

ಕೋಲಾರ/ವೇಮಗಲ್: ಸರ್ಕಾರದ ಗುರಿ ಇರೊದು ರಾಜ್ಯದ ಅಭಿವೃದ್ಧಿ ಕಡೆ. ಅದ್ದರಿಂದಲೇ ಸುಸಜ್ಜಿತ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಹೆಗ್ಗಳಿಕೆಗೆ ಕಾಂಗ್ರೆಸ್ ಪಾತ್ರವಾಗಿದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಸುಮಾರು 18 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಉತ್ತಮ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಇದನ್ನು ಸಹಿಸಿಕೊಳ್ಳಲಾದ ವಿರೋಧ ಪಕ್ಷದವರು ವಿ@ನಾಕಾರಣ ಹೇಳಿಕೆ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸರ್ಕಾರವು ಅಭಿವೃದ್ಧಿ ಪರವಾಗಿದೆ ಎಂಬುದಕ್ಕೆ ಈಗಾಗಲೇ ಗ್ಯಾರಂಟಿ ಯೋಜನೆಗಳೇ ಸಾ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಳ್ಳಿಯಿಂದ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿರುವ ಏಕೈಕ ಪಕ್ಷ ಕಾಂಗ್ರೆಸ್. ಗ್ರಾಮೀಣದಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ನಾನು ವ್ಯರ್ಥವಾಗೊ ಮಾತನಾಡುವ ವ್ಯಕ್ತಿ ಅಲ್ಲ. ಕೊಟ್ಟ ಮಾತಿನಂತೆ ಕೆಲಸ ಮಾಡಿ ತೋರಿಸುತ್ತೇನೆ. ಆಡಿದ ಮಾತು ಎಂದಿಗೂ ತಪ್ಪಲ್ಲ, ಪಂಚಾಯಿತಿ ವ್ಯಾಪ್ತಿಯಲ್ಲಿ ಚಾಲನೆ ನೀಡಿರುವ 18 ಕೋಟಿ ರೂ. ವೆಚ್ಚದ ಕಾಮಗಾರಿಗಳು ಸಂಪೂರ್ಣ ನಮ್ಮ ಅವಧಿಯಲ್ಲೇ ಮುಗಿದು ಸಾರ್ವಜನಿಕರ ಉಪಯೋಗಕ್ಕೆ ದೊರಯಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಕುಮಾರ್, ತಾಲೂಕು ಅಧ್ಯಕ್ಷ ಮುನಿಯಪ್ಪ, ಪಪಂ ಮುಖ್ಯಾಧಿಕಾರಿ ಎಸ್.ಎಂ.ವೆಂಕಟೇಶ್, ವೇಮಗಲ್ ಡೇರಿ ಅಧ್ಯಕ್ಷ ವಿ.ಎಂ.ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷರಾದ ಶಶಿಕಲಾ ನಾಗೇಶ್, ಕೆ.ಆರ್.ಕುಮಾರ್, ಮುಖಂಡರಾದ ಮಂಜುನಾಥ್, ವಿನಯ್ ವೆಂಕಟೇಶ್, ಕಡಗಟ್ಟೂರು ದೇವರಾಜ್, ಬೈರಂಡಹಳ್ಳಿ ನಾಗೇಶ್ ಇದ್ದರು.
