

ಬೆಂಗಳೂರು : ಕೃತಿಚೌರ್ಯ ಆರೋಪದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಪ್ರಧಾನ ಭೂಮಿಕೆಯಲ್ಲಿ ನಟಿಸಿರುವ ‘ಮೈದಾನ್’ ಚಿತ್ರ ಬಿಡುಗಡೆಯ ವಿರುದ್ಧ ಮೈಸೂರು ನ್ಯಾಯಾಲಯದ ಹೊರಡಿಸಿದ್ದ ಪ್ರತಿಬಂಧಕಾದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ಆದೇಶ ಪ್ರಶ್ನಿಸಿ ನಿರ್ಮಾಪಕ ಬೋನಿ ಕಪೂರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಶೇಷ ಪೀಠ ವಿಚಾರಣೆ ನಡೆಸಿತು.
ಪ್ರಕರಣ ಸಂಬಂಧ ಸಿ.ಆರ್. ಅನಿಲ್‌ಕುಮಾರ್ ಮತ್ತು ಇತರರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಯನ್ನು ಏ.24ಕ್ಕೆ ಮುಂದೂಡಿದೆ.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಜನ್ ಪೂವಯ್ಯ ಆಕ್ಷೇಪಾರ್ಹವಾದ ತಾತ್ಕಾಲಿಕ ಪ್ರತಿಬಂಧಕಾದೇಶದಿಂದ ಜಗತ್ತಿನಾದ್ಯಂತ ಮತ್ತು ಒಟಿಟಿ ವೇದಿಕೆಗಳಲ್ಲಿ ಮೈದಾನ್ ಸಿನಿಮಾ ಬಿಡುಗಡೆಗೆ ತೊಡಕುಂಟಾಗಿದೆ. 2019ರಲ್ಲಿ ಚಿತ್ರ ನಿರ್ಮಾಣ ಆರಂಭವಾಗಿದ್ದು, ಕೋವಿಡ್‌ನಿಂದಾಗಿ ವಿಳಂಬವಾಗಿತ್ತು ಎಂದು ಪೀಠಕ್ಕೆ ತಿಳಿಸಿದರು.
ಪ್ರಕರಣದ ಹಿನ್ನೆಲೆ:
ಭಾರತೀಯ ಫುಟ್‌ಬಾಲ್ ಕಥಾಹಂದರದ ಚಿತ್ರಕತೆ ರೂಪಿಸಿದ್ದ ಅನಿಲ್‌ಕುಮಾರ್ ಸಿನಿಮಾದ ಕತೆಯ ಸಾರಾಂಶ, ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣ ಲಿಂಕ್ಡಿನ್‌ನಲ್ಲಿ ಪ್ರಕಟಿಸಿದ್ದರು. ಇದನ್ನು ನೋಡಿ ಜಾಹೀರಾತು ನಿರ್ದೇಶಕ ಮತ್ತು ಸಿನಿಮಾ ನಿರ್ದೇಶಕ ಎಂದು ಹೇಳಿಕೊಂಡಿದ್ದ ಸುಖದಾಸ್ ಸೂರ್ಯವಂಶಿ ಎಂಬುವರು ಅನಿಲ್‌ಕುಮಾರ್ ಸಂಪರ್ಕಿಸಿ ಮುಂಬೈಗೆ ಬರುವಂತೆ ಆಹ್ವಾನಿಸಿದ್ದರು. 2019ರ ಫೆ. 20ರಂದು ಅನಿಲ್‌ಕುಮಾರ್ ಚಿತ್ರಕತೆ ಬರಹಗಾರರ ಸಂಘದಲ್ಲಿ ‘ಪಟ್ಗಂಡುಗ’ ಹೆಸರಿನಲ್ಲಿ ಕತೆಯನ್ನು ನೋಂದಾಯಿಸಿದ್ದರು.
ಆದರೆ, ಕಳೆದ ವಾರ ತಮ್ಮ ಚಿತ್ರಕತೆಯ ಕಥಾಹಂದರ ಹೊಂದಿರುವ ಚಿತ್ರವೊಂದು ಮೈದಾನ್ ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ. ಜೀ ಸ್ಟುಡಿಯೋಸ್ ಮತ್ತು ಬೋನಿ ಕಪೂರ್ ನಿರ್ಮಿಸಿರುವ ಚಿತ್ರದ ಟ್ರೇಲರ್ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿದ್ದು, ತಾನು ರೂಪಿಸಿದ ಕತೆಯನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಸಿನಿಮಾ ಬರಹಗಾರರು ಬಳಕೆ ಮಾಡಿಕೊಂಡಿದ್ದಾರೆ. ಎರಡನೇ ಭಾಗದಲ್ಲಿ ತಾನು ಭಾರತೀಯ ಫುಟ್‌ಬಾಲ್‌ಗೆ ಸಂಬಂಧಿಸಿದ ಕತೆ ಬರೆದಿದ್ದು, ಎರಡನೇ ಭಾಗದ ಕತೆ, ಸಂಭಾಷಣೆ ಮತ್ತು ಚಿತ್ರಕತೆ ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ ಎಂದು ಅನಿಲ್‌ಕುಮಾರ್ ಆರೋಪಿಸಿದ್ದಾರೆ.