

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರನ್ನು ಕಾಡುತ್ತಿದ್ದ ಬಿಸಿ ಗಾಳಿ (ಹೀಟ್ ವೇವ್) ಪ್ರಖರತೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ಝಳ ಇದ್ದರೂ, ಹೀಟ್ ವೇವ್ ಹಿಂದೆ ಸರಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ನೆಲೆಗೆ ಬಂದಿದ್ದು, ಕೆಲವೆಡೆ ವ್ಯಾಪಕ ವರ್ಷಧಾರೆ ಆಗಿದೆ.
ಗುರುವಾರ ಕಲಬುರಗಿ ಜಿಲ್ಲೆಯಲ್ಲಿ ಮಾತ್ರ 41.2 ಡಿಗ್ರಿ. ಸೆ. ಉಷ್ಣಾಂಶ ದಾಕಲಾಗಿತ್ತು. ಕೊಪ್ಪಳ 40.5, ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ 40 ಉಷ್ಣಾಂಶ ಇತ್ತು. ಉತ್ತರದ ಉಳಿದ ಜಿಲ್ಲೆಗಳಲ್ಲಿ 35ರಿಂದ 39 ಡಿ. ಸೆ. ಒಳಗೆ ಇದೆ. ಕಳೆದ 2-3 ದಿನಗಳಿಂದ ಮಳೆ ಕಾಣುತ್ತಿರುವ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ 35 ಡಿ. ಸೆ. ಆಸುಪಾಸಿನಲ್ಲಿದೆ. ರಾಜಧಾನಿ ಬೆಂಗಳೂರು ನಗರದಲ್ಲೂ ಉಷ್ಣಾಂಶ 34 ಡಿ. ಸೆ.ಗೆ ಇಳಿದಿರುವುದು ನಾಗರಿಕರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.
20 ಜಿಲ್ಲೆಗಳಲ್ಲಿ ಸುರಿದ ಮಳೆ:
ರಾಜ್ಯದ ಕರಾವಳಿ ಸೇರಿ ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳ ಒಟ್ಟು 20 ಜಿಲ್ಲೆಗಳಲ್ಲಿ ಮಳೆಯಾಗಿದೆ. ಹಳೇ ಮೈಸೂರು ಭಾಗದ ಎಲ್ಲ ಜಿಲ್ಲೆಗಳಲ್ಲೂ ವರ್ಷಧಾರೆಯಾಗಿದ್ದು, ಕೊಡಗಿನ ವಿವಿಧ ತಾಲೂಕುಗಳಲ್ಲಿ ವ್ಯಾಪಕ ಮಳೆಯಾಗಿದೆ. ಮಧ್ಯಾಹ್ನದ ವರೆಗೆ ಸಾಕಷ್ಟು ಬಿಸಿಲು ಕಂಡಿದ್ದ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ಕೆಲವೆಡೆ ಮಾತ್ರ ಮಳೆಯಾಗಿದೆ. ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಹಲವೆಡೆ ಸಾಧಾರಣ ಪ್ರಮಾಣದ ವರ್ಷಧಾರೆಯಾಗಿದೆ.
ಮಳೆ ಮುನ್ಸೂಚನೆ:
ಶುಕ್ರವಾರದಿಂದ ಮೂರು ದಿನ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಕೆಲವೆಡೆ ಬಿರುಗಾಳಿಯೊಂದಿಗೆ ಭಾರೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ತುಮಕೂರು, ಚಿಕ್ಕಮಗಳೂರು, ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕೆಲ ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ ಸಾಧಾರಣ ಪ್ರಮಾಣದ ಗುಡುಗು ಸಹಿತ ವರ್ಷಧಾರೆಯಾಗಲಿದೆ. ಈ ಜಿಲ್ಲೆಗಳಲ್ಲಿ ಗಾಳಿಯ ಪ್ರತೀ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸಲಿದೆ ಎಂದು ಎಂದು ಹವಾಮಾನ ಇಲಾಖೆ ತಿಳಿಸಿದೆ.