ಗಣೇಶೋತ್ಸವಕ್ಕೆ ಸರ್ಕಾರದಿಂದಲೇ ವಿಘ್ನ

vhp
ವಿಎಚ್‌ಪಿ ಮುಖಂಡರ ಜಿಲ್ಲಾ ಪ್ರವೇಶ ನಿಷೇಧ ಆದೇಶ ಹಿಂಪಡೆಯುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ವಿಎಚ್‌ಪಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಜೆ.ಆರ್.ವಾಸುದೇವ್, ವಡಿವೇಲು ರಾಘವನ್, ರಮೇಶ್‌ಬಾಬು, ಆನಂದರಾವ್ ಜಾದವ್ ಮುಂತಾದವರು ಪಾಲ್ಗೊಂಡಿದ್ದರು.
Published on

ಶಿವಮೊಗ್ಗ: ಗೌರಿ-ಗಣೇಶೋತ್ಸವ ಹಿಂದುಗಳ ಭಾವನಾತ್ಮಕ ಹಬ್ಬವಾಗಿದೆ. ಇದಕ್ಕೆ ಆಧ್ಯಾತ್ಮಿಕ ಹಿನ್ನೆಲೆಯೂ ಇದೆ. ಸ್ವಾತಂತ್ರೃಕ್ಕೂ ಮುನ್ನ ದೇಶಭಕ್ತರನ್ನು ಸಂಘಟಿಸಲು ಗಣೇಶ ಹಬ್ಬವನ್ನು ಸಾರ್ವಜನಿಕ ಹಬ್ಬವನ್ನಾಗಿ ಬಾಲಗಂಗಾಧರ ತಿಲಕ್ ಪರಿವರ್ತಿಸಿದ್ದರು. ಈ ಹಬ್ಬದ ಸಂಭ್ರಮಾಚರಣೆಗೆ ಸರ್ಕಾರ ಅಡ್ಡಿಪಡಿಸಬಾರದು ಮತ್ತು ವಿಶ್ವ ಹಿಂದು ಪರಿಷತ್ ನಾಯಕರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಬಾರದು ಎಂದು ಒತ್ತಾಯಿಸಿ ಬುಧವಾರ ಡಿಸಿಕಚೇರಿ ಎದುರು ವಿಹಿಂಪ ಪ್ರಮುಖರು ಪ್ರತಿಭಟನೆ ನಡೆಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ದಶಕಗಳಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ವಿಘ್ನವಿನಾಶಕನ ಉತ್ಸವಕ್ಕೆ ಅನೇಕ ನಿಯಮಗಳನ್ನು ಹಾಕಿ, ಭಕ್ತರ ಪಾಲಿಗೆ ವಿಘ್ನಗಳನ್ನೇ ಹೇರುತ್ತಿದೆ ಎಂದು ದೂರಿದರು.

ಮಂಡ್ಯ ಜಿಲ್ಲೆ ಮದ್ದೂರು, ಸಾಗರ ಸೇರಿದಂತೆ ಅನೇಕ ಸ್ಥಳಗಳಲ್ಲಿ ಗಣೇಶನ ಮೆರವಣಿಗೆ ವೇಳೆ ಅಹಿತಕರ ಘಟನೆಗಳು ನಡೆದಿವೆ. ಆದರೆ ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡಿಲ್ಲ. ವಿಎಚ್‌ಪಿಯ ಅನೇಕ ಮುಖಂಡರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಿರುವುದು ಸರಿಯಲ್ಲ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಗಣೇಶ ಉತ್ಸವ ಹಾಗೂ ಶೋಭಾಯಾತ್ರೆ ಸಂಭ್ರಮದಿಂದ ನಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡುವವರ ಮೇಲೆ ಸಂಘಟಿತ ಅಪರಾಧ ಕಾಯ್ದೆ ಅನ್ವಯ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಎಚ್‌ಪಿ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಕಾರ್ಯದರ್ಶಿ ಆನಂದ ರಾವ್ ಜಾಧವ್, ಬಜರಂಗದಳದ ವಡಿವೇಲು ರಾಘವನ್,ಪ್ರಮುಖರಾದ ರಮೇಶ್‌ಬಾಬು, ಸುರೇಶ್ ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net