ಒಳಮೀಸಲಾತಿ ಕಡೆಗೂ ಸರ್ಕಾರ ಗಮನಹರಿಸಲಿ

bhaskar
ಭಾಸ್ಕರ್
Published on

ಶಿವಮೊಗ್ಗ: ಒಳಮೀಸಲಾತಿ ಜಾರಿ ಮಾಡದೆ ಯಾವುದೇ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬಾರದು. ಬಡ್ತಿಗಳನ್ನು ನೀಡಬಾರದು ಎಂದು ಆದಿಜಾಂಬವ ಸಂಘದ ಮುಖಂಡ ಬಿ.ಆರ್.ಭಾಸ್ಕರ್ ಪ್ರಸಾದ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ರಥಯಾತ್ರೆ ಸಂಚರಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಗೂ ಪ್ರವೇಶಿಸಿದೆ. ಒಳಮೀಸಲಾತಿ ವಿರೋಧಿಸುತ್ತಿರುವವರ ಹಿಂದಿರುವ ಹುನ್ನಾರಗಳನ್ನು ತಡೆಯಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿಗೆ ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಬೇಕು. ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಈಗ ಮತ್ತೆ ಜಾತಿ ಜನಗಣತಿ ವರದಿ ಅನುಷ್ಠಾನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಈಗಾಗಲೇ ಸುಮಾರು ವಿವಿಧ ಇಲಾಖೆಗಳ 36 ಸಾವಿರ ಹುದ್ದೆಗೆ ನೇಮಕಾತಿ ಹಾಗೂ 8 ಸಾವಿರ ಬಡ್ತಿ ನೀಡಲು ಮುಂದಾಗಿದೆ. ಒಳಮೀಸಲಾತಿ ನೀಡದೆ ಈ ಪ್ರಕ್ರಿಯೆ ಮಾಡಿದರೆ ಮಾದಿಗ ಸಮಾಜಕ್ಕೆ ತುಂಬ ಅನ್ಯಾಯವಾಗುತ್ತದೆ. ಮೀಸಲಾತಿ ಜಾರಿಗೆ ಅರ್ಥವೇ ಇರುವುದಿಲ್ಲ. ಸರ್ಕಾರ ಮೀನಮೇಷ ಮಾಡುವುದರಿಂದ ನಮ್ಮ ಸಮಾಜಕ್ಕೆ ತೀವ್ರ ಅನ್ಯಾಯವಾಗುತ್ತದೆ ಎಂದರು.

ಆದಿಜಾಂಬವ ಸಮಾಜದ ಪ್ರಮುಖರಾದ ರಘುರಾಜ್, ಎಲ್.ಬಿ.ಸುರೇಶ್, ಕೆ.ಅಣ್ಣಪ್ಪ , ನರಸಪ್ಪ, ಹನುಮಂತಪ್ಪ, ಹಾಲಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net