

ಬೆಂಗಳೂರು: ಸಾಹಿತ್ಯ ಕ್ಷೇತ್ರದ ಪರಂಪರೆ ಅರಿವಿಲ್ಲದಿದ್ದರೆ, ಕಾವ್ಯ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ. ಯುವ ಸಾಹಿತಿಗಳು ಸಾಹಿತ್ಯದ ಹಿನ್ನೆಲೆಯನ್ನು ಚೆನ್ನಾಗಿ ಅರಿತುಕೊಳ್ಳಬೇಕು ಎಂದು ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಹೇಳಿದ್ದಾರೆ.
ಎನ್.ಆರ್ ಕಾಲೋನಿಯ ಸಿ. ಅಶ್ವಥ ಕಲಾಭವನದಲ್ಲಿ ಹರಿವು ಬುಕ್ಸ್ ಹಾಗೂ ತೇಜು ಪಬ್ಲಿಕೇಶನ್ಸ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಗಳಾ ಎಂ ನಾಡಿಗ್ ಅವರು ಬರೆದ ‘ಪ್ರೀತಿಯ ಚಿಟ್ಟೆಯ ಬೆನ್ನೇರಿ’ ಹಾಗೂ ‘ಸುತ್ತ ಮುತ್ತ’ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಭಟನೆ, ಸೀವಾದಿ ನಿಲುವುಗಳಿಂದ ಬರೆದರೆ ಮಾತ್ರ ಕವಿತೆಯಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಅನೇಕ ಯುವ ಸಾಹಿತಿಗಳು ಗದ್ಯವನ್ನೇ ಪದ್ಯವನ್ನಾಗಿ ಬರೆಯುತ್ತಿದ್ದಾರೆ. ಕವಿಗಳಾದವರು ಜಗತ್ತನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ದಿನ ಬೆಳಗಾದರೆ, ಜಗತ್ತು ಸರಿಯಿಲ್ಲ ಎಂಬ ಸುದ್ದಿಗಳನ್ನು ನೋಡುತ್ತೇವೆ. ಆದರೆ, ಒಬ್ಬ ಕವಿ ಹಾಗಲ್ಲ. ಅದರಲ್ಲಿರುವ ಒಳ್ಳೆಯ ತನಗಳನ್ನು ಹುಡುಕಿ, ಅವುಗಳ ಬಗ್ಗೆ ವಿಚಾರ, ವಿಮರ್ಶೆ ಮಾಡುತ್ತಾನೆ. ಕವಿಯಾಗಲು ಪ್ರತಿಭೆ ಇದ್ದರೆ ಸಾಲದು. ಸಾಹಿತ್ಯದ ಹಿನ್ನೆಲೆ ಅರಿವಿನೊಂದಿಗೆ ಹೊಸ ಸಂವೇದನೆ, ವಿಚಾರ ಶಕ್ತಿಗಳಿರಬೇಕು ಎಂದರು.
ನಮ್ಮಲ್ಲಿ ಒಳ್ಳೆಯ ವಿಚಾರಗಳು ಮೂಡಿದಾಗ ಉತ್ತಮ ಕವಿತೆಗಳು ಹೊರಹೊಮ್ಮುತ್ತವೆ. ಯುವ ಸಾಹಿತಿಗಳು ವಿಚಾರ ವಿಮರ್ಶೆ, ಹೆಚ್ಚಿನ ಓದಿನಲ್ಲಿ ತೊಡಗಿಸಿಕೊಳ್ಳಬೇಕು. ಆಗ ಕಾವ್ಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಬಹುದು. ಕವಿ ಎಂದರೆ ಭಯೋತ್ಪಾದಕನಂತೆ ನೋಡುವ ಈ ಸಮಾಜದಲ್ಲಿ ಕವಿತೆಗಳನ್ನು ಪ್ರಕಟಿಸಲು ಪ್ರಕಾಶಕರು ಸಿಗುವುದು ತುಂಬಾ ಕಷ್ಟವಿದೆ. ಒಂದು ಹೆಜ್ಜೆಯಿಟ್ಟರೆ ನಡಿಗೆ ಎನ್ನಲು ಸಾಧ್ಯವಿಲ್ಲ. ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಪುಸ್ತಕ ಬರೆದ ಮಾತ್ರಕ್ಕೆ ಸಾಹಿತಿಗಳಾಗಲು ಸಾಧ್ಯವಿಲ್ಲ. ಮಂಗಳಾ ನಾಡಿಗ್ ಅವರಲ್ಲಿ ಒಳ್ಳೆಯ ಪ್ರತಿಭೆ, ಕಾವ್ಯ ಶಕ್ತಿ, ವಿಚಾರ ಶಕ್ತಿ ಹಾಗೂ ಸಾಹಿತಿಕ ಶಕ್ತಿ ಚೆನ್ನಾಗಿದೆ. ಅವರು ಕಾವ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಂತಾಮಣಿ ಕೊಡ್ಲೆಕೆರೆ, ರಂಗಕರ್ಮಿ ನಾ.ದಾಮೋದರ ಶೆಟ್ಟಿ, ರತೀಶ್ ಬಿ.ಆರ್ ಹಾಗೂ ಮಂಗಳಾ ಎಂ. ನಾಡಿಗ್ ಉಪಸ್ಥಿತರಿದ್ದರು.