ ನೂರಾರು ರಕ್ತದ ನದಿಗಳ ದೃಶ್ಯ ತುಂಬಾ ಭಯಾನಕವಾಗಿದೆ. ಆ ನದಿಗಳಲ್ಲಿ ತೇಲಿಹೋಗುತ್ತಿರುವ ಕೇಶ ಸಮೂಹಗಳೇ ಶೈವಾಲಗಳು. (ನೀರಿನಲ್ಲಿ ಬೆಳೆಯುವ ಪಾಚಿಗಳನ್ನು ಸಂಸ್ಕೃತದಲ್ಲಿ ಶೈವಾಲಗಳೆಂದು ಕರೆಯುತ್ತಾರೆ) ತೇಲುತ್ತಿರುವ ರುಂಡಗಳ ಮುಖಗಳೇ ಆ ನದಿಯಲ್ಲಿರುವ ಕಮಲಗಳು. ತೇಲಿಹೋಗುತ್ತಿರುವ ಚಕ್ರಾಯುಧಗಳೇ ಆ ನದಿಯ ಚಕ್ರಾವರ್ತಗಳು. (ಚಕ್ರಾಕಾರದ ನೀರಿನ ಸುಳಿಗಳು) ಎತ್ತರದ ತರಂಗಗಳಿಂದ ಕೂಡಿದ ದೊಡ್ಡದಾದ ರಕ್ತನದಗಳು ಹರಿಯುತ್ತಿವೆ.’ (ಈ ಶ್ಲೋಕದ ಪೂರ್ವಾ ರ್ಧದಲ್ಲಿ ನದಿ ಎಂಬ ಶಬ್ದದ ಪ್ರಯೋಗವಾಗಿದೆ, ಉತ್ತರಾರ್ಧದಲ್ಲಿ ನದ ಎಂಬ ಶಬ್ದ ಪ್ರಯೋಗವಾಗಿದೆ. ಸಂಸ್ಕೃತ ದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಹೊಳೆಗಳನ್ನು ನದಿ ಎಂಬುದಾಗಿ ಕರೆಯುತ್ತಾರೆ, ಪಶ್ಚಿಮಾಭಿಮುಖವಾಗಿ ಹರಿಯುವ ಹೊಳೆಗಳನ್ನು ನದ ಎಂಬುದಾಗಿ ಕರೆಯುತ್ತಾರೆ. ಯುದ್ಧರಂಗದಲ್ಲಿ ಕೆಲವು ರಕ್ತ ಪ್ರವಾಹಗಳು ಪೂರ್ವಾಭಿಮುಖವಾಗಿ ಹರಿಯುತ್ತಿದ್ದರೆ, ಮತ್ತೆ ಕೆಲವು ರಕ್ತ ಪ್ರವಾಹಗಳು ಪಶ್ಚಿಮಾಭಿಮುಖವಾಗಿ ಹರಿಯುತ್ತಿವೆ ಎಂಬುದು ಈ ಎರಡು ಶಬ್ದಗಳ ಸ್ವಾರಸ್ಯದಿಂದ ಗೊತ್ತಾಗುತ್ತದೆ.)
‘ಕೆಲವು ಅರ್ಧ ಮರಣ ಹೊಂದಿದ ಸೈನಿಕರು ಆ ಅರೆ ಪ್ರಜ್ಞಾವಸ್ಥೆಯಲ್ಲಿಯೇ, ಯುದ್ಧ ನಿಂತಿರುವ ಅರಿವೇ ಇಲ್ಲದೇ ಮತ್ತೆ ಯುದ್ಧ ಮಾಡಲು ತಮ್ಮ ಮೈ ಕೈಗಳಿಗೆ ತಾಗಿಕೊಂಡು ಬಿದ್ದಿರುವ ಆಯುಧಗಳನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯ ಮನಸ್ಸನ್ನು ಕಲಕುವಂತ್ತಿತ್ತು. ಅಬ್ಬಾ! ಅದೆಷ್ಟು ದೇಶಭಕ್ತಿ ! ಅತ್ತ ಮೃತ ಸೈನಿಕರ ಮನೆಗಳಲ್ಲಿ ಇನ್ನೊಂದು ಮನಸ್ಸನ್ನುಕಲಕುವ ದೃಶ್ಯ. ಆ ಮನೆಯಲ್ಲಿ ಎಲ್ಲರಿಗೂ ಶೋಕವಿರುವುದು ಸಹಜ. ಆ ಶೋಕದ ಮಧ್ಯದಲ್ಲಿಯೇ ಮೃತ ಸೈನಿಕರ ಆಭರಣಗಳನ್ನು ಮನೆಯವರು ಸತ್ಪಾತ್ರರಿಗೆ ದಾನಮಾಡುತ್ತಿದ್ದರು. ಅಲ್ಲದೇ ಅವರಿಗೆ ಸದ್ಗತಿ ಆಗಲೆಂಬ ಬಯಕೆಯಿಂದ ಆನೆ, ಕುದುರೆ ಮೊದಲಾದವುಗಳನ್ನು ದಾನ ಮಾಡುತ್ತಿದ್ದರು.