* ಕಸವಿಲೇವಾರಿ ಘಟಕಕ್ಕೆ ಜಾಗ ಗುರುತು
ವೇಮಗಲ್&ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಎಕರೆ ಜಾಗದಲ್ಲಿ ಕಸ ವಿಲೇವಾರಿ ಘಟಕ ಹಾಗೂ ಎಸ್ಟಿಪಿ ಪ್ಲಾಂಟ್ಅನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಆ ಮೂಲಕ ಪಂಚಾಯಿತಿಯ ಅಭಿವೃದ್ಧಿಗೆ ಒತ್ತು ನೀಡಿದ್ದು, ಯೋಜನಾ ಪ್ರಾಧಿಕಾರಕ್ಕೆ ಉತ್ತಮ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ರಸ್ತೆಗಳು, ಚರಂಡಿಗಳ ಅಭಿವೃದ್ಧಿಗೆ ಟೆಂಡರ್ ಕರೆದು ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಕೊತ್ತೂರು ಮಂಜುನಾಥ್ ಹೇಳಿದರು. ಮುಳಬಾಗಿಲು, ಕೋಲಾರ, ಮಾಲೂರು, ಶ್ರೀನಿವಾಸಪುರದಲಿ ನಗರಸಭೆ ವ್ಯಾಪ್ತಿಯಲ್ಲೂ ಇಲ್ಲದ ಸೌಲಭ್ಯಗಳು ಪಟ್ಟಣ ಪಂಚಾಯಿತಿಯಲ್ಲಿವೆ. ಸಕ್ಕಿಂಗ್ ಮಿಷನ್ ಕಾರ್ಯರೂಪಕ್ಕೆ ತಂದಿದ್ದೆವೆ ಇದು ನಮ್ಮ ಅಭಿವೃದ್ಧಿ ಕೆಲಸಗಳು ಎಂದರು.
* ಹಸಿದವರಿಗೆ ಅನ್ನ
ಹಸಿದವರು ಅನ್ನಕ್ಕಾಗಿ ಇನ್ನೊಬ್ಬರ ಬಳಿಗೆ ಹೋಗಬಾರದು ಎಂದು ಅನ್ನಭಾಗ್ಯ ಯೋಜನೆ ತಂದಿದ್ದಾರೆ. ಬಡವರಿಗೆ ಆರ್ಥಿಕ ಶಕ್ತಿ ತುಂಬಲು ಪಂಚ ಗ್ಯಾರಂಟಿ ಯೋಜನೆ ತಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು. ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಮಾದರಿಯಾಗಿ ಪರಿಗಣಿಸಿ ಇತರೆ ರಾಜ್ಯಗಳಲ್ಲಿಯೂ ಜಾರಿ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಹೆಮ್ಮೆ ಎಂದು ತಿಳಿಸಿದರು.
* ಕಾಂಗ್ರೆಸ್ನಿಂದ ಸಮಾನ ಅವಕಾಶ
ವಿಧಾನ ಪರಿಷತ್ ಮಾಜಿ ಉಪಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಎಲ್ಲ ವರ್ಗ, ಧರ್ಮದವರಿಗೆ ಸಮಾನ ಅವಕಾಶ, ಪ್ರತಿಯೊಬ್ಬ ಕಾರ್ಯಕರ್ತನಿಗೆ ಸ್ಥಾನಮಾನ ಕಲ್ಪಿಸುವುದು ಕಾಂಗ್ರೆಸ್. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ತ್ಯಾಗ ಬಲಿದಾನ ಮಾಡಿದೆ. ಶಕ್ತಿಶಾಲಿ ದೇಶವನ್ನಾಗಿಸಿ ಅಭಿವೃದ್ಧಿಪಡಿಸಿದೆ. ಪ್ರತಿ ವಾರ್ಡ್ನಲ್ಲಿಯೂ ಕಾಂಗ್ರೆಸ್ಗೆ ಬೆಂಬಲ ವ್ಯಕ್ತವಾಗಿದ್ದು, ಈ ಪಟ್ಟಣ ಪಂಚಾಯಿತಿ ಕೈಗೆ ಧಕ್ಕುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
* ಪೌರಕಾರ್ಮಿಕರಿಂದಲೇ ಪೂಜೆ
ಪಟ್ಟಣ ಪಂಚಾಯಿತಿ ನಿಧಿಯಿಂದ ಖರೀದಿ ಮಾಡಲಾಗಿರುವ ಎರಡು ಆಟೋ ಮತ್ತು ಪಿಟ್ ತೆಗೆಯುವ ಮಷಿನ್ಗೆ ಶಾಸಕ ಕೊತ್ತೂರು ಮಂಜುನಾಥ್ ಅವರು ಪೌರ ಕಾರ್ಮಿಕರ ಕೈಯಲ್ಲಿ ಪೂಜೆ ಮಾಡಿಸಿದರು.