

ಶಿವಮೊಗ್ಗ: ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಪರಭಾಷೆಗಳ ವ್ಯಾಮೋಹದಿಂದ ಮೂಲೆಗುಂಪಾಗುವ ಆತಂಕ ಎದುರಾಗಿದೆ ಎಂದು 20ನೇ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಬಿ.ಬಿಂದು ಕಳವಳ ವ್ಯಕ್ತಪಡಿಸಿದರು.
ಅನುಪಿನಕಟ್ಟೆಯ ರಾಮಕೃಷ್ಣ ಗುರುಕುಲ ಆಶ್ರಮದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಮಕೃಷ್ಣ ವಿದ್ಯಾಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ 20ನೇ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಮಾತೃ ಭಾಷೆ, ಸಂಸ್ಕೃತಿಯನ್ನು ಮೊದಲು ಗೌರವಿಸಬೇಕು, ಪ್ರೀತಿಸಬೇಕು. ವೈಜ್ಞಾನಿಕ ದೃಷ್ಟಿಕೋನವೂ ಬೇಕು. ಭಾಷೆ ಮತ್ತು ಸಂಸ್ಕೃತಿಗೆ ಒಗ್ಗಿಸಿಕೊಳ್ಳುವ ಕೆಲಸ ತುರ್ತಾಗಿ ಆಗಬೇಕಿದೆ. ಮೌಲ್ಯಗಳನ್ನು ಮೆಟ್ಟಿ ನಿಂತು ಸ್ವಸ್ಥ ಸಮಾಜಕ್ಕೆ ನಾಂದಿ ಹಾಡಬೇಕಿದೆ. ಕನ್ನಡ ಉಳಿವಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಂತೆ ಮಕ್ಕಳ ಸಮ್ಮೇಳನಗಳೂ ಆಗಬೇಕಿದೆ. ಅದಕ್ಕೆ ಸರ್ಕಾರಗಳು ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಸರ್ವೋದಯ, ಸಮನ್ವಯದಂತಹ ವಿಶ್ವಮಾನವ ತತ್ವಗಳು ಬಾಲ್ಯದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕಿದೆ. ಯಾವುದೇ ಸೀಮಿತತೆಯ ಚಿಂತನೆಗಳು ಬಾಲ್ಯದ ಮನಸ್ಸುಗಳನ್ನು ಕಾಡಬಾರದು. ಕುವೆಂಪು ಅವರ ಮನುಜಮತ, ವಿಶ್ವಪಥ ತತ್ವಗಳು ಅಂತಹ ಸೀಮಿತ ದೃಷ್ಟಿಕೋನಗಳಿಂದ ಹೊರಬರಲು ಪ್ರೇರೇಪಿಸುತ್ತವೆ. ಸಾಹಿತ್ಯ, ಸಂಸ್ಕೃತಿ, ಜನಪದ ತನ್ನದೇ ಆಶಯ ಹೊಂದಿದ್ದು, ಅವು ನಮಗೆ ಸಿಕ್ಕ ಬಹುದೊಡ್ಡ ಆದರ್ಶ. ಅಂತಹ ಆದರ್ಶಗಳನ್ನು ಸಾಕಾರಗೊಳಿಸಲು ನಮ್ಮ ಮನೆ, ಊರು, ಶಾಲೆಯ ವಾತಾವರಣ ಸದಾ ಕ್ರಿಯಾಶೀಲವಾಗಿರಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಆಶಯ ಭಾಷಣ ಮಾಡಿದರು. ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಆರ್.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶೋಭಾ ವೆಂಕಟರಮಣ, ಮುಖ್ಯ ಅಧ್ಯಾಪಕ ಎ.ವೆಂಕಟೇಶ್, ಅನನ್ಯ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಅನನ್ಯ ಗಿರೀಶ್, ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ ಉಪಸ್ಥಿತರಿದ್ದರು.
ಸಮ್ಮೇಳನಗಳಿಂದ ಭಾಷಾಭಿಮಾನ ವೃದ್ಧಿ
ಭಾಷಾಭಿಮಾನ ಬೆಳೆಸಲು ಹಾಗೂ ಮಕ್ಕಳ ಸಾಹಿತ್ಯಾತ್ಮಕ ಚಿಂತನೆಗಳನ್ನು ಪ್ರಸ್ತುತಪಡಿಸಲು ಸಾಹಿತ್ಯ ಸಮ್ಮೇಳನದ ವೇದಿಕೆಗಳು ಪೂರಕವಾಗಿವೆ ಎಂದು ಶಿವಮೊಗ್ಗ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ನೇಹಾ ಹೊಸಮನಿ ಹೇಳಿದರು. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾವು ಕನ್ನಡ ಭಾಷೆಯನ್ನು ಪ್ರೀತಿಸುವ, ಸ್ಪಷ್ಟವಾಗಿ ಓದುವ, ಬರೆಯುವ, ನಿರರ್ಗಳವಾಗಿ ಮಾತನಾಡುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕಿದೆ. ಮೊಬೈಲ್‌ಗೆ ಸೀಮಿತರಾಗದೆ, ವಿದ್ಯಾರ್ಜನೆಯ ಜತೆಗೆ ಸಣ್ಣ ಕಥೆಗಳನ್ನು ಓದುವ, ಕವನ, ಚುಟುಕುಗಳನ್ನು ರಚಿಸುವ ಕ್ರಿಯಾಶೀಲತೆಯಲ್ಲಿ ನಿರತರಾಗುವ ಮೂಲಕ ವಿದ್ಯಾರ್ಥಿ ಜೀವನವನ್ನು ಸಾರ್ಥಕ್ಯ ಮಾಡಿಕೊಳ್ಳಬೇಕು ಎಂದು ಹೇಳಿದರು.