

ಬೆಂಗಳೂರು: ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ವಿಚಾರದಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿರುವ ಸರ್ಕಾರದ ಕಾರ್ಯವೈಖರಿಯನ್ನು ಹೈಕೋರ್ಟ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರವೇ ಜನರ ಮೊದಲ ಶತ್ರು ಎಂಬಂತೆ ವರ್ತಿಸಿದೆ ಎಂದು ಕಿಡಿ ಕಾರಿದೆ.
ಬಿಲ್ ಪಾವತಿ ವಿಳಂಬ ಕುರಿತು ನ್ಯಾಯಾಲಯದ ಆದೇಶ ಪಾಲಿಸದ ಸರ್ಕಾರದ ವಿರುದ್ಧ ನಿಕ್ಷೇಪ್ ಇನ್ಪ್ರಾ ಪ್ರಾಜೆಕ್ಟ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಸಿಜೆ ಪಿ.ಬಿ.ವರ್ಲೆ ಮತ್ತು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಬಂದಿತು.
ಆಗ ಅರ್ಜಿದಾರರ ಪರ ವಕೀಲರು, ಕಳೆದ ವಾರ ನ.೨೯ರಂದು ಸರ್ಕಾರ ಸಮಯಾವಕಾಶ ಪಡೆದುಕೊಂಡಿತ್ತು. ಆದರೆ ಇನ್ನೂ ಹಣ ಪಾವತಿಸಿಲ್ಲ, ಅದಕ್ಕೆ ಏನೂ ಕ್ರಮ ಕೈಗೊಂಡಿಲ್ಲ ಎಂದರು. ಆದಕ್ಕೆ ಸರ್ಕಾರಿ ವಕೀಲರು, ಅರ್ಜಿದಾರರಿಗೆ ಕಂತುಗಳನ್ನು ಹಣ ಪಾವತಿಸಲಾಗುವುದು. ಪೂರ್ಣ ಗುತ್ತಿಗೆ ಬಾಕಿ ಹಣ ಪಾವತಿಗೆ ಬರುವ ೆಬ್ರವರಿವರೆಗೆ ಕಾಲಾವಕಾಶ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದರು.
ಅದಕ್ಕೆ ಸಿಟ್ಟಾದ ನ್ಯಾಯಪೀಠ, ‘‘ ಕೆಲಸ ಮಾಡಿಸಿಕೊಂಡ ಮೇಲೆ ಬಿಲ್ ಪಾವತಿಸಲು ತಕರಾರೇಕೆ? ಕೆಲಸ ಮಾಡಲು ಗುತ್ತಿಗೆದಾರರು ಹಿಂಜರಿಯುವ ಸ್ಥಿತಿ ಸೃಷ್ಟಿಸುತ್ತಿದ್ದೀರಿ, ನಿಮ್ಮ ಈ ನೀತಿಯಿಂದ ಟೆಂಡರ್‌ಮೊತ್ತ ಹಲವು ಪಟ್ಟು ಹೆಚ್ಚಾಗಬಹುದು. ಸರ್ಕಾರಕ್ಕೆ ಇಂತಹ ಸಲಹೆ ನೀಡುತ್ತಿರುವವರು ಯಾರು’ ಎಂದು ಪ್ರಶ್ನಿಸಿತು.
ಅಲ್ಲದೆ, ಸರ್ಕಾರವೇ ನಾಗರಿಕರ ಮೊದಲ ಶತ್ರು ಎಂಬ ಮಾತಿದೆ. ನಾವು ಕಾನೂನು ಪದವಿ ಓದುವಾಗ ಕೇಳಿದ ಈ ಮಾತು ಸತ್ಯವಿರುವಂತೆ ಭಾಸವಾಗುತ್ತಿದೆ. ಸಮಯ ನೀಡಲಾಗದು ಎಂದು ನ್ಯಾಯಪೀಠ ಹೇಳಿತು.
ಕಳೆದ ವಿಚಾರಣೆ ವೇಳೆ ಹೈಕೋರ್ಟ್, ‘‘ಸರ್ಕಾರವೇ ಹೇಳಿರುವಂತೆ ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಎಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು, ಪೇಮೆಂಟ್ ಪಾವತಿಯಲ್ಲೂ ಹಿರಿತನವೇ? ನೀವು ಗುತ್ತಿಗೆದಾರರನ್ನು ಮೂಲೆಗುಂಪು ಮಾಡಬೇಡಿ. ನಮಗೆ ಬಾಕಿ ಪಾವತಿಗೆ ಬಿಬಿಎಂಪಿ ಅನುಸರಿಸುತ್ತಿರುವ ವಿಧಾನವೇ ತಿಳಿಯುತ್ತಿಲ್ಲ. ಕಲ್ಯಾಣ ರಾಜ್ಯದಲ್ಲಿ ಕೆಲವು ಕಾಮಗಾರಿಗಳಿಗೆ ಸ್ಥಳೀಯ ಸಂಸ್ಥೆ ಟೆಂಡರ್ ಕರೆದು ಆ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಮೊತ್ತ ಪಾವತಿಗೆ ಷರತ್ತುಗಳನ್ನು ಒಡ್ಡುವುದು, ಅನಗತ್ಯ ವಿಳಂಬ ಮಾಡುವುದು ಎಷ್ಟರ ಮಟ್ಟಿಗೆ ಸರಿ ’ ಎಂದು ಪ್ರಶ್ನಿಸಿತ್ತು.