

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಗೊಂಡ ಬೆನ್ನಲ್ಲೇ ಶುರುವಾಗಿದ್ದ ಕೋಮುಲ್ ಚುನಾವಣಾ ಪ್ರಕ್ರಿಯೆ ಆರಂಭದಲ್ಲೇ ಸ್ಥಗಿತಗೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.
ಕೋಚಿಮುಲ್ ಒಕ್ಕೂಟ ವಿಭಜನೆಗೊಂಡು, ಚಿಕ್ಕಬಳ್ಳಾಪುರ ಪ್ರತ್ಯೇಕಗೊಂಡಿದೆ. ಎರಡೂ ಒಕ್ಕೂಟಗಳಿಗೆ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ವಿಭಜನೆ ಪ್ರಕ್ರಿಯೆ ಚುರುಕು ಪಡೆದಿದೆೆ. ಇದರ ನಡುವೆ, ಕೋಲಾರ ಒಕ್ಕೂಟದಲ್ಲಿ ಅಧಿಕಾರಿಗಳು, ಆಡಳಿತಾಧಿಕಾರಿಯನ್ನು ಪರಿಗಣಿಸದೆ ಎಂಡಿ ಮತ್ತು ಆಡ್ಮಿನ್ ರ್ನಿಣಯ ತೆಗೆದುಕೊಳ್ಳುತ್ತಿದ್ದಾರೆಂಬ ಆರೋಪ ದಟ್ಟವಾಗಿದೆ.
ಇದರ ನಡುವೆ, ಕ್ಷೇತ್ರ ವಿಂಗಡಣೆ ಕುರಿತು ಸಹಕಾರ ಇಲಾಖೆಯ ಜಂಟಿ ಉಪನಿಬಂಧಕರಿಗೆ (ಜೆಆರ್ಸಿಎಸ್)ಪತ್ರ ಬರೆಯಲು ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರ ಇಲ್ಲ ಎಂದು ಮುಳಬಾಗಿಲು ತಾಲೂಕಿನ ಪೆರುಮಾಕನಹಳ್ಳಿ ಡೇರಿ ಅಧ್ಯಕ್ಷ ಉದಯಕುಮಾರ್ ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಮಂಗಳವಾರ ವಿಚಾರಣೆ ನಡೆಸಿದ ಕೋರ್ಟ್, ಜೆಆರ್ಸಿಎಸ್ ಹೊರಡಿಸಿದ್ದ ಸಹಕಾರ ಕಾಯ್ದೆ 12(5) ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಸದ್ಯ, ಹೈಕೋರ್ಟ್ನಲ್ಲಿ ವಿಚಾರಣೆ ನಡೆದು ಅರ್ಜಿ ಕುರಿತು ತೀರ್ಪು ನೀಡುವವರೆಗೆ ಅಥವಾ ತಡೆಯಾಜ್ಞೆ ತೆರವಾಗುವವರೆಗೆ ಕೋಮುಲ್ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲದಂತಾಗಿದೆ. ಇದರಿಂದ ಒಕ್ಕೂಟದ ಚುನಾವಣಾ ಪ್ರಕ್ರಿಯೆಯೇ ಸ್ಥಗಿತಗೊಳ್ಳುವಂತಾಗಿದೆ.
ಸದಸ್ಯರ ಅಭಿಪ್ರಾಯ ಪಡೆಯಲು ಸೂಚನೆ
ಇದಕ್ಕೂ ಮೊದಲು ಕ್ಷೇತ್ರ ಆಯ್ಕೆ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿ ಹಾಗೂ 12(6) ಪ್ರಕಾರ ಜೆಆರ್ಸಿಎಸ್ ಹೊರಡಿಸಿದ್ದ ಆದೇಶದ ವಿರುದ್ಧ ಬಂಗಾರಪೇಟೆ ತಾಲೂಕಿನ ಒಂಬತ್ತುಗುಳಿ ಹಾಲು ಸಹಕಾರ ಸಂಘದ ಅಧ್ಯಕ್ಷ ರಾಮರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದರು. ಆಗ, ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಜೆಆರ್ಸಿಎಸ್ ಆದೇಶ ರದ್ದು ಮಾಡಿ ವಾರದೊಳಗೆ ಸರ್ವ ಸದಸ್ಯರ ಸಭೆ ಮಾಡಿ, ಅಲ್ಲಿನ ಅಭಿಪ್ರಾಯದಂತೆ ಹೊಸದಾಗಿ ಕ್ಷೇತ್ರ ವಿಂಗಡಣೆ ಪಟ್ಟಿ ಸಿದ್ಧಪಡಿಸಬೇಕು ಎಂದು ಸೂಚಿಸಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡ ಅಧಿಕಾರಿಗಳು, ಸರ್ವಸದಸ್ಯರ ಸಭೆ ನಡೆಸಿ ಮೊದಲು ಸಿದ್ಧಪಡಿಸಿದ್ದ ಕ್ಷೇತ್ರ ವಿಂಗಡಣೆ ಪಟ್ಟಿಗೆ ಅನುಮೋದನೆ ಪಡೆದುಕೊಂಡು ಗುರಿ ಸಾಧನೆಗೆ ಮುಂದಾಗಿದ್ದರು. ಸದ್ಯ ತಡೆಯಾಜ್ಞೆಯಿಂದ ಎಲ್ಲಕ್ಕೂ ತಡೆಬಿದ್ದಂತಾಗಿದೆ.