ಅರ್ಧ ಮರಣ ಹೊಂದಿದ ಸೈನಿಕರ ವೇದನೆಯ ದಾರುಣ ಸ್ಥಿತಿ ನೋಡಿದವರ ಮನಸ್ಸಿನ ಮರ್ಮವನ್ನೇ ಛೇದಿಸುವಂತಿತ್ತು. ಪ್ರಾಣೋತ್ಕ್ರಮಣದ ಕೊನೆ ಹಂತ ಸಮೀಪಿಸುತ್ತಿರುವಾಗ ತಮಗೆ ಇಷ್ಟರಾದ ಮಗ,ತಾಯಿ ಅಥವಾ ದೇವರ ಹೆಸರನ್ನು ಅಥವಾ ಪರಮೇಶ್ವರನ ಹೆಸರನ್ನು ಸಂಕಟ ಪಡುತ್ತಾ ಅವರು ಹೇಳುತ್ತಿದ್ದರು. ಹಾ ಹಾ ಎನ್ನುವಂತೆ ಅಥವಾ ಹಿ ಹಿ ಎನ್ನುವಂತೆ ಉಸಿರು ಬಿಡುತ್ತಾ ಆಳವಾದ ಸಂಕಟ (ಶಾರೀರಿಕವಾದ ವೇದನೆ) ಪಡುತ್ತಾ ಅವರು ಈ ರೀತಿ ಕರೆಯುವುದನ್ನು ನೋಡಿದರೆ ಮನಸ್ಸಿನ ಆಳದಲ್ಲಿ ಘಾಸಿಯಾಗುವುದರಲ್ಲಿ ಸಂದೇಹವಿಲ್ಲ.’
‘ಸಾಮರ್ಥ್ಯವಿದ್ದರೂ ಯುದ್ಧದಲ್ಲಿ ಅಷ್ಟೇನೂ ಪರಾಕ್ರಮವನ್ನು ಮೆರೆಯದೇ ಮರಣ ಹೊಂದುತ್ತಿರುವ ಸೈನಿಕರು ಅಯ್ಯೋ ನನ್ನ ಪ್ರಾರಬ್ಧವೇ! ಎನ್ನುತ್ತಾ ಸಂಕಟಪಡುತ್ತಿದ್ದರು. ಮತ್ತೆ ಕೆಲವು ಆನೆಗಳ ಜೊತೆ ಯುದ್ಧಮಾಡುವ ತಂತ್ರಗೊತ್ತಿಲ್ಲದೆ ಸೊಂಡಿಲಿನಿಂದ ಎತ್ತಿ ಎಸೆಯಲ್ಪಟ್ಟು ಬಿದ್ದು ಒದ್ದಾಡುತ್ತಿರುವ ಸೈನಿಕರು, ಮತ್ತೆ ತಮ್ಮನ್ನು ಆನೆ ತುಳಿಯಬಹುದೆಂಬ ಭಯದಿಂದ ನಡಗುತ್ತಾ ಇಷ್ಟದೇವರನ್ನು ಪ್ರಾರ್ಥಿಸಿಕೊಳ್ಳುತ್ತಿದ್ದರು.
(ಪ್ರತಿಕ್ರಿಯಿಸಿ: vvsudina@gmail.com, info.swarnavalli@gmail.com)