ತೋಟದ ಮನೆಯಲ್ಲಿ ವೃದ್ಧ ದಂಪತಿಯ ಭೀಕರ ಹತ್ಯೆ; ಸರಣಿ ಕ್ರೈಂಗೆ ಬೆಚ್ಚಿಬಿದ್ದ ಜನತೆ

Murder
Published on

ಹಾಸನ: ಚನ್ನರಾಯಪಟ್ಟಣದಲ್ಲಿ ಸರಣಿ ಕ್ರೈಂಗಳು ನಡೆಯುತ್ತಿದ್ದು, ಸ್ಥಳೀಯ ಜನರನ್ನು ಬೆಚ್ಚಿಬೀಳಿಸಿದೆ.

ಇತ್ತೀಚೆಗಷ್ಟೇ ಬೇಡಿಗನಹಳ್ಳಿಯಲ್ಲಿ ಯುವಕನೋರ್ವನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಆ ದುರ್ಘಟನೆಯಿಂದ ಹೊರಬರುವ ಮೊದಲೇ ಇನ್ನೊಂದು ಬರ್ಬರ ಹತ್ಯೆ ಚನ್ನರಾಯಪಟ್ಟಣದಲ್ಲಿ ನಡೆದುಹೋಗಿದೆ.

ಹಾಲಗೊಂಡನಹಳ್ಳಿಯಲ್ಲಿ ತೋಟದ ಮನೆಯೊಂದರಲ್ಲಿ ವಾಸವಾಗಿದ್ದ ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಮುರಳೀಧರ (81), ಉಮಾದೇವಿ (67) ಕೊಲೆಯಾದ ದಂಪತಿ.

ದುಷ್ಕರ್ಮಿಗಳು ಮನೆಯ ಬಾಗಿಲು ತೆಗೆಸಿ, ಹತ್ಯೆ ಮಾಡಿ ಹೋಗಿದ್ದಾರೆ ಎಂದು ಮುರಳೀಧರ ಅವರ ಸೋದರರು ಹೇಳಿದ್ದಾರೆ.

ಘಟನೆ ನಡೆದಿದ್ದು ಆಗಸ್ಟ್​ 29ರಂದು. ಆದರೆ ಇಂದು ಬೆಳಗ್ಗೆ ಕೆಲಸದವರು ತೋಟದ ಮನೆಗೆ ಹೋದಾಗಲೇ ವೃದ್ಧರಿಬ್ಬರ ಹತ್ಯೆಯಾಗಿದ್ದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಿರಾಟ್​ ಕೊಹ್ಲಿಗೆ ಸವಾಲೆಸೆಯಲು ಸಜ್ಜಾದ 600 ವಿಕೆಟ್​ ಸರದಾರ ಆಂಡರ್​ಸನ್​

ಹಾಸನ ಎಸ್​​ಪಿ ಶ್ರೀನಿವಾಸ ಗೌಡ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ. ಕೊಲೆಯಾದ ದಂಪತಿಗೆ ಮಕ್ಕಳಿರಲಿಲ್ಲ. ಮುರಳೀಧರ್​ ಅವರಿಗೆ ಐವರು ಸೋದರರು ಇದ್ದಾರೆ. ಇವರೆಲ್ಲರೂ ಅನ್ಯೋನ್ಯವಾಗಿಯೇ ಇದ್ದಾರೆ. ನಮ್ಮ ಮಧ್ಯೆ ಯಾವುದೇ ವ್ಯಾಜ್ಯವೂ ಇರಲಿಲ್ಲ ಎಂದು ಮುರಳಿ ಅವರ ಸೋದರರೂ ಸ್ಪಷ್ಟಪಡಿಸಿದ್ದಾರೆ.

ಮುರಳೀಧರ್​ ಅವರ ತಂದೆ ಕೃಷ್ಣಮೂರ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಹಾಗಾಗಿ ಸರ್ಕಾರ ಅವರಿಗೆ 80 ಎಕರೆ ಜಮೀನನ್ನು ಬಳುವಳಿಯಾಗಿ ನೀಡಿತ್ತು. ಮುರಳೀಧರ್​ ಅವರು ಬಿಎಸ್​ಸಿ ಅಗ್ರಿಕಲ್ಚರ್​ ವ್ಯಾಸಂಗ ಮಾಡಿದ್ದವರು. ಕೃಷಿಯಲ್ಲಿ ಏನಾದರೂ ಸಾಧಿಸಬೇಕು ಎಂಬ ಆಸಕ್ತಿ ಹೊಂದಿದ್ದರು. ಹಾಗಾಗಿ ಹೊರವಲಯದಲ್ಲಿರುವ ಆಲಗೊಂಡನಹಳ್ಳಿಯ ತೋಟದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net