ಕಣ್ಮನ ಸೆಳೆಯುವ ಗಿರಿಧಾಮಗಳ ಭವ್ಯತೆ; ರಾಜ್ಯದ ಸುಂದರ ತಾಣಗಳಿವು

ವಿಜಯವಾಣಿ (4)
Published on

‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ...’

ಕವಿ ಪಂಜೆ ಮಂಗೇಶರಾಯರ ಈ ಕವನ ಮಾನವ- ಪ್ರಕೃತಿಯ ನಂಟನ್ನು ಮತ್ತು ಕರುನಾಡಿನ ಪ್ರಾಕೃತಿಕ ಸೌಂದರ್ಯದ ಸಿರಿಸಂಪತ್ತನ್ನು ಕಣ್ಮುಂದೆ ತರುತ್ತದೆ. ಹೌದು, ರಾಜ್ಯದ ಗಿರಿಧಾಮಗಳು ಪ್ರವಾಸೋದ್ಯಮ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಚಾರಣಪ್ರಿಯರ ಸ್ಪೂರ್ತಿಸ್ಥಾನಗಳಾಗಿವೆ. ಹೊರರಾಜ್ಯ, ಹೊರರಾಷ್ಟ್ರಗಳಿಂದಲೂ ಇಲ್ಲಿ ಪ್ರವಾಸಿಗರು ಬಂದು ಹೊರಡಿಸುವ ಉದ್ಗಾರ ಒಂದೇ, ‘ಅತ್ಯದ್ಭುತ...’ ಎಂದು. ಅಂಥ ನೈಸರ್ಗಿಕ ಸಿರಿ ಜನರನ್ನು ಒತ್ತಡದ ಬದುಕಿನಿಂದ ಒಂದಿಷ್ಟು ನಿರಾಳತೆ ಮೂಡಿಸುವ ಜತೆಗೆ, ಪ್ರವಾಸಕ್ಕೆ ಆನಂದದ ಹೊಸ ಆಯಾಮವನ್ನೂ ಕಲ್ಪಿಸುತ್ತದೆ.

ಮುಳ್ಳಯ್ಯನಗಿರಿ

ಚಿಕ್ಕಮಗಳೂರು ಜಿಲ್ಲೆಯ ಮತ್ತೊಂದು ಪ್ರಸಿದ್ಧ ಗಿರಿಧಾಮ ಮುಳಯ್ಯನಗಿರಿ. ಬಾಬಾ ಬುಡನ್​ಗಿರಿ ಬೆಟ್ಟಸಾಲಿನಲ್ಲಿರುವ ಈ ಶಿಖರ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ, ಇದು, ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಿನ ಪ್ರದೇಶದಲ್ಲಿನ ಅತಿ ಎತ್ತರದ ಪ್ರದೇಶವೂ ಹೌದು. ಬೆಟ್ಟದ ಮೇಲ್ಭಾಗದಲ್ಲಿ ಮುಳಯ್ಯ ಸ್ವಾಮಿಗಳ ದೇವಾಲಯವಿದೆ. ಹಾಗಾಗಿ, ಬೆಟ್ಟಗುಡ್ಡಗಳ ಪಾಲಿನ ದೊಡ್ಡಣ್ಣ ಎಂದೇ ಖ್ಯಾತಿಯಾಗಿದೆ.

ಕೆಮ್ಮಣ್ಣಗುಂಡಿ

ಮಲೆನಾಡಿನ ಪ್ರಸಿದ್ಧ ಗಿರಿಧಾಮ ಗಳಲ್ಲಿ ಒಂದಾದ ಕೆಮ್ಮಣ್ಣಗುಂಡಿ ಚಿಕ್ಕಮಗಳೂರಿಗೆ ಸೇರಿದ ಚಂದ್ರದೋಣ ಪರ್ವತ ಪ್ರದೇಶದಿಂದ ಸುತ್ತುವರಿಯಲ್ಪಟ್ಟಿದೆ. ಮೈಸೂರು ಮಹಾರಾಜರು ಆಗಾಗ ಈ ಗಿರಿಧಾಮಕ್ಕೆ ವಿಶ್ರಾಂತಿಗಾಗಿ ಬರುತ್ತಿದ್ದರು. ಇದರಿಂದಾಗಿ ಈ ಪ್ರದೇಶಕ್ಕೆ ‘ಕೃಷ್ಣರಾಜೇಂದ್ರ ಗಿರಿಧಾಮ’ ಎಂಬ ಹೆಸರೂ ಇದೆ. ಪರ್ವತದ ತಪ್ಪಲಲ್ಲಿ ಗಗನಚುಂಬಿ ವೃಕ್ಷಸಮೂಹ, ಎತ್ತರಕ್ಕೆ ಸಾಗಿದಂತೆಲ್ಲ ಕಾಣಸಿಗುವ ಶೋಲಾಕಾಡು, ಮಧ್ಯೆ ಮಧ್ಯೆ ನೀರತೊರೆ ಝುರಿಗಳ ಹರಿಯುವ ಶಬ್ದ- ಈ ದೃಶ್ಯಗಳು ಕೆಮ್ಮಣ್ಣಗುಂಡಿಯ ಅಗಾಧ ಸೌಂದರ್ಯಕ್ಕೆ ಸಾಕ್ಷಿ. ಆಕರ್ಷಕವಾದ ಹೆಬ್ಬೆ ಜಲಪಾತವಿರುವುದು ಕೆಮ್ಮಣ್ಣಗುಂಡಿಯ ಸನಿಹವೇ. ಚಾರಣಕ್ಕೆ ಪ್ರವಾಸಿಗರ ದಂಡೇ ಇಲ್ಲಿ ಆಗಮಿಸುತ್ತದೆ.

