

ಬೆಂಗಳೂರು: ಸಂವಿಧಾನದ ನಿಗದಿತ ನಮೂನೆಯಲ್ಲಿ ಪ್ರಮಾಣ ವಚನ ಸ್ವೀಕರಿಸದ ಹಿನ್ನೆಲೆಯಲ್ಲಿ ೯ ಸಚಿವರು ಹಾಗೂ ೩೭ ಶಾಸಕರ ಪ್ರಮಾಣ ವಚನ ಸ್ವೀಕಾರವನ್ನು ಅಸಾಂವಿಧಾನಿಕವೆಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿ.ಝಡ್ ಜಮೀರ್ ಅಹ್ಮದ್ ಖಾನ್ ಮತ್ತು ಕೆ.ಎನ್. ರಾಜಣ್ಣ ಸೇರಿ ೯ ಸಚಿವರು ಹಾಗೂ ೩೭ ಶಾಸಕರ ಪ್ರಮಾಣ ವಚನ ಸ್ವೀಕಾರವನ್ನು ಅಸಾಂವಿಧಾನಿಕವೆಂದು ಘೋಷಿಸುವಂತೆ ಕೋರಿ ಬೆಳಗಾವಿ ಜಿಲ್ಲೆಯ ಗೋಕಾಲ್ ತಾಲೂಕಿನ ನಿವಾಸಿ ಭೀಮಪ್ಪ ಗುಂಡಪ್ಪ ಗಡಾದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಸಂವಿಧಾನದ ಪ್ರಕಾರ ಕೇವಲ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕಿದೆ. ಆದರೆ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ೯ ಸಚಿವರು ಮತ್ತು ೩೭ ಶಾಸಕರು ಮತದಾರರು ಅಥವಾ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಿಂದ ಅವರ ಪ್ರಮಾಣ ವಚನ ಸ್ವೀಕಾರವನ್ನು ಅಸಾಂವಿಧಾನಿಕವೆಂದು ಘೋಷಿಸಬೇಕು. ತಮ್ಮ ಕಚೇರಿ ಮತ್ತು ವಿಧಾನಸಭೆಗೆ ಹಾಜರಾದ ಪ್ರತಿ ದಿನಕ್ಕೆ ಸಂವಿಧಾನದ ಪರಿಚ್ಛೇದ ೧೯೩ರ ಅಡಿಯಲ್ಲಿ (ದಿನಕ್ಕೆ ೫೦೦ ರೂ.) ನಿಗದಿಪಡಿಸಿರುವ ದಂಡ ಪಾವತಿಸಲು ಅವರಿಗೆ ನಿರ್ದೇಶಿಸಬೇಕು. ಸಂವಿಧಾನದ ಪರಿಚ್ಛೇದ ೧೮೮ ಮತ್ತು ಶೆಡ್ಯೂಲ್-೩ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ (ದೇವರ ಹೆಸರಿನಲ್ಲಿ) ಪುನಾಃ ಪ್ರಮಾಣ ವಚನ ಸ್ವೀಕರಿಸಲು ನಿರ್ದೇಶಿಸಬೇಕು. ಈ ಸಚಿವರು ಹಾಗೂ ಶಾಸಕರು ಅಸಮರ್ಪಕವಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಂಬಂಧ ವಿಚಾರಣೆ ನಡೆಸುವಂತೆ ವಿಧಾನಸಭೆ ಸ್ಪೀಕರ್‌ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಈ ಮನವಿ ಪುರಸ್ಕರಿಸಲು ನಿರಾಕರಿಸಿದ ನ್ಯಾಯಪೀಠ, ಇದು ಪ್ರಜಾಸತ್ತಾತ್ಮಕ ವ್ಯವಸ್ಥೆ. ಸಚಿವರು ಹಾಗೂ ಶಾಸಕರು ಮತದಾರರಿಂದ ಚುನಾಯಿತರಾಗಿದ್ದಾರೆ. ನಿಗದಿತ ನಮೂನೆ ಹೊರತಾಗಿ ಇತರೆ ಮಾದರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ತಾಂತ್ರಿಕ ಅಂಶವಷ್ಟೇ. ಕೆಲವೊಮ್ಮೆ ಉತ್ಸಾಹದಲ್ಲಿ ಯಾರನ್ನಾದರೂ ಹೆಸರಿಸಬಹುದು. ಅವರು ತಮ್ಮ ಕೆಲಸ ಕಾರ್ಯಗಳನ್ನು ಮಾಡಲಿ. ನಿಮಗೆ ಅಷ್ಟೊಂದು ಅತೃಪ್ತಿಯಿದ್ದರೆ ಮುಂಬರುವ ಚುನಾವಣೆಯಲ್ಲಿ ಅವರು ನಿಮ್ಮ ಪ್ರತಿನಿಧಿಗಳಲ್ಲ ಎಂಬುದನ್ನು ತೋರಿಸಿ ಎಂದು ಸಲಹೆ ನೀಡಿದರು.
ಚುನಾಯಿತಿ ಪ್ರತಿನಿಧಿಗಳಾಗಿ ಮತದಾರರರ ನಿರೀಕ್ಷೆಯಂತೆ ಕೆಲಸ ಮಾಡದೆ ಹೋದರೆ ಆಗ ಅವರು ಆಯ್ಕೆಯಾಗದಂತೆ ನೀವು ನೋಡಿಕೊಳ್ಳಿ. ಮತಚಲಾಯಿಸುವಾಗ ನಿಮ್ಮ ಪ್ರಕಾರ ಯೋಗ್ಯವಾದ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕು ನಿಮಗಿದೆ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.