ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

highcourt
Published on

 ಬೆಂಗಳೂರು : ಕರ್ನಾಟಕದಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸರ್ಕಾರದ ವಿಧೇಯಕವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ವಿಚಾರವಾಗಿ ನಗರದ ಬಿಳೀಕಹಳ್ಳಿಯ ಸೋಮೇಶ್ವರ ಲೇಔಟ್‌ನ ಲೆಕ್ಕ ಪರಿಶೋಧಕಿ ಡಾ.ಆರ್.ಅರ್ಮಿತಲಕ್ಷ್ಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ.ಅಂಜಾರಿಯಾ ಹಾಗೂ ಕೆ. ವಿ.ಅರವಿಂದ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅರ್ಜಿ ಪರಿಶೀಲಿಸಿದ ನ್ಯಾಯಪೀಠ, ಹರಿಯಾಣ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು ಆಧರಿಸಿ ಅರ್ಜಿದಾರರು ಈ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಹರಿಯಾಣ ಸರ್ಕಾರವು ತನ್ನ ರಾಜ್ಯದ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸಿ ಶಾಸನನಾತ್ಮಕವಾದ ಕಾಯ್ದೆ ರೂಪಿಸಿತ್ತು. ಕರ್ನಾಟಕದಲ್ಲಿ ಅರ್ಜಿದಾರರು ಆಕ್ಷೇಪಿಸಿರುವ ವಿಧೇಯಕ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿಲ್ಲ.

ವಿಧೇಯಕ ಸದ್ಯ ಕರಡು ಸ್ವರೂಪದಲ್ಲಿದ್ದು, ಕಾನೂನಿನ ಮಾನ್ಯತೆ ಪಡೆದುಕೊಂಡಿಲ್ಲ. ಆದ್ದರಿಂದ ವಿಧೇಯಕವು ಕಾನೂನಿನ ಗುಣಲಕ್ಷಣ ಹೊಂದಿರುವುದಾಗಿ ನ್ಯಾಯಾಲಯ ಭಾವಿಸಲಾಗದು ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಅರ್ಜಿ ಸಮಂಜಸವಾಗಿರದ ಕಾರಣ ಮೆರಿಟ್ ಮೇಲೆ ವಿಚಾರಣೆ ನಡೆಸದೆ ಮತ್ತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶಿಸಿತು.

ಈ ನಡುವೆ ಸರ್ಕಾರದ ಪರ ವಕೀಲರು, ಅರ್ಜಿದಾರರು ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿದ್ದಾರೆ. ನೀತಿ ಆಯೋಗದ ಪ್ರಾದೇಶಿಕ ಮೆಂಟರ್ ಆಗಿದ್ದಾರೆ. ಇದರಿಂದ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಖಾಸಗಿ ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಿರಬಹುದು ಎಂಬ ಭಾವನೆ ವ್ಯಕ್ತವಾಗಿದೆ ಎಂದು ಆಕ್ಷೇಪಿಸಿದರು. ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, ಸರ್ಕಾರಿ ವಕೀಲರ ವಾದವನ್ನು ಲಘುವಾಗಿ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿದಾರರಿಗೆ ಐದು ಸಾವಿರ ರೂ ದಂಡ ವಿಧಿಸಿತು.

ಅರ್ಜಿದಾರರ ವಕೀಲರು, ಅರ್ಜಿದಾರರು ಯಾವುದೇ ಸಂಘ-ಸಂಸ್ಥೆಯನ್ನು ಪ್ರತಿನಿಧಿಸುತ್ತಿಲ್ಲ. ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿದ್ದಾರೆ. ಸದ್ಯ ಅವರು ಗಭೀರ್ಣಿ ಮಹಿಳೆಯಾಗಿದ್ಧಾರೆ. ಯಾವುದೇ ವೈಯಕ್ತಿಕ ಹಿತಾಸಕ್ತಿ ಹಾಗೂ ದುರುದ್ದೇಶದಿಂದ ಅರ್ಜಿ ಸಲ್ಲಿಸಿಲ್ಲ. ನೀತಿ ಆಯೋಗದ ಪ್ರಾದೇಶಿಕ ಮೆಂಟರ್ ಸಹ ಆಗಿಲ್ಲ. ದಯವಿಟ್ಟು ದಂಡವನ್ನು ಕೈಬಿಡಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನ್ಯಾಯಾಲಯದಲ್ಲಿ ಭಾವನಾತ್ಮಕ ಅಂಶಗಳಿಂದ ವಾದ ಮಂಡಿಸಬಾರದು. ನ್ಯಾಯಾಲಯವು ಕೇವಲ ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣವನ್ನು ಪರಿಗಣಿಸುತ್ತದೆ ಎಂದು ತಿಳಿಸಿ, ದಂಡ ವಿಧಿಸಿದ ಅಂಶವನ್ನು ಆದೇಶದಿಂದ ಕೈಬಿಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net