ಗಣಪನನ್ನು ಮಾನವ ರೂಪದಲ್ಲಿ ಪೂಜಿಸುವ ಏಕೈಕ ಸ್ಥಳ: ಇಲ್ಲಿಗೆ ಹೋದರೆ ಸಂತೋಷ ಹೆಚ್ಚುತ್ತಂತೆ! Lord Ganesha

Lord Ganesha
Published on

Lord Ganesha : ಎಲ್ಲ ಹಿಂದೂಗಳನ್ನು ಒಟ್ಟುಗೂಡಿಸುವ ಹೆಮ್ಮೆಯ ಹಬ್ಬ ಗಣೇಶ ಚತುರ್ಥಿಯ ಸಮಯ ಮತ್ತೆ ಬಂದಿದೆ. ಇಂದು ಗೌರಿ ಆಗಮನವಾಗಿದ್ದು, ನಾಳೆ ದೇಶಾದ್ಯಂತ ಗಣಪನನ್ನು ಬಹಳ ವಿಜೃಂಭಣೆಯಿಂದ ಬರಮಾಡಿಕೊಳ್ಳಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ವಿನಾಯಕನಿಗೆ ವಿಶೇಷ ಸ್ಥಾನವಿದೆ. ಯಾವುದೇ ರೀತಿಯ ಪೂಜೆ ಮಾಡಿದರೂ, ಯಾವುದೇ ರೀತಿಯ ವ್ರತಗಳನ್ನು ಮಾಡಿದರೂ, ವಿನಾಯಕನಿಗೆ ಮೊದಲ ಪೂಜೆ ಸಿಗುತ್ತದೆ.

ಅಜ್ಞಾನವನ್ನು ಹೋಗಲಾಡಿಸುವ ದೇವರಾಗಿ ವಿನಾಯಕ ಭಕ್ತರ ಮನಸ್ಸಿನಲ್ಲಿ ಸದಾ ನೆಲೆಸಿದ್ದಾನೆ. ಗಣಪ ಅಂದರೆ, ಥಟ್ಟನೆ ನಮ್ಮ ನೆನಪಿಗೆ ಬರುವುದು ಆನೆಯ ಮುಖದ ಗಣಪ. ಇಲ್ಲಿಯವರೆಗೆ, ನಾವೆಲ್ಲ ನೋಡಿರುವುದು ಇದೇ ಮುಖವನ್ನು. ಆದರೆ, ಗಣೇಶನನ್ನು ಮಾನವ ರೂಪದಲ್ಲಿ ಪೂಜಿಸುವ ಒಂದು ಪವಿತ್ರ ಸ್ಥಳವಿದೆ. ಅದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಎಲ್ಲ ವಿಘ್ನಗಳ ನಿವಾರಕನಾಗಿರುವ ವಿನಾಯಕನನ್ನು ಮಾನವ ರೂಪದಲ್ಲಿ ಪೂಜಿಸುವ ದೇವಾಲಯ ತಮಿಳನಾಡಿನಲ್ಲಿದೆ. ಇಲ್ಲಿನ ತಿರುವೂರು ಜಿಲ್ಲೆಯ ತಿಲತರ್ಪಣ ಪುರಿಯಲ್ಲಿರುವ ಶ್ರೀ ಮುಕ್ತೇಶ್ವರ ದೇವಾಲಯದ ಆವರಣದಲ್ಲಿ ನರಮುಖದ ಗಣಪನ ದೇವಾಲಯ ಇದೆ. ಈ ದೇವಾಲಯವನ್ನು ನರಮುಖ ಗಣಪತಿ ದೇವಾಲಯ ಮತ್ತು ವಿನಾಯಕ ದೇವಾಲಯ ಎಂದೂ ಕರೆಯುತ್ತಾರೆ.

ಪುರಾಣ ಏನು ಹೇಳುತ್ತದೆ?

ಪುರಾಣಗಳ ಪ್ರಕಾರ, ಪಾರ್ವತಿ ದೇವಿ ಸ್ನಾನ ಮಾಡುವಾಗ, ತನ್ನ ದೇಹದ ಮೇಲಿನ ಮಣ್ಣಿನಿಂದ ಹುಡುಗನನ್ನು ಮಾಡಿ ಅವನಿಗೆ ಜೀವ ನೀಡಿದಳು. ಈ ಹುಡುಗ ಅವಳ ದ್ವಾರಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಈ ವೇಳೆ, ಶಿವನು ಬಂದಾಗ ಆ ಹುಡುಗ ಒಳಗೆ ಬಿಡಲಿಲ್ಲ. ಇದರಿಂದ ಕೋಪಗೊಂಡ ಶಿವನು ಹುಡುಗನ ಶಿರಚ್ಛೇದ ಮಾಡಿದನು. ನಂತರ, ಆ ಹುಡುಗ ತನ್ನ ಮಗನೆಂದು ಶಿವನು ತಿಳಿದಾಗ, ಪಾರ್ವತಿಯ ದುಃಖವನ್ನು ಹೋಗಲಾಡಿಸಲು ಆಕೆಯ ಇಚ್ಛೆಯಂತೆ ಆನೆಯ ತಲೆಯನ್ನು ಆ ಹುಡುಗನಿಗೆ ಜೋಡಿಸಿ ಮತ್ತೆ ಬದುಕಿಸಿದನು. ಆದಾಗ್ಯೂ, ಶಿವನು ಅವನ ಶಿರಚ್ಛೇದ ಮಾಡುವ ಮೊದಲು, ವಿನಾಯಕನು ಮಾನವ ರೂಪದಲ್ಲಿದ್ದನು. ಆ ರೂಪದ ಪುರಾವೆಯಾಗಿ, ತಿಲತರ್ಪಣ ಪುರಿಯಲ್ಲಿರುವ ಈ ದೇವಾಲಯದಲ್ಲಿ ವಿನಾಯಕನ ಮೊದಲ ರೂಪವಾದ ಮಾನವ ಮುಖವನ್ನು ಪೂಜಿಸಲಾಗುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಪೂರ್ವಜರ ಪಾಪಗಳು ದೂರವಾಗುತ್ತವೆ ಮತ್ತು ಸಂಪತ್ತು ಮತ್ತು ಸಂತೋಷ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ. ಈ ವಿಶಿಷ್ಟ ದೇವಾಲಯಕ್ಕೆ ಭೇಟಿ ನೀಡುವುದರಿಂದ ಆಧ್ಯಾತ್ಮಿಕ ಅನುಭವವಾಗುತ್ತದೆ.

ಇನ್ನು ಪ್ರತಿ ವರ್ಷ ವಿನಾಯಕ ಚತುರ್ಥಿಯ ಸಂದರ್ಭದಲ್ಲಿ ಈ ದೇವಾಲಯವು ಭಕ್ತರಿಂದ ತುಂಬಿರುತ್ತದೆ. ಗಣಪತಿ ಹೋಮ, ಅಭಿಷೇಕದಂತಹ ವಿಶೇಷ ಪೂಜೆಗಳು ಭಕ್ತರಿಗೆ ಆಧ್ಯಾತ್ಮಿಕ ಸ್ಫೂರ್ತಿಯನ್ನು ನೀಡುತ್ತವೆ. ಈ ಸ್ಥಳಕ್ಕೆ ಭೇಟಿ ನೀಡುವುದರಿಂದ ಭಕ್ತರ ಜೀವನದಲ್ಲಿ ಬದಲಾವಣೆಗಳು ಉಂಟಾಗುತ್ತವೆ ಎಂದು ಭಕ್ತರು ನಂಬುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net