ಚಾರ್ಮಾಡಿ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಗಂಡಿ ತಾಲೂಕಿನಲ್ಲಿರುವ ಪುಟ್ಟ ಗ್ರಾಮ ಚಾರ್ವಡಿ ನಿಸರ್ಗಪ್ರೇಮಿಗಳ ಮೆಚ್ಚಿನ ತಾಣ. ಸ್ನೇಹಿತರು ಕುಳಿತು ಚಾರಣ ಅಥವಾ ಪ್ರವಾಸ ಸ್ಥಳಗಳ ಪಟ್ಟಿ ಮಾಡುವಾಗ ಮೊದಲ ಆದ್ಯತೆ ನೀಡುವುದು ಚಾರ್ವಡಿಗೆ. ಈ ಗಿರಿಧಾಮವು ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವಿನ ಸಂಪರ್ಕಕೊಂಡಿಯಂತಿದೆ. ಮಳೆಗಾಲದಲ್ಲಿ ಜಲಪಾತಗಳ ವೈಭವ ನೋಡುವುದೇ ಕಣ್ಣಿಗೆ ಹಬ್ಬ. ಈ ಹಾದಿಯಲ್ಲಿ ಚಾರಣ ಮಾಡುವುದು ಸವಾಲಿನಿಂದ ಕೂಡಿದ್ದರೂ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಚಾರ್ವಡಿಯ ನಿಸರ್ಗರಮ್ಯತೆ ಎದುರು ಮನುಷ್ಯ ಒಂದಿಷ್ಟು ಕ್ಷಣವಾದರೂ ಮೂಕವಿಸ್ಮಿತನಾಗದೆ ಇರಲಾರ.

ಕುದುರೆಮುಖ ರಾಷ್ಟ್ರೀಯ ಉದ್ಯಾನ

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಪರ್ವತ ಹಾಗೂ ಅರಣ್ಯ ಪ್ರದೇಶದ ಸೊಬಗು ಅನನ್ಯ. ಈ ಪರ್ವತ ಶ್ರೇಣಿ ಕುದುರೆಮುಖದ ಹಾಗೆ ಕಾಣಿಸುವುದರಿಂದ ಪ್ರದೇಶಕ್ಕೆ ಅದೇ ಹೆಸರು. 600 ಚದರ ಕಿ.ಮೀ.ನಷ್ಟು ವಿಸ್ತಾರವಾದ ರಾಷ್ಟ್ರೀಯ ಉದ್ಯಾನ ವಿಶ್ವಪ್ರಸಿದ್ಧ ರಕ್ಷಿತಾರಣ್ಯವಾಗಿದೆ. ರಾಷ್ಟ್ರೀಯ ಉದ್ಯಾನದಲ್ಲಿ ಚಾರಣಕ್ಕೆ 13 ಸ್ಥಾನಗಳನ್ನು ಗುರುತಿಸಲಾಗಿದೆ. ತುಂಗಾ, ಭದ್ರಾ, ನೇತ್ರಾವತಿ ಸೇರಿದಂತೆ ಹಲವು ನದಿ, ತೊರೆ, ಝುರಿಗಳ ಉಗಮ ಸ್ಥಾನ. ವನ್ಯಮೃಗಗಳ ನೈಸರ್ಗಿಕ ಸದನ. ಕುದುರೆಮುಖದಿಂದ ಅರಬ್ಬಿ ಸಮುದ್ರ ಕಾಣಿಸುತ್ತದೆ. ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕ, ಹಳ್ಳಕೊಳ್ಳದಿಂದ ಕೂಡಿರುವ ಈ ಪ್ರದೇಶ ಸಮೃದ್ಧವಾದ ಪಕ್ಷಿಸಂಕುಲವನ್ನೂ ಹೊಂದಿದೆ. ನಿತ್ಯ ಹರಿದ್ವರ್ಣ ಕಾಡಿಗೆ ಇದು ಹೆಸರುವಾಸಿಯಾಗಿದೆ. ವರಹಾ ಪರ್ವತ ಸಾಲುಗಳು ಅಭಯಾರಣ್ಯಕ್ಕೆ ಅಂಟಿಕೊಂಡಂತೆ ಇವೆ. ಇಲ್ಲಿನ ಹನುಮಾನ ಗುಂಡಿ ಜಲಪಾತಕ್ಕೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ಮಡಿಕೇರಿ

ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿಯಾಗಿರುವ ಮಡಿಕೇರಿ ವಿಶ್ವಪ್ರಸಿದ್ಧ ಗಿರಿಧಾಮ. ಮಡಿಕೇರಿ ಪಟ್ಟಣದ ರಾಜಾಸ್ ಸೀಟ್, ಭಾಗಮಂಡಲದ ಭಾಗಮಂಡಲೇಶ್ವರ ಶಿವ ದೇವಾಲಯ, ಬ್ರಹ್ಮಗಿರಿ, ಪುಷ್ಪಗಿರಿಗಳ ಆವರಣ ದಲ್ಲಿರುವ ಜಲಪಾತಗಳು ಕಣ್ಮನ ಸೆಳೆಯುತ್ತವೆ.

ಯಾಣ...

ಯಾಣದ ಸೌಂದರ್ಯಕ್ಕೆ ಚಿತ್ರರಂಗದವರೂ ಮನಸೋತಿದ್ದಾರೆ. ಕನ್ನಡದ ಹಲವು ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. 90ರಿಂದ 120 ಅಡಿಗಳಷ್ಟು ಎತ್ತರದ ಬೃಹತ್ ಏಕಶಿಲಾ ಶಿಖರ ಇಲ್ಲಿನ ವಿಶೇಷ. ಭೈರವೇಶ್ವರ ಶಿಖರಗಳು, ಮೋಹಿನಿ ಶಿಖರಗಳು ಎತ್ತರದ ಶಿಖರಗಳು. ಉತ್ತರ ಕನ್ನಡ ಜಿಲ್ಲೆಯ ಯಾಣದಲ್ಲಿ ಒಟ್ಟು 61ಕ್ಕೂ ಹೆಚ್ಚು ಶಿಲಾಶಿಖರಗಳಿವೆ (ಕುಮಟಾದಿಂದ 24 ಕಿ.ಮೀ). ಉತ್ತರ ಕನ್ನಡ ಜಿಲ್ಲೆಯಲ್ಲಿನ ಕರಿಕಾನುಗುಡ್ಡ, ಜೇನುಕಲ್ಲು ಗುಡ್ಡ ಹಾಗೂ ಕೈಲಾಸಗುಡ್ಡದ ಗಿರಿಧಾಮಗಳು ಕೂಡ ಪ್ರಸಿದ್ಧವಾಗಿವೆ.

ನಂದಿಬೆಟ್ಟ

ಬೆಂಗಳೂರಿಗರಿಗೆ ಮಲೆನಾಡಿನ ಕಿರುಪರಿಚಯ ಮಾಡಿಸುವ ರಮ್ಯ ಗಿರಿಧಾಮ ನಂದಿಬೆಟ್ಟ. ಅರ್ಕಾವತಿ ನದಿಯ ಉಗಮಸ್ಥಾನವಾಗಿರುವ ನಂದಿಬೆಟ್ಟ ಇರುವುದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ. ಚೋಳರ ಕಾಲದಲ್ಲಿ ಈ ಪ್ರದೇಶವನ್ನು ಆನಂದಗಿರಿ ಎಂದು ಕರೆಯಲಾಗುತ್ತಿತ್ತು. ಇಲ್ಲಿ 1300 ವರ್ಷಗಳಷ್ಟು ಹಳೆಯದಾದ ನಂದೀ ದೇವಸ್ಥಾನವಿದ್ದು, ಯೋಗಾನಂದೀಶ್ವರರೆಂಬ ಮಹನೀಯರು ತಪಸ್ಸನ್ನಾಚರಿಸಿದ್ದರು. 9ನೇ ಶತಮಾನದ ಭೋಗಾನಂದೀಶ್ವರ ದೇವಸ್ಥಾನವೂ ಇಲ್ಲಿ ಪ್ರಸಿದ್ಧ. ಸೂರ್ಯೋದಯ ವೀಕ್ಷಣೆಗೆ ಈ ಗಿರಿಧಾಮ ನೆಚ್ಚಿನ ತಾಣವಾಗಿದ್ದು, ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net