ವಿಂಗಡಣೆ ಪಟ್ಟಿಗೆ ಸೂಚಿಸಿದ್ದ ಜೆಆರ್ಸಿಎಸ್
ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್.ಮೈತ್ರಿ ಅವರು ಕೋಮುಲ್ಗೆ ಆಡಳಿತಾಧಿಕಾರಿಯಾಗಿ ನೇಮಕಗೊಂಡ ನಂತರ ಒಕ್ಕೂಟದ ಎಂಡಿ ಗೋಪಾಲಮೂರ್ತಿ ಸಹಕಾರ ಇಲಾಖೆ ಜಂಟಿ ನಿಬಂಧಕರಿಗೆ ಪತ್ರ ಬರೆದು ಸಹಕಾರ ಕಾಯ್ದೆ 12(5)ರ ಪ್ರಕಾರ ಕ್ಷೇತ್ರ ವಿಂಗಡಣೆ ಮಾಡಿ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಲು ಅನುಮತಿ ಕೋರಿದ್ದರು. ಇದಕ್ಕೆ ಮರುದಿನವೇ ಜೆಆರ್ಸಿಎಸ್ ಅನುಮತಿ ನೀಡಿ 30 ದಿನದೊಳಗೆ ಕ್ಷೇತ್ರ ವಿಂಗಡಣೆ ಪಟ್ಟಿ ಸಿದ್ಧಪಡಿಸಿ ಶಿಫಾರಸು ಮಾಡಿದ್ದರು. ಆದರೆ, ಒಕ್ಕೂಟ ವಿಭಜನೆಯ ಕುರಿತು ರ್ನಿಣಯಕೈಗೊಳ್ಳಲು ಅಧಿಕಾರ ಇರುವುದು ಆಡಳಿತಾಧಿಕಾರಿಗೆ. ಆದರೆ, ಎಂಡಿ ಮತ್ತು ಆಡ್ಮಿನ್ ವ್ಯವಸ್ಥಾಪಕ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದಲ್ಲದೆ, ಮಾಜಿ ಅಧ್ಯಕ್ಷ ನಂಜೇಗೌಡರ ಆಣತಿಯಂತೆ ಕೆಲಸ ಮಾಡುತ್ತಿರುವುದು ಈ ಬೆಳವಣಿಗೆಗಳಿಗೆ ಕಾರಣ ಎಂದು ಕೆಲ ನಿರ್ದೇಶಕರು ಆರೋಪಿಸಿದ್ದರು.
ಶಾಸಕ, ಮಾಜಿ ನಿರ್ದೇಶಕರ ಆಕ್ರೋಶ
12(5)ರ ಪ್ರಕಾರ ನೀಡಿದ್ದ ಆದೇಶದಂತೆ 30 ದಿನದೊಳಗೆ ಕ್ಷೇತ್ರ ವಿಂಗಡಣೆ ಮಾಡಿ ಕರಡು ಪಟ್ಟಿ ಕಳಿಸಿಲ್ಲ ಎಂದು ಜೆಆರ್ಸಿಎಸ್ ನ.28ರಂದೇ 12(6) ಪ್ರಕಾರ ಕ್ಷೇತ್ರ ವಿಂಗಡಣೆ ಮಾಡಿ ಪಟ್ಟಿ ಪ್ರಕಟಿಸಿದ್ದರು. ಆದರೆ, ಜೆಆರ್ಸಿಎಸ್ ಪ್ರಕಟಿಸಿರುವ ಕ್ಷೇತ್ರ ವಿಂಗಡಣೆ ಅವೈಜ್ಞಾನಿಕವಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಟೀಕಿಸಿದ್ದರು. ಇದರ ಬೆನ್ನಲೇ ಒಕ್ಕೂಟಕ್ಕೆ ಭೇಟಿ ನೀಡಿದ್ದ ಮಾಜಿ ನಿರ್ದೇಶಕರಾದ ವಡಗೂರು ಹರೀಶ್, ನಾಡೇನಹಳ್ಳಿ ನಾಗರಾಜ್ ತೀವ್ರ ಆಕ್ರೋಶವ್ಯಕ್ತಪಡಿಸಿ, ಆಡಳಿತಾಧಿಕಾರಿ ಸಮ್ಮುಖದಲ್ಲೇ ಎಂಡಿ, ಅಡ್ಮಿನ್ ವ್ಯವಸ್ಥಾಪಕನನ್ನು ತರಾಟೆಗೆ ತೆಗೆದುಕೊಂಡಿದ್ದರು.