ಹಿಂದು ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಸ್ಮರಣೀಯ

MLA S.N. Chanabasappa
ಶಾಸಕ ಎಸ್.ಎನ್.ಚನ್ನಬಸಪ್ಪ
Published on

ಶಿವಮೊಗ್ಗ: ರಾಜ್ಯದಲ್ಲಿ ವಿಚಿತ್ರ ವಾತಾವರಣ ಸೃಷ್ಟಿಯಾಗಿದೆ. ಈ ಹಿಂದೆ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿತ್ತು. ಇದೀಗ ಗಣೇಶೋತ್ಸವ ವೇಳೆ ಪ್ಯಾಲೆಸ್ತೀನ್ ಬೆಂಬಲಿಸಿ ಘೋಷಣೆ ಕೂಗಲಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದರು.

ಈ ಹಿಂದೆ ವಿಧಾನಸೌಧದಲ್ಲೇ ಕೆಲವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ನಾಗಮಂಗಲ, ಮಂಗಳೂರಿನ ಬಿ.ಸಿ.ರೋಡ್‌ನಲ್ಲಿ ಗಣೇಶೋತ್ಸವ ವೇಳೆ ಗಲಾಟೆ ಆಗಿದೆ. ಇಂತಹ ದುಷ್ಕೃತ್ಯ ಎಸಗುವವರ ವಿರುದ್ಧ ಕ್ರಮ ಆಗಬೇಕು. ಮುಸ್ಲಿಂ ಸಮುದಾಯ ಇದನ್ನು ಖಂಡಿಸಬೇಕು. ಈದ್-ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ಆಗಬೇಕು. ಅದಕ್ಕೆ ಆ ಸಮಾಜದ ಜವಾಬ್ದಾರಿ ಇದ್ದು ಮುಖಂಡರು ಯೋಚನೆ ಮಾಡಬೇಕಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಿಂದು ಮಹಾಸಭಾ ಗಣಪತಿ ರಾಜಬೀದಿ ಉತ್ಸವ ವೇಳೆ ಶಿವಮೊಗ್ಗದ ಸ್ಥಿತಿ ಏನೆಂಬ ಆತಂಕ ಸಹಜವಾಗಿಯೇ ಜನರನ್ನು ಕಾಡಿತ್ತು. ಆದರೆ ಯಾವುದೇ ಆತಂಕ ಇಲ್ಲದೆ ಶಾಂತಿಯುತವಾಗಿ ಗಣೇಶೋತ್ಸವ ನೆರವೇರಿತು. ಅದರಲ್ಲೂ 80ನೇ ವರ್ಷದ ಗಣೇಶೋತ್ಸವದ ರಾಜಬೀದಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು ಸ್ಮರಣೀಯ. ಲೋಕಮಾನ್ಯ ಬಾಲಗಂಗಾಧರ ತಿಲಕ, ವೀರ ಸಾವರ್ಕರ್ ಅಪೇಕ್ಷೆಯಂತೆ ಗಣೇಶೋತ್ಸವ ನಡೆದಿದೆ. ಪಕ್ಷಭೇದ ಮರೆತು ಸಹಕಾರ ಸಿಕ್ಕಿತು ಎಂದು ಸಂತಸ ವ್ಯಕ್ತಪಡಿಸಿದರು. ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷರಾದ ಎಸ್.ಜ್ಞಾನೇಶ್ವರ, ಎನ್.ಜೆ.ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ಕುಟುಂಬ ಸಮೇತರಾಗಿ ಹಿಂದು ಸಮಾಜದವರು ಭಾಗಿಯಾಗಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಗಣಪತಿ ಬಗ್ಗೆ ಇರುವ ಭಕ್ತಿ ಸಂಕೇತವಾಗಿ ಕುಣಿದು ಕುಪ್ಪಳಿಸಿದರು. ವೈಭವಕ್ಕೆ ಮತ್ತೊಂದು ಹೆಸರು ಹಿಂದು ಮಹಾಸಭಾ ಗಣಪತಿ ರಾಜಬೀದಿ ಉತ್ಸವ. ಹಿಂದು ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರ ಶ್ರಮದಿಂದ ಇದು ಸಾಧ್ಯವಾಗಿದೆ. ದಾಸೋಹ, ಊಟೋಪಚಾರ, ತಂಪು ಪಾನೀಯ ವ್ಯವಸ್ಥೆ ಮಾಡಿದ್ದು ಸಂತಸದ ಸಂಗತಿ.- ಎಸ್.ಎನ್.ಚನ್ನಬಸಪ್ಪ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net